ಬೆಸ್ಕಾಂಗೂ ದಂಡ ವಿಧಿಸಿದ ಬಿಬಿಎಂಪಿ

Update: 2019-07-19 17:30 GMT

ಬೆಂಗಳೂರು, ಜು.19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಗೆ (ಬೆಸ್ಕಾಂ) 25 ಲಕ್ಷ ರೂ. ದಂಡ ವಿಧಿಸಿದೆ.

ಮಾರತ್‌ಹಳ್ಳಿ ಪೊಲೀಸ್ ಠಾಣೆ ಬಳಿ ಹೊಸದಾಗಿ ಅಭಿವೃದ್ಧಿಪಡಿಸಿದ್ದ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಅಕ್ರಮವಾಗಿ ಅಗೆದು ಹಾಕಿದ್ದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಸಂಸ್ಥೆಯಾದ ಬೆಸ್ಕಾಂಗೆ 25 ಲಕ್ಷ ರೂ. ದಂಡ ವಿಧಿಸಿ, ಬಿಬಿಎಂಪಿ ಕ್ರಮ ಕೈಗೊಂಡಿದೆ.

ಈವರೆಗೆ ಅನುಮತಿ ಪಡೆಯದೆ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದ ಖಾಸಗಿ ಸಂಸ್ಥೆಗಳಿಗಷ್ಟೆ ದಂಡ ಹಾಕಲಾಗುತ್ತಿತ್ತು. ಅನುಮತಿ ಪಡೆಯದೆ ಅಕ್ರಮವಾಗಿ ರಸ್ತೆ ಅಗೆಯುವವರಿಗೆ ಕಡಿವಾಣ ಹಾಕಲು ಬಿಬಿಎಂಪಿ ತೀರ್ಮಾನಿಸಿದೆ. ಹೀಗಾಗಿ, ರಸ್ತೆ ಅಗೆದು ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಹೊರವರ್ತುಲ ರಸ್ತೆಯಲ್ಲಿ ಕೇಬಲ್ ಅಳವಡಿಕೆಗೆ ರಸ್ತೆಯನ್ನು ಅಗೆದಿರುವ ಬೆಸ್ಕಾಂಗೆ ದಂಡ ಹಾಕಿರುವುದನ್ನು ಪಾಲಿಕೆಯ ಮುಖ್ಯ ಎಂಜಿನಿಯರ್ (ರಸ್ತೆ ಮೂಲಭೂತ ಸೌಕರ್ಯ) ಎಸ್.ಸೋಮಶೇಖರ್ ಖಚಿತಪಡಿಸಿದ್ದಾರೆ.

ಬೆಸ್ಕಾಂ ಅಧಿಕಾರಿಗಳು ಅನುಮತಿ ಪಡೆದು ರಸ್ತೆ ಅಗೆದರೆ, ಕೆಲಸ ಪೂರ್ಣಗೊಂಡ ತಕ್ಷಣವೇ ಪಾಲಿಕೆಯು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಒಂದೊಮ್ಮೆ ಅನುಮತಿ ಪಡೆಯದೆ ರಸ್ತೆ ಅಗೆದರೆ ದುರಸ್ತಿಗೆ ತಗಲುವ ವೆಚ್ಚವನ್ನು ದಂಡದ ರೂಪದಲ್ಲಿ ಸಂಗ್ರಹಿಸಲು ಮತ್ತು ಎಫ್‌ಐಆರ್ ದಾಖಲಿಸಲು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಸೂಚಿಸಿದ್ದಾರೆ.

ಕೇವಲ 9 ತಿಂಗಳ ಹಿಂದೆ ಡಾಂಬರು ಹಾಕಿದ್ದ ರಸ್ತೆಯನ್ನು ಬೆಸ್ಕಾಂ ಅಗೆದು ಹಾಕಿದೆ. 500 ಮೀಟರ್ ಉದ್ದದಷ್ಟು ಫುಟ್‌ಪಾತ್ ಅನ್ನು ಕೂಡ ಹಾಳು ಮಾಡಲಾಗಿದೆ. ಹೊರವರ್ತುಲ ರಸ್ತೆಯ ದೇವರಬೀಸನಹಳ್ಳಿ ಮೇಲ್ಸೆತುವೆಯಿಂದ ಕಾಡುಬೀಸನಹಳ್ಳಿ ಅಂಡರ್‌ಪಾಸ್‌ವರೆಗೆ ರಸ್ತೆಯನ್ನು ಅಗೆದು ಹಾಕಲಾಗಿದೆ.

ನಗರದ ಬಹುತೇಕ ಕಡೆ ರಸ್ತೆಗಳನ್ನು ಅಕ್ರಮವಾಗಿ ಅಗೆದು ಹಾಕಲಾಗುತ್ತಿದೆ. ಹೆಣ್ಣೂರು ಮತ್ತು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಗಳಲ್ಲೂ ಅಗೆಯಲಾಗಿದೆ. ಇದರಿಂದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಅನುಮತಿ ಪಡೆಯದೆ ರಸ್ತೆ ಅಗೆಯುವವರಿಗೆ ಐದು ಪಟ್ಟು ದಂಡ ಹಾಕಬೇಕು.

-ಕೆ.ಬಿ.ರತ್ನಾಕರ ರೆಡ್ಡಿ, ಕೆಆರ್‌ಡಿಸಿಎಲ್‌ನ ಕನ್ಸಲ್ಟೆಂಟ್

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ 25 ಲಕ್ಷ ರೂ. ದಂಡ ಕಟ್ಟುವಂತೆ ಬೆಸ್ಕಾಂಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ರಸ್ತೆ ದುರಸ್ತಿಯ ವೆಚ್ಚ ಸೇರಿಸಿಲ್ಲ. ಪ್ರತ್ಯೇಕವಾಗಿ 4.70ಲಕ್ಷ ರೂ. ದುರಸ್ತಿ ವೆಚ್ಚವನ್ನು ಪಾವತಿಸುವಂತೆಯೂ ಸೂಚಿಸಲಾಗಿದೆ.

-ಸೋಮಶೇಖರ್, ಬಿಬಿಎಂಪಿ ಮುಖ್ಯ ಎಂಜಿನಿಯರ್ (ರಸ್ತೆ ಮೂಲಭೂತ ಸೌಕರ್ಯ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News