ಪಿ.ವಿ. ಸಿಂಧು ಫೆನಲ್‌ಗೆ ಪ್ರವೇಶ

Update: 2019-07-20 17:44 GMT

ಹೊಸದಿಲ್ಲಿ, ಜು.20: ಭಾರತದ ಸ್ಟಾರ್ ಶಟ್ಲರ್ ಪಿ.ವಿ.ಸಿಂಧು ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಸಿಂಧು ಚೀನಾದ ಚೆನ್ ಯೂ ಫೆ ವಿರುದ್ಧ 21-19, 21-10 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ವಿಶ್ವದ ನಂ.5ನೇ ಆಟಗಾರ್ತಿ ಸಿಂಧು ರವಿವಾರ ನಡೆಯಲಿರುವ ಮಹಿಳೆಯರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.

ಚೆನ್ ವಿರುದ್ಧ 46 ನಿಮಿಷಗಳಲ್ಲಿ ಅಂತ್ಯಗೊಂಡ ಸೆಮಿ ಫೈನಲ್ ಸೆಣಸಾಟದಲ್ಲಿ ಸಿಂಧು ನೇರ ಗೇಮ್‌ಗಳಿಂದ ಜಯ ಸಾಧಿಸಿದರು. ಸಿಂಧು ಮೊದಲ ಗೇಮ್‌ನಲ್ಲಿ ನಿಧಾನಗತಿಯ ಆರಂಭ ಪಡೆದಿದ್ದರು. ಒಂದು ಹಂತದಲ್ಲಿ 14-18 ಅಂತರದಿಂದ ಹಿನ್ನಡೆಯನ್ನು ಕಂಡಿದ್ದರು. 26 ನಿಮಿಷಗಳಲ್ಲಿ ಮೊದಲ ಗೇಮ್‌ನ್ನು 21-19 ಅಂತರದಿಂದ ವಶಪಡಿಸಿಕೊಂಡರು. ಎರಡನೇ ಗೇಮ್‌ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿದ ಸಿಂಧು ಮಧ್ಯದ ವಿರಾಮದ ವೇಳೆ ಚೀನಾ ಎದುರಾಳಿ ವಿರುದ್ಧ 11-8 ಮುನ್ನಡೆ ಪಡೆದಿದ್ದರು. ಆ ನಂತರ ಹಿಂತಿರುಗಿ ನೋಡದ ಅವರು ಕೇವಲ 20 ನಿಮಿಷಗಳಲ್ಲಿ 2ನೇ ಗೇಮ್‌ನ್ನು 21-10 ಅಂತರದಿಂದ ಗೆದ್ದುಕೊಂಡರು.

ಈ ಗೆಲುವಿನೊಂದಿಗೆ ಸಿಂಧು ಈ ವರ್ಷ ಮೊದಲ ಬಾರಿ ಟೂರ್ನಿಯೊಂದರಲ್ಲಿ ಫೈನಲ್‌ಗೆ ತೇರ್ಗಡೆಯಾದ ಸಾಧನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News