ಓಟಗಾರ್ತಿ ಸಂಜೀವನಿಗೆ 2 ವರ್ಷ ನಿಷೇಧ

Update: 2019-07-20 18:07 GMT

ಹೊಸದಿಲ್ಲಿ, ಜು.20: ಭಾರತದ ಲಾಂಗ್ ಡಿಸ್ಟೆನ್ಸ್ ರನ್ನರ್ ಸಂಜೀವನಿ ಜಾಧವ್ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ಅಂತರ್‌ರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಶನ್(ಐಎಎಎಫ್)ನಿಂದ ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳ ಗಾಗಿದ್ದಾರೆ.

  2 ಬಾರಿ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ಜಾಧವ್ ವಿರುದ್ಧ ನಿಷೇಧದ ಅವಧಿ(ಎರಡು ವರ್ಷಗಳು)ಜೂ.29, 2018ರಲ್ಲಿ ಆರಂಭವಾಗಲಿದೆ.

 ನಾಸಿಕ್ ಮೂಲದ ಅಥ್ಲೀಟ್ ಮೊದಲ ಬಾರಿ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿರುವ ಕಾರಣ ಎರಡು ವರ್ಷಗಳ ಅವಧಿಯ ಕನಿಷ್ಠ ಶಿಕ್ಷೆ ವಿಧಿಸಲಾಗಿದೆ. ಕ್ರೀಡಾಪಟು ಉದ್ದೇಶಪೂರ್ವಕವಾಗಿಯೇ ಉದ್ದೀಪನ ಮದ್ದು ಸೇವಿಸಿದ್ದಾರೆಯೇ, ಅಜಾಗರೂಕತೆಯಿಂದ ಅದು ಅವರ ಆಹಾರದೊಳಗೆ ಸೇರಿದೆಯೇ ಎಂದು ಅಂತಿಮ ನಿರ್ಣಯಕ್ಕೆ ಬರಲಾಗಿಲ್ಲ. ಜಾಧವ್ ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿರುವುದರಿಂದ ಬೆಂಗಳೂರಿನಲ್ಲಿ ನಡೆದ ಟಿಸಿಎಸ್ ವರ್ಲ್ಡ್ 10ಕೆ ಬಳಿಕ ಜಯಿಸಿರುವ ಎಲ್ಲ ಪದಕಗಳನ್ನು ಹಿಂಪಡೆಯಲಾಗಿದೆ. ಬೆಂಗಳೂರು ಸ್ಪರ್ಧೆಯ ವೇಳೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ)ಸಂಜೀವನಿ ಜಾಧವ್‌ರ ಮೂತ್ರ ಮಾದರಿಯನ್ನು ಸಂಗ್ರಹಿಸಿತ್ತು. ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಅಂತರ್-ರಾಜ್ಯ ಹಿರಿಯರ ಅಥ್ಲೆಟಿಕ್ಸ್ ಕೂಟದಲ್ಲಿ ಮತ್ತೊಮ್ಮೆ ಮಾದರಿ ಸಂಗ್ರಹಿಸಲಾಗಿತ್ತು. ಸಂಜೀವನಿ ಅಂತರ್-ರಾಜ್ಯ ಗುವಾಹಟಿ ಕ್ರೀಡಾಕೂಟ(5,000 ಮೀ. ಹಾಗೂ 10,000 ಮೀ. ಓಟ, ಎರಡರಲ್ಲೂ ಚಿನ್ನ), ಫೆಡರೇಶನ್ ಕಪ್, ಪಾಟಿಯಾಲ(10,000 ಮೀ.ನಲ್ಲಿ ಚಿನ್ನ ಹಾಗೂ 5,000 ಮೀ.ನಲ್ಲಿ ಕಂಚು) ಹಾಗೂ ದೋಹಾ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 10,000 ಓಟದಲ್ಲಿ ಜಯಿಸಿರುವ ಕಂಚಿನ ಪದಕವನ್ನು ಮುಟ್ಟುಗೋಲು ಹಾಕಲಾಗುತ್ತದೆ.

‘‘ನಾನು ಮುಗ್ದೆ. ನನ್ನ ಮೂತ್ರ ಮಾದರಿಯಲ್ಲಿ ಉದ್ದೀಪನಾ ಮದ್ದು ಅಂಶವನ್ನು ವಾಡಾ ಪತ್ತೆ ಹಚ್ಚಿದ ತಕ್ಷಣ ನನ್ನ ತಪ್ಪನ್ನು ಒಪ್ಪಿಕೊಂಡಿದ್ದೆ. ನಾನು ಸೇವಿಸುವ ಪೂರಕ ಆಹಾರದಲ್ಲಿ ನಿಷೇಧಿತ ಮದ್ದು ಹೇಗೆ ಸೇರಿದೆ ಎಂದು ನನಗೆ ಗೊತ್ತಿಲ್ಲ. ವಿಟಮಿನ್ ಆಹಾರದಲ್ಲ್ಲಿ ಕೇವಲ 00.2 ನ್ಯಾನೊ ಗ್ರಾಮ್ ಪತ್ತೆಯಾಗಿತ್ತು’’ ಎಂದು ಸಂಜೀವನಿ ಹೇಳಿದ್ದಾರೆ.

ಎರಡು ಪ್ರತ್ಯೇಕ ಡೋಪಿಂಗ್ ಪ್ರಕರಣಗಳಲ್ಲಿ 2019ರ ಸೀನಿಯರ್ ನ್ಯಾಶನಲ್ಸ್‌ನ ಬೆಳ್ಳಿ ಪದಕ ವಿಜೇತ ರಾಂಶದ್(102 ಕೆಜಿ)ಡೋಪಿಂಗ್ ಟೆಸ್ ್ಟನಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರು ತಾತ್ಕಾಲಿಕ ಅಮಾನತುಗೊಂಡಿದ್ದಾರೆ. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News