ಎಡ ಬಲ ಕಸರತ್ತು

Update: 2019-07-20 15:37 GMT

ಕಲಿಕೆಯೆಂಬ ಪ್ರಕ್ರಿಯೆ: ಭಾಗ-30

ಮೆದುಳಿಗೆ ಕಸರತ್ತು

ಬಲಗೈಯಲ್ಲಿ ಸದಾ ಕೆಲಸ ಮಾಡುವವರು ಎಡದ ಕೈಯಲ್ಲಿಯೂ ಅಭ್ಯಾಸಗಳನ್ನು ಮಾಡುವುದರಿಂದ, ಎಡಗೈಯಲ್ಲಿ ಸದಾ ಕೆಲಸ ಮಾಡುವವರು ಬಲದ ಕೈಯಲ್ಲಿಯೂ ಅಭ್ಯಾಸಗಳನ್ನು ಮಾಡುವುದರಿಂದ, ರೂಢಿಗೆ ತಳ್ಳಲ್ಪಟ್ಟಿರುವ ವರ್ತುಲದಿಂದ ಹೊರಬಂದು ಮೆದುಳಿಗೆ ಕೆಲಸ ಮಾಡಲು ಪ್ರೇರೇಪಣೆ ಸಿಗುತ್ತದೆ. ವಾಸ್ತವವಾಗಿ ರೂಢಿಗೆ ಅನುಗುಣವಾಗಿ ಕೆಲಸಗಳನ್ನು ಮಾಡುವಾಗ ಮೆದುಳಿಗೆ ಕಸರತ್ತೇನೂ ಆಗುವುದಿಲ್ಲ. ಹಾಗಾಗಿ ಬಹುಪಾಲು ಕ್ರಿಯಾಶೀಲತೆಯು ಮತ್ತು ಸೃಜನಶೀಲತೆಯು ಮಂಕಾಗುತ್ತಾ ಬರುತ್ತದೆ. ಹಾಗಾಗಿ ಮಕ್ಕಳ ವಿಷಯದಲ್ಲಿಯೂ ಕೂಡಾ ಜಾಗರೂಕತೆಯಿಂದ ಆಟದ ಮತ್ತು ತಮಾಷೆಯ ನೆಪದಲ್ಲಿ ಮೆದುಳಿಗೆ ಕಸರತ್ತು ಕೊಡುವಂತಹ ಯೋಜನೆಗಳನ್ನು ಮನೆಯಲ್ಲಿಯೂ ಮತ್ತು ಶಾಲೆಯಲ್ಲಿಯೂ ಹಿರಿಯರು ರೂಪಿಸುತ್ತಿರಬೇಕು.

ಸೃಜನಶೀಲತೆಗೆ ಆಸ್ಪದ ಕೊಡುವಂತೆ ಯಾವ ಬದಿಯ ಕೈಯಿಂದ ಬರೆಯುವ ರೂಢಿ ಇರುತ್ತದೆಯೋ ಅದರ ವಿರುದ್ಧವಾದ ಕೈಯಿಂದ ಕೆಲಸ ಮಾಡಲು ಹೋದಾಗ ಸಹಜವಾಗಿ ಎಚ್ಚರಿಕೆಯಿಂದ ಮತ್ತು ಪ್ರಜ್ಞಾಪೂರ್ವಕವಾಗಿ ಕೆಲಸವನ್ನು ಮಾಡಬೇಕಾಗುತ್ತದೆ. ಅದರಿಂದ ಮತ್ತೊಂದು ಕೈಯ ಬಲವನ್ನು ಕಂಡುಕೊಳ್ಳುವುದು ಮಾತ್ರವಲ್ಲ ಮೆದುಳಿನ ಮತ್ತೊಂದು ಬದಿಯ ಶಕ್ತಿಯ ಅನಾವರಣವೂ ಆಗುತ್ತದೆ.

ಕ್ಯಾಲೋಸಂ ಬಲವೃದ್ಧಿ

ಎರಡೂ ಕೈಗಳನ್ನು ಬಳಸಿ ಕೆಲಸ ಮಾಡುವಂತಹ ಸಂಗೀತಗಾರರು ಅಥವಾ ಇತರ ಕೆಲಸ ಮಾಡುವವರ ಮೆದುಳಿನ ಎಡ ಮತ್ತು ಬಲ ಭಾಗಗಳನ್ನು ಸೇರಿಸುವಂತಹ ಕ್ಯಾಲೋಸಂ ಎಂಬ ಭಾಗವು ಅತ್ಯಂತ ಸಮರ್ಪಕವಾಗಿ ಕೆಲಸ ಮಾಡುವುದು ಮತ್ತು ಅದರ ಕಾರ್ಯಕ್ಷಮತೆ ಉತ್ತಮಗೊಳ್ಳುವುದು ಎಂದು ಈ ವಿಷಯದಲ್ಲಿ ಸಂಶೋಧನೆಗಳನ್ನು ಮಾಡಿರುವಂತಹ ಹೇಲ್ ಎಂಬ ವಿಜ್ಞಾನಿಯು ಹೇಳುತ್ತಾರೆ. ಜೊತೆಗೆ ಅವರು ಇನ್ನೊಂದು ಮಾತನ್ನೂ ಸೇರಿಸುತ್ತಾರೆ. ಅದೇನೆಂದರೆ, ಕಲಿಕೆಯ ನ್ಯೂನತೆ ಅಥವಾ ನಿರ್ಗಲಿಕೆ ಅಥವಾ ಡಿಸೆಲೆಕ್ಸಿಯಾ ಇರುವಂತಹ ಮಕ್ಕಳಲ್ಲಿಯೂ ಕೂಡಾ ಇಂತಹ ತರಬೇತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು.

ಎಷ್ಟೋ ಜನರು ಗಂಟುಗಂಟಾದ ಉಲ್ಲನ್ ಉಂಡೆಯನ್ನೋ, ಅಥವಾ ಟ್ವೈನ್ (ಸೆಣಬು) ಹುರಿಯನ್ನು ಬಿಸಾಡಿಬಿಡುತ್ತಾರೆ. ಆದರೆ ಅವರು ತಮ್ಮನ್ನು ತಾವು ಪ್ರೇರೇಪಿಸಿಕೊಂಡು ನಿಧಾನವಾಗಿ ಕೈಗಳನ್ನು ಬಳಸಿಕೊಂಡು ಅವುಗಳನ್ನು ಬಿಡಿಸುವಂತಹ ಪ್ರಯತ್ನವನ್ನು ಮಾಡಬೇಕು. ಇದರಿಂದ ಎರಡೂ ಕೈಗಳಿಗೆ ಕೆಲಸ ಸಿಗುವುದಲ್ಲದೇ ತಾಳ್ಮೆ ಮತ್ತು ಗಮನಿಸಿ ನೋಡುವಂತಹ ಏಕಾಗ್ರತೆಯ ಬಲವೂ ಉದ್ದೀಪನಗೊಳ್ಳುವುದು. ಅಷ್ಟೇ ಅಲ್ಲ, ಯಾರಾದರೂ ತಮ್ಮಕೋಣೆಯಲ್ಲಿ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿಬಿಟ್ಟಿದ್ದರೆ, ಅಸ್ತವ್ಯಸ್ತವಾಗಿ ಬಿಡಿಸಿಟ್ಟಿದ್ದರೆ, ಮಕ್ಕಳಿಗೆ ತಮ್ಮ ಎರಡೂ ಕೈಗಳನ್ನು ಬಳಸಿ ನಿಧಾನವಾಗಿ ಆದರೆ ಎಚ್ಚರಿಕೆಯಿಂದ ವಸ್ತುಗಳನ್ನು ಸರಿಯಾಗಿ ಜೋಡಿಸಿಡುವಂತಹ ಕೆಲಸಗಳನ್ನು ಮಾಡಿಸಬೇಕು. ಗಮನಿಸಿ ನೋಡುವಂತಹ, ನಿಧಾನವಾಗಿ ಅಂದರೆ ಸೂಕ್ಷ್ಮವಾಗಿ ನೋಡಿ ಕೈಗಳನ್ನು ಉಪಯೋಗಿಸುತ್ತಾ ಕೆಲಸ ಮಾಡುವಂತಹ ಸಂದರ್ಭಗಳನ್ನು ಮಕ್ಕಳಿಗೆ ಸೃಷ್ಟಿಸಬೇಕು. ಆಗ ಅವರಿಗೆ ತಮ್ಮ ಕೆಲಸವನ್ನು ತಾವೇ ಮಾಡುವಂತಹ ರೂಢಿಯಾಗುವುದಲ್ಲದೇ, ಎಂಥದ್ದೇ ಕಷ್ಟದ ಕೆಲಸವಾದರೂ ಗೊಣಗದೇ, ಬೇಸರಿಸದೇ, ಕೋಪಿಸಿಕೊಳ್ಳದೇ ಅವುಗಳನ್ನು ಅಚ್ಚುಕಟ್ಟಾಗಿ ಮಾಡುವಂತಹ ಕಾರ್ಯಕ್ಷಮತೆ ಬೆಳೆಯುತ್ತದೆ. ಇದರಿಂದ ಬಹಳ ಮುಖ್ಯವಾಗಿ ಬೆಳೆದಾದ ಮೇಲೆ ಕೆಲಸಗಳ ಒತ್ತಡದಿಂದ ಖಿನ್ನತೆಗೆ ಅವರು ಜಾರುವುದಿಲ್ಲ. ನಾವು ಯಾವಾಗಲೂ ಮಕ್ಕಳಿಗೆ ಏನೇ ಕೆಲಸ ಮಾಡಿಸಿದರೂ ಅವರು ಅದನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಗಮನಿಸಬೇಕು. ಏಕೆಂದರೆ, ಅವನು ನಮ್ಮ ಒತ್ತಡಕ್ಕೆ ಮಾಡುತ್ತಿದ್ದರೆ ಮುಂದೆ ಅವರು ಖಂಡಿತ ಆ ಕೆಲಸವನ್ನು ಮುಂದೆ ಮಾಡುವುದಿಲ್ಲ. ತಾವೇ ಖುಷಿಯಿಂದ ಆ ಕೆಲಸ ಮಾಡೋಣ ಎಂದು ಬಂದರೆ ಖಂಡಿತವಾಗಿ ಮುಂದೆ ತಾವಾಗಿಯೇ ಆ ಕೆಲಸವನ್ನು ಮಾಡಿಕೊಂಡು ಹೋಗುವಷ್ಟು ಆಸಕ್ತಿಯನ್ನು ಗಳಿಸಿಕೊಳ್ಳುತ್ತಾರೆ. ಆಸಕ್ತಿ ಉಂಟಾದಾಗ ಆ ಶಕ್ತಿಯೂ ಉಂಟಾಗುತ್ತದೆ. ಕೆಲಸದಲ್ಲಿ ಸಾವಧಾನ, ಅಚ್ಚುಕಟ್ಟುತನ ಮತ್ತು ಫಲಿತಾಂಶವನ್ನು ಕಂಡುಕೊಳ್ಳಲು ಮಕ್ಕಳಿಗೆ ಪ್ರಾರಂಭದಿಂದಲೇ ತರಬೇತಿ ಕೊಡಬೇಕೆಂದರೆ ಅದು ಆಟಗಳ ರೂಪದಲ್ಲಿರುವ ಮೆದುಳಿಗೆ ಕಸರತ್ತು ಕೊಡುವಂತಹ ಸವಾಲುಗಳನ್ನು ಒಡ್ಡುತ್ತಿರಬೇಕು.

ತಾಳ್ಮೆಯೊಂದಿಗೆ ಅಚ್ಚುಕಟ್ಟು

ಮಕ್ಕಳು ಮೆದುಳಿಗೆ ಕಸರತ್ತು ನೀಡುವಂತಹ ಎಡ ಮತ್ತು ಬಲದ ಎರಡೂ ಕೈಗಳನ್ನು ಬಳಸಿ ಮಾಡುವಂತಹ ಸವಾಲುಗಳನ್ನು ಎದುರಿಸತೊಡಗಿದರೆ ತೆರೆದ ಮನ ಮತ್ತು ಮುಕ್ತ ಹೃದಯದಿಂದ ಸವಾಲುಗಳನ್ನು ಸ್ವೀಕರಿಸುವಂತಹ ಗುಣಗಳನ್ನೂ ಬೆಳೆಸಿಕೊಳ್ಳುತ್ತಾರೆ. ಯಾವುದೇ ಕೆಲಸದ ಯಶಸ್ವೀ ಫಲಿತಾಂಶಕ್ಕೆ ಇದು ಬಹಳ ಮುಖ್ಯ. ಅದು ಕಲಿಕೆಯ ವಿಷಯವಾಗಿರಬಹುದು, ಅಥವಾ ಇನ್ನಾವುದೇ ಕೆಲಸವನ್ನು ಮಾಡುವುದಾಗಿರಬಹುದು. ಮಕ್ಕಳ ಮೆದುಳಿಗೆ ಕಸರತ್ತು ಕೊಡುವಂತೆ ಎಡ ಬಲ ಕೈಗಳನ್ನು ಉಪಯೋಗಿಸುವುದು ಮಾತ್ರವಲ್ಲದೇ, ಅವರಲ್ಲಿ ಕಲ್ಪನೆಯನ್ನು ಬೆಳೆಸುವಂತಹ ಸನ್ನಿವೇಶಗಳನ್ನೂ ನಾವು ನಿರ್ಮಿಸಬೇಕು. ಏಕೆಂದರೆ ಕಲ್ಪನೆಗಳನ್ನು ಕಾಣುವುದು ಕೂಡಾ ಕ್ರಿಯಾಶೀಲತೆಯ ಮತ್ತು ಸೃಜನಶೀಲತೆಯ ಬಹುಮುಖ್ಯವಾದಂತಹ ವಿಷಯವಾಗುತ್ತದೆ.

ಕೆಲವು ಚಟುವಟಿಕೆಗಳು ನಮ್ಮ ರೂಢಿಗತ ಮೆದುಳಿನ ಮತ್ತೊಂದು ಭಾಗವನ್ನು ಬಳಸಲು ಮತ್ತು ಕ್ರಿಯಾಶೀಲವಾಗಿಸಲು ಸಹಾಯ ಮಾಡುತ್ತವೆ.

1.ಪ್ರತಿದಿನ ಯಾವ ಕೈಯಿಂದ ಹಲ್ಲನ್ನು ಉಜ್ಜುತ್ತಿರುತ್ತೇವೆಯೋ ಅದನ್ನು ಬಿಟ್ಟು ಮತ್ತೊಂದು ಕೈಯಿಂದ ಉಜ್ಜುವುದು.

2.ಕಂಪ್ಯೂಟರ್ ನಲ್ಲಿ ಕೆಲಸ ಮಾಡುವಾಗ ಬಲಗೈಯಲ್ಲಿ ಉಪಯೋಗಿಸುವ ವೌಸನ್ನು ಎಡಗೈಯಲ್ಲಿ ಬಳಸುವುದು.

3.ಬಲಗೈಯಲ್ಲಿ ಬರೆಯುವ ಬದಲು ಎಡಗೈಯಲ್ಲಿ ಬರೆಯುವುದು, ಆಹಾರ ಸೇವಿಸುವುದು.

4.ಹಿಂದು ಮುಂದಾಗಿ ಮೆಟ್ಟಿಲುಗಳನ್ನು ಹತ್ತುವುದು.

5.ಫುಟ್‌ಪಾತ್‌ನ ಅಂಚಿನ ಮೇಲೆ ಅಥವಾ ಪಾರ್ಕಿನಲ್ಲಿ ಸಣ್ಣ ಕಲ್ಲಿನ ಅಡ್ಡದ ಮೇಲೆ ಎಚ್ಚರಿಕೆಯಿಂದ ಕಾಲಿಟ್ಟುಕೊಂಡು ಬೀಳದಂತೆ ನಡೆಯುವುದು.

6.ಬಲಗೈಯ ಬದಲು ಎಡಗೈಯಿಂದ ಚಿತ್ರಗಳನ್ನು ಬಿಡಿಸಲು ಯತ್ನಿಸುವುದು.

7.ಹಿಂದುಮುಂದಾಗಿ ವರ್ಣಮಾಲೆಯನ್ನು, ಪದಗಳನ್ನು, ವಾಕ್ಯಗಳನ್ನು ಹೇಳುವುದು.

8.ಪದಗಳನ್ನು ಬಳಸಿಕೊಂಡು ಆಟಗಳನ್ನು ಆಡುವುದು. ಇಂಗ್ಲಿಷಲ್ಲಿ ಒಂದು ಪದದಲ್ಲಿರುವ ಅಕ್ಷರಗಳನ್ನು ಉಪಯೋಗಿಸಿಕೊಂಡು ಇತರ ಪದಗಳನ್ನು ಮಾಡುವುದು.

9.ಸಮಾನಾರ್ಥಕ ಪದಗಳನ್ನು, ವಿರುದ್ಧಾರ್ಥಕ ಪದಗಳನ್ನು, ಒಂದೇ ರೀತಿಯಾಗಿ ಧ್ವನಿಸುವ ಆದರೆ ಬೇರೆ ಅರ್ಥವಿರುವ ಪದಗಳನ್ನು ಗುರುತಿಸಿಕೊಂಡು ಬೇರೆ ಬೇರೆ ರೀತಿಯಾಗಿ ಬಳಸಿಕೊಂಡು ವಾಕ್ಯ ಸಂಯೋಜನೆ ಮಾಡುವುದು.

10.ಗಣಿತದಲ್ಲಿಯೂ ಇಂತಹ ಹಲವಾರು ಸಮಸ್ಯೆಗಳನ್ನು ಬುದ್ಧಿಯನ್ನು ಬಳಸಿಕೊಂಡು ಮಾಡುವಂತೆ ರೂಪಿಸುವುದು.

ಒಟ್ಟಾರೆ ಎಡ ಬಲವೆರಡನ್ನೂ ಬಳಸಿಕೊಂಡು ರೂಢಿಯನ್ನು ಮುರಿಯುವಂತಹ ಕಸರತ್ತಿನ ಆಟಗಳು ಮೆದುಳಿನ ಕಾರ್ಯಕ್ಷಮತೆಯನ್ನು, ಕ್ರಿಯಾಶೀಲತೆಯನ್ನು ಮತ್ತು ಸೃಜನಶೀಲತೆಯನ್ನು ವೃದ್ಧಿಸುತ್ತದೆ. ಅದು ಮಕ್ಕಳಲ್ಲೇ ರೂಢಿಯಾದರೆ ಅವರು ಬೆಳೆದ ಮೇಲೂ ಕಾರ್ಯದೊತ್ತಡ ಮತ್ತು ಇತರ ಕ್ರಿಯಾಶೀಲತೆಗೆ ಸಂಬಂಧಿಸಿದಂತಹ ಸಮಸ್ಯೆಗಳಿಗೆ ಬಲಿಯಾಗುವುದಿಲ್ಲ. ಖಿನ್ನತೆಗೆ ಜಾರುವುದಿಲ್ಲ. ಕಲಿಕೆಯಲ್ಲಾಗಲಿ, ಕೆಲಸದಲ್ಲಾಗಲಿ ಅ್ಚುಕಟ್ಟುತನ ರೂಢಿಸಿಕೊಳ್ಳುವರು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News