ಚರ್ಮದ ಮೇಲೆ ಗೋಚರಿಸುವ ಹೃದಯಾಘಾತದ ಈ ‘ಎಚ್ಚರಿಕೆ ಸಂಕೇತಗಳು’ ನಿಮಗೆ ಗೊತ್ತಿರಲಿ

Update: 2019-07-21 16:50 GMT

ಜಗತ್ತಿನಲ್ಲಿ ಸಂಭವಿಸುವ ಸಾವುಗಳ ಪೈಕಿ ಗರಿಷ್ಠ ಪ್ರಮಾಣದ ಸಾವುಗಳಿಗೆ ಹೃದ್ರೋಗಗಳು ಕಾರಣ ಎನ್ನುವುದು ನಿಮಗೆ ಗೊತ್ತೇ?, ಇದಕ್ಕೇನು ಕಾರಣ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ?.. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಜನರ ಆಹಾರ ಕ್ರಮ. ಇಂದು ಅನಾರೋಗ್ಯಕರ ಆಹಾರ ಸೇವನೆಯು ಹೆಚ್ಚಾಗಿರುವುದರಿಂದ ಹಲವಾರು ಜನರು ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ, ಬೊಜ್ಜು ಮತ್ತು ಹೃದಯಾಘಾತದ ಅಪಾಯ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಎರಡನೆಯ ಕಾರಣ,ಜನರು ಹೃದಯಾಘಾತದ ಲಕ್ಷಣಗಳನ್ನು ತಿಳಿದುಕೊಂಡಿರುವುದಿಲ್ಲ. ಈ ಲಕ್ಷಣಗಳನ್ನು ಗಮನಿಸಿದರೆ ಸಕಾಲದಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಸಂಭಾವ್ಯ ಅಪಾಯದಿಂದ ಪಾರಾಗಬಹುದು.

ಸಾಮಾನ್ಯವಾಗಿ ಜನರು ಹೃದಯಾಘಾತವು ಎದೆಯಲ್ಲಿ ತೀವ್ರ ನೋವಿನ ಲಕ್ಷಣವಷ್ಟೇ ಎಂದು ನಂಬಿರುತ್ತಾರೆ. ಆದರೆ ಹೃದಯಾಘಾತ ಸಂಭವಿಸುವ ಮೊದಲು ಕೆಲವು ಲಕ್ಷಣಗಳು/ಸಂಕೇತಗಳು ಪ್ರಕಟಗೊಳ್ಳುತ್ತವೆ ಮತ್ತು ಇದಕ್ಕೆ ನಾವು ಗಮನವನ್ನು ನೀಡುವುದಿಲ್ಲ ಎಂದರೆ ನಿಮಗೆ ಅಚ್ಚರಿಯಾದೀತು. ಗಂಭೀರ ಹೃದಯ ಸಮಸ್ಯೆಗಳು ಈ ಲಕ್ಷಣಗಳಿಗೆ ಕಾರಣವಾಗಿರಬಹುದು ಅಥವಾ ಶೀಘ್ರವೇ ನಿಮ್ಮ ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸಬಹುದು,ಅಂದರೆ ನಿಮಗೆ ಹೃದಯಾಘಾತವಾಗಬಹುದು ಎನ್ನುವುದನ್ನೂ ಈ ಲಕ್ಷಣಗಳು ಸೂಚಿಸುತ್ತವೆ.

ಹೃದಯಾಘಾತ ಅಥವಾ ಹೃದ್ರೋಗಗಳಿಗೆ ಮುನ್ನ ನಮ್ಮ ಚರ್ಮದ ಮೇಲೂ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಲಕ್ಷಣಗಳನ್ನು ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಸಂಭಾವ್ಯ ಹೃದಯಾಘಾತದಿಂದ ಪಾರಾಗಬಹುದು. ಅಂತಹ ಕೆಲವು ಲಕ್ಷಣಗಳ ಕುರಿತು ಮಾಹಿತಿಯಿಲ್ಲಿದೆ.....

►ಹಳದಿ-ಬಿಳಿ ದದ್ದುಗಳು ಅಥವಾ ಮೇಣದಂತಹ ಚರ್ಮ

ಕೆಲವರ ಕಣ್ಣುಗಳ ಸಮೀಪ ಚರ್ಮವು ಮೇಣದಂತಾಗಿರುವುದನ್ನು ನೀವೆಂದಾದರೂ ಗಮನಿಸಿದ್ದೀರಾ? ಅದು ಕಣ್ಣಿನ ತೀರ ಸಮೀಪ ಹಳದಿ ಅಥವಾ ಬಿಳಿಬಣ್ಣದ ದದ್ದುಗಳ ರೂಪದಲ್ಲಿ ಇರಬಹುದು. ಇದು ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಕೆಲವರ ಕಣ್ಣುಗಳ ಬಳಿ ಚರ್ಮವು ಘನೀಕೃತಗೊಂಡ ಮೇಣದಂತೆ ಕಂಡುಬರುತ್ತದೆ. ಕಣ್ಣುಗಳಲ್ಲದೆ ಇಂತಹ ದದ್ದುಗಳು ಅಂಗೈಗಳ ಹಿಂಭಾಗ ಮತ್ತು ಕಾಲುಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಈ ಎಚ್ಚರಿಕೆಯ ಸಂಕೇತ ಲಭಿಸಿದ ಬಳಿಕವೂ ವ್ಯಕ್ತಿಯು ವೈದ್ಯರಿಂದ ಸೂಕ್ತ ಚಿಕಿತ್ಸೆಯ ಮೂಲಕ ತನ್ನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸದಿದ್ದರೆ ಹೃದಯಾಘಾತವುಂಟಾಗುವ ಅಪಾಯ ಹೆಚ್ಚುತ್ತದೆ.

►ಚರ್ಮದ ಮೇಲೆ ನೀಲಿ ಅಥವಾ ನೇರಳೆ ಬಣ್ಣದ ಗುರುತುಗಳು

ನಿಮ್ಮ ಶರೀರದ ಕೆಲವು ಭಾಗಗಳಲ್ಲಿ ಚರ್ಮದ ಬಣ್ಣದಲ್ಲಿ ದಿಢೀರ್ ಬದಲಾವಣಣೆ ಕಂಡು ಬಂದರೆ ಎಚ್ಚರಿಕೆಯಿಂದಿರಿ, ಏಕೆಂದರೆ ಅದು ಅನಾರೋಗ್ಯ ಪೀಡಿತ ಹೃದಯವನ್ನು ಸೂಚಿಸುತ್ತದೆ. ಈ ಲಕ್ಷಣವು ಹೆಚ್ಚಾಗಿ ನೀಲಿ ಅಥವಾ ನೇರಳೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಕಾಲುಗಳು ಮತ್ತು ಹಿಮ್ಮಡಿಗಳಲ್ಲಿಯೂ ಚರ್ಮದ ಬಣ್ಣದಲ್ಲಿ ಬದಲಾವಣೆಯು ಕಂಡುಬರುತ್ತದೆ. ಚರ್ಮದ ಮೇಲಿನ ನೀಲಿ ಅಥವಾ ನೇರಳೆ ಬಣ್ಣದ ಗುರುತು ನಿಮ್ಮ ಶರೀರದಲ್ಲಿ,ಯಾವುದೋ ನಿರ್ದಿಷ್ಟ ಅಂಗದಲ್ಲಿ ರಕ್ತವು ಘನೀಕೃತಗೊಂಡಿದೆ ಮತ್ತು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಅಪಧಮನಿಗಳಲ್ಲಿ ರಕ್ತವು ಸಂಗ್ರಹಗೊಳ್ಳುವುದರಿಂದ ಅವುಗಳಲ್ಲಿ ತಡೆಯು ನಿರ್ಮಾಣವಾಗುತ್ತದೆ ಮತ್ತು ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

►ಉಗುರುಗಳ ಕೆಳಗೆ ನೀಲಿ ಅಥವಾ ನೇರಳೆ ಬಣ್ಣದ ಗುರುತುಗಳು

ನಿಮ್ಮ ಉಗುರುಗಳ ಕೆಳಗೆ ದಿಢೀರಾಗಿ ನೀಲಿ ಅಥವ ನೇರಳೆ ಬಣ್ಣದ ಗುರುತುಗಳು ಕಾಣಿಸಿಕೊಂಡರೆ ಅದು ನೀವು ಎಚ್ಚರಿಕೆಯನ್ನು ವಹಿಸಲು ಸಕಾಲವಾಗಿದೆ. ಉಗುರುಗಳಲ್ಲಿ ಇಂತಹ ಗುರುತುಗಳು ಹೃದ್ರೋಗದ ಲಕ್ಷಣವಾಗಬಹುದು. ಗಾಯವಾದಾಗ ಕೂಡ ಇಂತಹ ಗುರುತುಗಳು ಕಂಡು ಬರುತ್ತವೆ. ಆದರೆ ಅಂತಹ ಸ್ಥಿತಿಯಿಲ್ಲದಿದ್ದಾಗಲೂ ಈ ಗುರುತುಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News