ರಾಜ್ಯದಲ್ಲಿ 16,838 ಸಾವಿರ ಪೊಲೀಸ್ ಹುದ್ದೆ ಖಾಲಿ ಇವೆ: ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಕೆ

Update: 2019-07-19 17:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.19: ನಾಲ್ಕು ವರ್ಷದಲ್ಲಿ ಸಬ್ ಇನ್ ಸ್ಪೆಕ್ಟರ್, ಪೊಲೀಸ್ ಕಾನ್‌ಸ್ಟೇಬಲ್ ಸೇರಿ ಒಟ್ಟು 4793 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 16,838 ಹುದ್ದೆಗಳು ಖಾಲಿ ಎಂದು ರಾಜ್ಯ ಸರಕಾರ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಸುಪ್ರೀಂಕೋರ್ಟ್‌ನ ತೀರ್ಪಿನ ಮೇರೆಗೆ ಸ್ವತಃ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ರಾಜ್ಯ ಸರಕಾರ ಪ್ರಮಾಣ ಪತ್ರ ಸಲ್ಲಿಸಿತು. ಪ್ರಮಾಣ ಪತ್ರದಲ್ಲಿ ಹೇಳಿರುವಂತೆ ಪೊಲೀಸ್ ಇಲಾಖೆಯಲ್ಲಿ 1502 ಪಿಎಸ್‌ಐ ಹಾಗೂ 15336 ಪಿಸಿ ಹುದ್ದೆಗಳು ಖಾಲಿ ಇವೆ. ಅದರಲ್ಲಿ 2018-19ನೆ ಸಾಲಿನಲ್ಲಿ 346 ಪಿಎಸ್‌ಐ ಮತ್ತು 5185 ಪಿಸಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ. 877 ಪಿಎಸ್‌ಐ ಹಾಗೂ 8000 ಸಾವಿರ ಹುದ್ದೆಗಳನ್ನು ತುಂಬಿಕೊಳ್ಳಲು ಆದೇಶ ಹೊರಡಿಸಿದೆ ಎಂದು ತಿಳಿಸಿದೆ.

ಸುಪ್ರೀಂಕೋರ್ಟ್ 2019ರ ಮಾ.11ರಂದು ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿ, ಹೈಕೋರ್ಟ್‌ಗಳು ನಿಗಾ ವಹಿಸುವಂತೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂ ಐಪಿಎಲ್ ದಾಖಲು ಮಾಡಿಕೊಂಡಿದೆ. ಬಹುತೇಕ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಭಾರಿ ಪ್ರಮಾಣದ ಹುದ್ದೆಗಳು ಖಾಲಿ ಇವೆ. ಹೀಗಾಗಿ, ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು 2013ರಲ್ಲಿ ಮನೀಶ್ ಕುಮಾರ್ ಎಂಬುವರು ಸಲ್ಲಿಸಿದ್ದ ಪಿಐಎಲ್ ಅನ್ನು ಸುಪ್ರೀಂಕೋರ್ಟ್ ಇತ್ಯರ್ಥಪಡಿಸಿ ಈ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News