ಶಿವ ಥಾಪಗೆ ಒಲಿದ ಚಿನ್ನ

Update: 2019-07-20 18:22 GMT

ಹೊಸದಿಲ್ಲಿ, ಜು.20: ಕಝಕ್‌ಸ್ತಾನದಲ್ಲಿ ಶನಿವಾರ ನಡೆದ ಪ್ರೆಸಿಡೆಂಟ್ಸ್ ಕಪ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಭಾರತದ ಖ್ಯಾತ ಬಾಕ್ಸರ್ ಶಿವ ಥಾಪ ಚಿನ್ನದ ಪದಕ ಜಯಿಸಿದ್ದಾರೆ.

  ಹೊಸತಾಗಿ ಸೇರ್ಪಡೆಯಾಗಿರುವ ಒಲಿಂಪಿಕ್ಸ್ ವಿಭಾಗ 63 ಕೆಜಿಯಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿ ಸ್ಪರ್ಧಿಸಿರುವ ಥಾಪ ಫೈನಲ್‌ನಲ್ಲಿ ಕಝಕ್‌ಸ್ತಾನದ ಝಾಕಿರ್ ಸಫಿವುಲ್ಲಿನ್‌ರನ್ನು ಎದುರಿಸಿದರು. ಆದರೆ, ಎದುರಾಳಿ ಸಫಿವುಲ್ಲಿನ್‌ಗಾಯದ ಸಮಸ್ಯೆಯಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ಥಾಪಗೆ ಚಿನ್ನದ ಪದಕ ಒಲಿಯಿತು.

ಈ ವರ್ಷಾರಂಭದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್ ಸೆಮಿ ಫೈನಲ್‌ನಲ್ಲಿ ಥಾಪ ಸಫಿವುಲ್ಲಿನ್‌ಗೆ ಶರಣಾಗಿದ್ದರು. ಇದೇ ವೇಳೆ, ಮಹಿಳಾ ಬಾಕ್ಸರ್ ಪರ್ವೀನ್(60ಕೆಜಿ)ಕಝಕ್‌ಸ್ತಾನದ ರಿಮ್ಮಾ ವೊಲೊಸೆಂಕೊಗೆ ಶರಣಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

‘‘ಹೊಸ ತೂಕ ವಿಭಾಗ ಹೊಂದಿಕೊಳ್ಳಲು ಸುಲಭ. ನಾನು ಹೆಚ್ಚು ಕಷ್ಟ ಎದುರಿಸಲಿಲ್ಲ. ಸಾಮಾನ್ಯವಾಗಿ 64 ಕೆಜಿ ವಿಭಾಗದಿಂದ ಬರುವ ಬಾಕ್ಸರ್‌ಗಳು ಸವಾಲು ಎದುರಿಸುತ್ತಾರೆ’’ ಎಂದು ಥಾಪ ತಿಳಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಮನೀಶ್ ಕೌಶಿಕ್‌ಗೆ ಟ್ರಯಲ್ಸ್‌ನಲ್ಲಿ ಸೋತಿರುವ ಥಾಪ ಸೆಪ್ಟಂಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಪ್ರಸ್ತುತ ಚಾಂಪಿಯನ್‌ಶಿಪ್‌ನ ಸೆಮಿ ಫೈನಲ್‌ನಲ್ಲಿ ಥಾಪಾ ಕಿರ್ಗಿಸ್ತಾನದ ಅರ್ಗಾನ್ ಕದಿರಿಬೆಕುಲು ವಿರುದ್ಧ 4-1 ಅಂತರದಿಂದ ಜಯ ಸಾಧಿಸಿದರು. ‘‘ಶಿವ ಅವರ ಪಾಲಿಗೆ ಈ ಟೂರ್ನಿ ಯಶಸ್ವಿಯಾಗಿ ಪರಿಣಮಿಸಿದೆ. ಅವರು ಕೆಲವು ಬಲಿಷ್ಠ ಎದುರಾಳಿಗಳನ್ನು ಮಣಿಸಿದ್ದಾರೆ. ಅವರ ಪ್ರದರ್ಶನ ಪರಿಣಾಮಕಾರಿಯಾಗಿತ್ತು’’ ಎಂದು ಭಾರತದ ಉನ್ನತ ಪ್ರದರ್ಶನ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಹೇಳಿದ್ದಾರೆ.

ಇದಕ್ಕೂ ಮೊದಲು ಸೆಮಿ ಫೈನಲ್‌ನಲ್ಲಿ ಸೋತಿರುವ ಸ್ವೀಟಿ ಬೂರಾ(81ಕೆಜಿ) ಹಾಗೂ ದುರ್ಯೋಧನ್ ಸಿಂಗ್ ನೇಗಿ(69ಕೆಜಿ)ಕಂಚಿನ ಪದಕ ಜಯಿಸಿ ತಮ್ಮ ಅಭಿಯಾನ ಕೊನೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News