ಮೇಟ್ರೊದ 2.33 ಲಕ್ಷ ಟೋಕನ್ ನಾಪತ್ತೆ: ಆದರೂ ಬಿಎಂಆರ್‌ಸಿಎಲ್‌ ಗೆ ಇಲ್ಲ ನಷ್ಟ !

Update: 2019-07-21 16:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.21: ನಮ್ಮ ಮೆಟ್ರೊ ಆರಂಭ ಅದಾಗಿನಿಂದ ಇಲ್ಲಿಯವರೆಗೂ 2.33 ಲಕ್ಷ ಟೋಕನ್‌ಗಳನ್ನು ಕಳೆದುಕೊಂಡಿದೆ. ಆದರೆ ಇದರಿಂದ ನಷ್ಟವಾಗಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಟೋಕನ್ ಖರೀದಿಸಿ ಪ್ರಯಾಣಿಸಿದವರು ನಿರ್ಗಮನವಾಗುವಾಗ ಎಎಫ್‌ಸಿ ಗೇಟ್‌ನಲ್ಲಿ ಅದನ್ನು ಹಾಕಬೇಕಾಗುತ್ತದೆ. ಟೋಕನ್ ಇಲ್ಲದಿದ್ದರೆ ಸಿಬ್ಬಂದಿ ದಂಡ ವಿಧಿಸುತ್ತಾರೆ. ಅನೇಕರು ಬೇಕೆಂದೇ ಹೆಚ್ಚುವರಿ ಟೋಕನ್ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದುವರೆಗೆ 2,33,207 ಟೋಕನ್‌ಗಳು ಕಾಣೆಯಾಗಿವೆ.

ಒಂದು ಟೋಕನ್ ಉತ್ಪಾದನೆಗೆ 21.2 ರೂ. ಖರ್ಚಾಗುತ್ತದೆ. ಪ್ರಯಾಣಿಕನೊಬ್ಬ ಟೋಕನ್ ಖರೀದಿಸಿದರೆ ಅತಿ ಕಡಿಮೆ ಪ್ರಯಾಣಕ್ಕೆ ಕನಿಷ್ಠ 10 ರೂ. ನೀಡಬೇಕಾಗುತ್ತದೆ. ಆ ಪ್ರಯಾಣಿಕ ನಿರ್ಗಮನವಾಗುವಾಗ ಟೋಕನ್ ಇಲ್ಲದಿದ್ದರೆ 200 ರೂ. ದಂಡ ವಿಧಿಸಲಾಗುತ್ತದೆ. ಹೀಗಾಗಿ ಟೋಕನ್ ಕಾಣೆಯಾದರೆ ನಷ್ಟವಾಗುವುದಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.

2014-15ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಟೋಕನ್ ಕಳೆದುಕೊಂಡ ಪ್ರಯಾಣಿಕರಿಂದ 19 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 2018-19ನೇ ಸಾಲಿನಲ್ಲಿ 58,142 ಟೋಕನ್‌ಗಳು ಕಾಣೆಯಾಗಿವೆ. ಪ್ರತಿ ದಿನ 3.80-4 ಲಕ್ಷ ಮಂದಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಪೈಕಿ ಶೇ.59ರಷ್ಟು ಮಂದಿ ಸ್ಮಾರ್ಟ್ ಕಾರ್ಡ್ ಬಳಕೆದಾರರಾಗಿದ್ದಾರೆ.

ಕೆಲ ಪ್ರಯಾಣಿಕರು ಆಕರ್ಷಣೆಯಿಂದಾಗಿ ಎರಡು, ಮೂರು ಟೋಕನ್ ಖರೀದಿಸುತ್ತಿದ್ದಾರೆ. ಅದರಲ್ಲೂ ಕುಟುಂಬ ಸಮೇತರಾಗಿ ಬಂದವರು ಮಕ್ಕಳಿಗೆ ಆಟವಾಡಲು ಟೋಕನ್ ಕೊಡಿಸುತ್ತಿದ್ದಾರೆ. ಪ್ರಯಾಣಿಕರು ಹೀಗೆ ಮಾಡಿದರೆ ನಿಗಮಕ್ಕೆ ನಷ್ಟವಾಗುವುದು ಖಂಡಿತ. ಟೋಕನ್ ಕಾಣೆಯಾದಾಗ ಪ್ರಯಾಣಿಕರ ಮೇಲೆ ದಂಡ ಹಾಕಿ ಟೋಕನ್ ನಷ್ಟಕ್ಕಿಂತ ಹೆಚ್ಚು ಹಣ ವಸೂಲಿ ಮಾಡಬಹುದು. ಆದರೆ ಎರಡೆರಡು ಟೋಕನ್ ಖರೀದಿಸಿ, ಒಂದು ಟೋಕನ್ ಜೇಬಿಗಿಳಿಸಿ ಮತ್ತೊಂದು ಟೋಕನ್ ಅನ್ನು ನಿರ್ಗಮನಕ್ಕಾಗಿ ಬಳಸಿದರೆ ಅಲ್ಲಿ ದಂಡ ವಿಧಿಸುವ ಅವಕಾಶವೇ ಸಿಬ್ಬಂದಿಗೆ ಸಿಗುವುದಿಲ್ಲ. ಪ್ರಯಾಣಿಕರು ಈ ತಂತ್ರ ಹೂಡುತ್ತಿರುವುದರಿಂದ ಮೆಟ್ರೊಗೆ ನಷ್ಟವಾಗುತ್ತಿದೆ.

ಜೂನ್‌ನಲ್ಲಿ 1,17,08,076 ಮಂದಿ ಮೆಟ್ರೊದಲ್ಲಿ ಪ್ರಯಾಣಿಸಿದ್ದು, 32,14, 94,266 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ನೇರಳೆ ಮಾರ್ಗದಲ್ಲಿ ಶೇ.61.30 ಮಂದಿ ಸ್ಮಾರ್ಟ್ ಕಾರ್ಡ್ ಹಾಗೂ ಶೇ.54.62 ಮಂದಿ ಟೋಕನ್ ಬಳಸಿದ್ದಾರೆ. ಹಸಿರು ಮಾರ್ಗದಲ್ಲಿ ಶೇ.38.70 ಮಂದಿ ಸ್ಮಾರ್ಟ್ ಕಾರ್ಡ್ ಹಾಗೂ ಶೇ.45.38 ಮಂದಿ ಟೋಕನ್ ಬಳಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News