ಪೇಸ್-ಡೇನಿಯಲ್ ಸೆಮಿ ಫೈನಲ್ ಗೆ

Update: 2019-07-20 17:49 GMT

ನ್ಯೂಪೋರ್ಟ್, ಜು.20: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ತನ್ನ ಜೊತೆಗಾರ ಮಾರ್ಕಸ್ ಡೇನಿಯಲ್ ಜೊತೆ ಎಟಿಪಿ ಹಾಲ್ ಆಫ್ ಫೇಮ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.

ತನ್ನ 46ನೇ ವಯಸ್ಸಿನಲ್ಲೂ ಉತ್ತಮ ಪ್ರದರ್ಶನ ತೋರಿದ ಪೇಸ್ ಹಾಗೂ ನ್ಯೂಝಿಲ್ಯಾಂಡ್‌ನ ಡೇನಿಯಲ್ ಆಸ್ಟ್ರೇಲಿಯ-ಸ್ವೀಡನ್‌ನ ಮ್ಯಾಥ್ಯೂ ಎಬ್ಡೆನ್ ಹಾಗೂ ರಾಬರ್ಟ್ ಲಿಂಡ್‌ಸ್ಟೆಟ್‌ರನ್ನು 6-4, 5-7, 14-12 ಅಂತರದಿಂದ ಮಣಿಸಿದರು.

1995ರಲ್ಲಿ ಹಾಲ್ ಆಫ್ ಫೇಮ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದ ಪೇಸ್ ಇದೀಗ ಎಟಿಪಿ ಟೂರ್ ಟೂರ್ನಿಯಲ್ಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ. 18 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ಪೇಸ್ ತನ್ನಲ್ಲಿನ್ನೂ ಸಾಕಷ್ಟು ಟೆನಿಸ್ ಬಾಕಿ ಇದೆ ಎಂದಿದ್ದಾರೆ.

‘‘ನನಗೆ ಟೆನಿಸ್‌ನಲ್ಲಿ ಸಾಕಷ್ಟು ಅನುಭವವಿದೆ. ಕಾಲುಗಳು ಗಟ್ಟಿಯಾಗಿವೆ. ಜ್ಞಾನವೂ ಇದೆ. ಸರಿಯಾದ ಡಬಲ್ಸ್ ಆಟಗಾರನನ್ನು ಪಡೆಯುವುದು ಅತ್ಯಂತ ಮುಖ್ಯವಾಗುತ್ತದೆ.ಹಳೆಯ ಆಟಗಾರರಿಂದ ಪಾಠ ಕಲಿಯಲು ಯತ್ನಿಸುತ್ತಿದ್ದೇನೆ. ಇದೀಗ ಯುವ ಆಟಗಾರರಿಂದಲೂ ಕಲಿಯಲು ಯತ್ನಿಸುತ್ತಿದ್ದೇನೆ’’ ಎಂದು ಎಟಿಪಿ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News