'ಪ್ರಾಣ ಉಳಿಸಿದ ಪುಣ್ಯಕೋಟಿ' ಕೃತಿಯ ಕುರಿತು ಒಂದಿಷ್ಟು...

Update: 2019-07-20 14:20 GMT

ಬೆಂಗಳೂರಿನ ನೆಲಮಂಗಲದ ವಂಶಿ ಪಬ್ಲಿಕೇಶನ್ ಅವರು ಇತ್ತೀಚೆಗೆ ಹೊರತಂದ ಕೃತಿ ‘ಪ್ರಾಣ ಉಳಿಸಿದ ಪುಣ್ಯಕೋಟಿ’ ಹಸುವಿನ ಸಂಸರ್ಗದಿಂದ ತನಗೆ ಬಂದಿರುವ ಮಾರಕ ಕಾಯಿಲೆಯನ್ನು ಗುಣಪಡಿಸಿ ಕೊಂಡವರೊಬ್ಬರ ಮನಮಿಡಿದ ಆತ್ಮಕಥನ ಇದಾಗಿದೆ. ಗುಜರಾತ್ ಮೂಲತಃ ಅಮೆರಿಕದ ನಿವಾಸಿ ಅಮಿತ್ ವೈದ್ಯ ಎಂಬವರು ಇಂಗ್ಲಿಷಿನಲ್ಲಿ ಬರೆದ (‘Holy cancer: how a cow saved my life') ಎಂಬ ಆತ್ಮಕಥನವನ್ನು ಅದರ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಕನ್ನಡಕ್ಕೆ ಭಾಷಾಂತರಿಸಿದ ಲೇಖಕ ಜಿ.ಬಿ ಜಯಪ್ರಕಾಶ್ ನಾರಾಯಣ ಅವರು.

ಕ್ಯಾನ್ಸರ್ ರೋಗದ ಭಯಾನಕತೆ ಕುರಿತು ಅನೇಕ ಕೃತಿಗಳು ನಮ್ಮಲ್ಲಿ ಲಭ್ಯವಿದೆ. ಶುೃತಿ ಎಂಬಾಕೆ ಬರೆದಿರುವ ‘ಅಸ್ಟಿಯೋ ಸರ್ಕೋಮಾ’, ಹಿರಿಯ ಪತ್ರಕರ್ತ ಹಾಗೂ ವಿ. ಭಾರತಿ ಬರೆದ ‘ಸಾಸಿವೆ ತಂದವಳು’ ಅನಿತಾ ನೂರಾನಿಯವರ ‘ಡೈಯಿಂಗ್ ಟು ಬಿ ಮಿ’ ಹಾಗೂ ಸಿದ್ಧ್ದಾರ್ಥ ಚಟರ್ಜಿ ಬರೆದ ‘ದ ಎಂಪರಲ್ ಆಫ್ ಆಲ್ ಮ್ಯಾಲಡೀಸ್’ ಅವುಗಳಲ್ಲಿ ಕೆಲವು. ಮೇಲೆ ಹೆಸರಿಸಿದ ಆತ್ಮ ವೃತ್ತಾಂಶ ಇತ್ತೀಚಿಗೆ ಸೇರ್ಪಡೆ. ಅದಾಗಲೇ ಹೆತ್ತವರನ್ನು ಕಳೆದು ಕೊಂಡು ಯುವಾವವಸ್ಥೆಗೆ ಕಾಲಿಟ್ಟ ಅಮಿತ್ ವೈದ್ಯರಿಗೆ ಕ್ಯಾನ್ಸರ್ ಕಾಯಿಲೆ ಬಂದಾಗ ಮನಸ್ಸಿಗೆ ಆಘಾತವಾದರು ಧೈರ್ಯ ಕಳೆದು ಕೊಳ್ಳದೆ, ತನ್ನ ರೋಗದ ವಿರುದ್ಧ ಛಲದಿಂದ ಹೋರಾಟ ನಡೆಸಿ ಗೆಲುವು ಸಾಧಿಸಿದ ವಿವರಗಳು ಕೃತಿಯಲ್ಲಿವೆ. ಅವರ ತಾಯಿ ಹಾಗೂ ಅಜ್ಜಿ (ತಾಯಿಯ ತಾಯಿ) ಸತ್ತದ್ದು ಕೂಡಾ ಕ್ಯಾನ್ಸರ್‌ನಿಂದಲೇ. ಗುಜರಾತಿನ ಸೂರತ್‌ನಿಂದ 70 ಕಿ.ಮಿ ದೂರದಲ್ಲಿರುವ ಸೇವಕ ಗ್ರಾಮದ ಲಕ್ಷ್ಮೀ ಪ್ರಸಾದ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆ ಇದೆ ಎಂದು ತಿಳಿದ ಅವರು ಚಿಕಿತ್ಸೆ ಪಡೆಯಲು ಅಮೆರಿಕದಿಂದ ಭಾರತಕ್ಕೆ ಬಂದು ಬಿಡುತ್ತಾರೆ. ಅಮೆರಿಕದಲ್ಲಿ ಅವರು ಹುಟ್ಟಿ ಬೆಳೆದ ಕಾರಣ ಅವರಿಗೆ ಗುಜರಾತಿನ ಭಾಷೆ ಬಾರದು. ಸೇವಕ ಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದಾಗ ಅಲ್ಲಿ ವ್ಯವಹರಿಸಲು ಗುಜರಾತಿ ಭಾಷೆ ಬಾರದ ವೈಕಲ್ಯ ಒಂದಾದರೆ, ರೋಗಿಯಾದ ಅವರ ನೆರವಿಗೆ ಯರೂ ಸಿಗದಿರುವುದು ವರು ಎದುರಿಸಿದ ಇನ್ನೊಂದು ಹಿನ್ನಡೆ. ವಿಷಯ ತಿಳಿದು ಕೊನೆಯಲ್ಲಿ ಅವರ ನೆರವಿಗೆ ಬಂದವರು ವಯಸ್ಸಾದ ಅವರ ಸಪ್ನಾ ಚಿಕ್ಕಮ್ಮ ಹಾಗೂ ಸೋದರ ಸಂಬಂಧಿ ದೀನಾ, ಮೊನಾಲಿಸಾ ಮುಂತಾದವರು.

ಮುಂದಿನ ಹಂತ ಅಸ್ಪತ್ರೆಗೆ ಸೇರ್ಪಡೆಗೊಳ್ಳಲು ಅವರ ಸೇವಕ ಗ್ರಾಮಕ್ಕೆ ಪಯಣ. ಅಲ್ಲಿ ಹೋಗಿ ಲಕ್ಷ್ಮೀ ಪ್ರಸಾದ ಆಸ್ಪತ್ರೆಯ ಆಡಳಿತಾಧಿಕಾರಿ ಉಮೇಶ್ ಭಾಯಿಯವರೊಡನೆ ಮಾತುಕತೆ ನಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾತಿ. ಮಾನವೀಯ ನೆಲೆಯಲ್ಲಿ ಜೈನ ಸಮುದಾಯದವರ ಆಡಳಿತದಲ್ಲಿನ ಲಕ್ಷ್ಮೀಪ್ರಸಾದ ಅಸ್ಪತ್ರೆಯಲ್ಲಿ ದಾಖಲಾಗಲು ರೂಪಾಯಿ ಒಂದು ಮತ್ತು ಹನ್ನೊಂದು ದಿನಗಳ ಆರೈಕೆಗಾಗಿ ಒಂದು ಸಾವಿರ ರೂಪಾಯಿ ಪಾವತಿ ಮಾಡಿ ಅಮಿತ್ ವೈದ್ಯ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಆಸ್ಪತ್ರೆಯ ಹನ್ನೊಂದು ದಿನಗಳ ಔಷಧೋಪಚಾರ ಮುಗಿಸಿ ಆಸ್ಪತ್ರೆಯಿಂದ ಹೊರ ಬೀಳುವಾಗ ದಾಖಲಾತಿ ವೇಳೆ ನೀಡಲಾದ ರೂಪಾಯಿ ಒಂದು ಸಾವಿರ ಮರಳಿಸಲಾಗುತ್ತದೆ. ಇದು ಆಸ್ಪತ್ರೆಯ ನಿಯಮ. ಆಸ್ಪತ್ರೆಯ ಕಟ್ಟು ನಿಟ್ಟಿನ ಶಿಸ್ತಿನ ದಿನಚರಿಯೊಂದಿಗೆ ದೇಸಿ ಔಷಧೋಪಚಾರ, ಗುಜರಾತಿ ಭಾಷೆ ಅರಿಯದ ಅಮಿತ್ ವೈದ್ಯರಿಗೆ ಆಸ್ಪತ್ರೆಯ ಕಟ್ಟು ಪಾಡುಗಳನ್ನು ಇಂಗ್ಲಿಷ್‌ನಲ್ಲಿ ತಿಳಿ ಹೇಳಲು ಇಂಗ್ಲಿಷ್ ಬಲ್ಲ ಒಬ್ಬ ಸಹಾಯಕನನ್ನು ಉಮೇಶ್ ಭಾಯಿ ಅಮಿತ್ ವೈದ್ಯರಿಗೆ ಒದಗಿಸುತ್ತಾರೆ. ಉಮೇಶ್ ಭಾಯಿ ಸಹಿತ ಅಲ್ಲಿನ ಚಿಕಿತ್ಸೆಯ ಮೇಲ್ವಿಚಾರಕರಾದ ಡಾ.ಬಲ್ಸಾ ಹಾಗೂ ಇತರ ಸಿಬ್ಬಂದಿ ವರ್ಗದವರೆಲ್ಲ ಕ್ಯಾನ್ಸರ್ ಗುಣಪಡಿಸುವ ಕುರಿತು ಅಮಿತ್ ವೈದ್ಯರಿಗೆ ಭರವಸೆ ಕೊಡುತ್ತಾರೆ. ಯೋಗ, ಧ್ಯಾನಗಳ ಕುರಿತು ಮಾಹಿತಿ ನೀಡುವ ಫಾತಿಮಾ ದೀದಿ ಹಾಗೂ ರಮೇಶ್ ಭಾಯಿ ಮೊದಲಾದವರು ಅಮಿತ್ ವೈದ್ಯರಿಗೆ ಆತ್ಮೀಯರಾಗುತ್ತಾರೆ. ಮುಂದಿನ ಹಂತದ ಆಸ್ಪತ್ರೆಯ ಔಷಧೋಪಚಾರ. ಪ್ರತಿದಿನ ಬೆಳಗ್ಗೆ ನಸುಕಿನಲ್ಲಿ ಎದ್ದು ಹೊಟ್ಟೆ ತುಂಬಾ ನೀರು ಕುಡಿದು ಅದನ್ನು ವಾಂತಿ ಮಾಡುವ ಕುಂಜಲ ಕ್ರಿಯೆಯಿಂದ ದಿನಚರಿ ಪ್ರಾರಂಭ. ಅನಂತರ ಲೋಟ ತುಂಬಾ ಪಂಚಗವ್ಯ ಸೇವನೆ, ನಂತರದ್ದು ಯೋಗಾ ಪ್ರಾಣಾಯಾಮ ಧ್ಯಾನ ಇತ್ಯಾದಿ. ಆ ಮೇಲೆ ಬೆಳಗ್ಗಿನ ಪಥ್ಯದ ಉಪಾಹಾರ. ಉಳಿದಂತೆ ಆಸ್ಪತ್ರೆಯಲ್ಲಿ ವೈದ್ಯರಿಂದ ತಪಾಸಣೆ ಮತ್ತೆ ಸಾಯಂಕಾಲ ಬೆಳಗ್ಗಿನಂತೆ ಯೋಗ ಧ್ಯಾನ ಪ್ರಾಣಾಯಾಮಗಳು. ಇವುಗಳ ಜತೆಗೆ ಹಸುಗಳಿಗೆ ಬೆಲ್ಲ ಬೆರೆಸಿದ ಮೇವು ತಿನ್ನಿಸುವುದು. ಮೇವು ತಿನ್ನಿಸುತ್ತಾ ಅವು ಬೆಲ್ಲ ಮೆತ್ತಿದ ಕೈಯನ್ನು ಅವು ನೆಕ್ಕುವಂತೆ ಮಾಡುವುದು. ಇದು ಚಿಕಿತ್ಸೆಯ ಒಂದು ಭಾಗ. ಇದಲ್ಲದೆ, ದಿನದ ಎರಡೂ ಹೊತ್ತು ಮೈ ತುಂಬಾ ದನದ ಸೆಗಣಿ ಬಳಿದು ಅನಂತರ ಸ್ನಾನ ಮಾಡುವುದು ಇದು ಕ್ಯಾನ್ಸರ್ ರೋಗಗಳಿಗೆ ನೀಡಲಾಗುವ ಚಿಕಿತ್ಸಾ ವಿಧಾನ. ಹನ್ನೊಂದು ದಿನಗಳ ಚಿಕಿತ್ಸೆ ಮುಗಿಸಿದ ಅಮಿತ್ ವೈದ್ಯರಿಗೆ ತಾನು ಕ್ಯಾನ್ಸರ್ ನಿಂದ ಮುಕ್ತನಾಗುವ ಭರವಸೆ ಮೂಡುತ್ತದೆ. ಸ್ವ ಇಚ್ಛೆಯಿಂದ ಮತ್ತೂ ಕೆಲವು ದಿನಗಳ ಚಿಕಿತ್ಸೆಯನ್ನು ಆಡಳಿತದವರ ಅನುಮತಿ ಪಡೆದು ಇವರು ಪಡೆಯುತ್ತಾರೆ. ನಂತರ ಕಾಯಿಲೆಯಿಂದ ಗುಣ ಮುಖರಾಗಿ ಆಸ್ಪತ್ರೆಯಿಂದ ಹೊರಟು ನಿಂತ ಅಮಿತ್ ವೈದ್ಯರ ಅಫಿಡವಿಟ್ (Affidavit) ಮಾದರಿಯ ಅವರದೆ ಕೆಲವು ಮಾತುಗಳು ಇಲ್ಲಿವೆ. ‘‘2014ರ ಜುಲೈ ತಿಂಗಳಲ್ಲಿ ನಾನೊಂದು ಮೈಲಿಗಲಗಲ್ಲನ್ನು ತಲುಪಿದೆ. ಆವತ್ತು ನಾನು ನನ್ನ ಜೀವನ ಶೈಲಿಯನ್ನು ಮನಸಾರೆ ಒಪ್ಪಿಕೊಂಡೆ. ರೋಗದಿಂದ ಚೇತರಿಸಿಕೊಳ್ಳಲು ಅದೆಷ್ಟೋ ಸಂಗತಿಗಳು ಕಾರಣವಾಗಿದ್ದವು. ಮೊದಲೆಲ್ಲ ನಾನು ಛೀ ಇದೇನಿದು ಸಗಣಿ ಅಸಹ್ಯ ಪಡುತ್ತಿದ್ದೆ. ಆದರೆ ಆ ಸಗಣಿಯನ್ನು ಹಾಕುವ ಹಸುವೀಗ ನನ್ನ ಪಾಲಿಗೆ ಪುಣ್ಯಕೋಟಿಯಾಗಿ ಪವಿತ್ರವಾದ ಜೀವಿ’’ ಎನ್ನುವ ಇವರ ಮಾತುಗಳಲ್ಲಿ ತಪ್ಪೊಪ್ಪಿಗೆ ಭಾವನೆ ಓದುಗರಿಗೆ ಅರಿವಾಗುತ್ತದೆ. ಜತೆಗೆ ಕ್ಯಾನ್ಸರ್‌ಗೆ ಮಣಿಯದೇ ಕ್ಯಾನ್ಸರನ್ನೇ ಮಣಿಸಿದ ಅವರ ಹೋರಾಟದ ಕುರಿತು ಮೆಚ್ಚುಗೆಯೂ ಆಗುತ್ತದೆ. ಮನಸ್ಸಿದಲ್ಲಿ ಮಾರ್ಗ ಎನ್ನುವ ಮಾತಿಗೆ ಇವರ ಆತ್ಮಕಥನ ಸಾಕ್ಷಿ ಒದಗಿಸುತ್ತದೆ.

ತಾಳ್ಮೆಯಿಂದ ಓದಿದಾಗ ಕನ್ನಡದ ವೈದ್ಯಕೀಯ ಸಾಹಿತ್ಯಕ್ಕೆ ಇದೊಂದು ಉತ್ತಮ ಕೊಡುಗೆ ಎನ್ನುವ ಭಾವ ಮೂಡುತ್ತದೆ. ಅಪರೂಪದ ಈ ಕೃತಿಯನ್ನು ಪ್ರಕಟಿಸಿ ಕನ್ನಡಿಗರಿಗೆ ನೀಡಿದ ವಂಶಿ ಪಬ್ಲೀಕೇಶನ್ ಅವರಿಗೆ ಅಭಿನಂದನೆಗಳು ಸಲ್ಲಬೇಕು.

ಕನ್ನಡಕ್ಕೆ ಅನುವಾದ: ಬಿ.ಎಸ್. ಜಯಪ್ರಕಾಶ ನಾರಾಯಣ

Writer - ಕೆ ಶಾರದಾ ಭಟ್ ಉಡುಪಿ

contributor

Editor - ಕೆ ಶಾರದಾ ಭಟ್ ಉಡುಪಿ

contributor

Similar News