ಗುರಿ ಸಾಧನೆಗೆ ಯುವಕರಲ್ಲಿ ಶ್ರದ್ಧೆ, ಪರಿಶ್ರಮ ಅವಶ್ಯ: ಸಚಿವ ಕೃಷ್ಣಭೈರೇಗೌಡ

Update: 2019-07-21 17:09 GMT

ಬೆಂಗಳೂರು, ಜು.21: ಯುವ ಜನಾಂಗ ಶ್ರದ್ಧೆ, ಪರಿಶ್ರಮ ಅಳವಡಿಸಿಕೊಂಡರೆ ತಾವು ಅಂದುಕೊಂಡಿರುವ ಗುರಿಯನ್ನು ಸಾಧಿಸುತ್ತಾರೆ. ಹಾಗೆಯೇ ಈ ದೇಶವೂ ಅಭಿವೃದ್ಧಿ ಕಡೆಗೆ ಸಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. 

ರವಿವಾರ ವಸಂತನಗರದ ಕೆಕೆಎಂಪಿ ಮರಾಠ ಭವನದಲ್ಲಿ ವಿಜಯ್ ಭವಾನಿ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಛತ್ರಪತಿ ಶಿವಾಜಿ ಅವರ 392ನೆ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರತಿಭೆಯೊಂದಿದ್ದರೆ ಸಾಲದು, ಅದಕ್ಕೆ ಬೇಕಾದ ಪರಿಶ್ರಮ ಇದ್ದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ಮುಂದುವರಿದ ದೇಶಗಳಲ್ಲಿನ ಪ್ರಜೆಗಳಲ್ಲಿರುವ ಶ್ರದ್ಧೆಯಿಂದಲೇ ಆಯಾ ರಾಷ್ಟ್ರಗಳು ಕೂಡ ಮುಂದುವರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಯುವ ಜನಾಂಗ ತಮ್ಮ ಗುರಿಗಳನ್ನು ಛಲ ಬಿಡದಂತೆ ತಲುಪಿದಾಗ ವೈಯಕ್ತಿಕ ಸಾಧನೆ ಜತೆಗೆ ದೇಶ ಕೂಡ ಮುಂದುವರಿಯಲಿದೆ ಎಂದು ಸಲಹೆ ನೀಡಿದರು.

ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳವಣಿಗೆಯಾಗಲು ಇಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರ ಕೊಡುಗೆ ಇದೆ. ಬೆಂಗಳೂರಿಗೆ ವಲಸೆ ಬಂದಿರುವ ಹೊರ ರಾಜ್ಯಗಳ ಜನರು, ಭಾಷೆ, ಸಂಸ್ಕೃತಿ ಪ್ರತಿಯೊಬ್ಬರ ಒಂದಲ್ಲಾ ಒಂದು ಕೊಡುಗೆ ಇದ್ದೇ ಇದೆ. ಅದೇ ರೀತಿ ಶಿವಾಜಿ ಮಹಾರಾಜರ ವಂಶಸ್ಥರು ಕೂಡ ತನ್ನದೇ ಕೊಡುಗೆ ನೀಡಿದ್ದಾರೆ. ಹೀಗಾಗಿ, ಮರಾಠ ಸಮಾಜದ ಬೆಳವಣಿಗೆಗೆ ಸರಕಾರದ ವತಿಯಿಂದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಸಮಾಜದ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥ್ಥೆ ಮುಖ್ಯಸ್ಥ ಬಿ.ಆರ್. ಶ್ರೀನಿವಾಸ ರಾವ್ ಕಾಳೆ, ಖಜಾಂಚಿ ಬಿ.ವಿ. ಕೃಷ್ಣಾಜಿ ರಾವ್ ಕದಂ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News