ಜಾತ್ಯತೀತತೆ ಸಾರುವ ಕೃತಿಗಳು ಮೂಡಿಬರಲಿ: ಮನು ಬಳಿಗಾರ್

Update: 2019-07-21 17:13 GMT

ಬೆಂಗಳೂರು, ಜು. 21: ಜಾತ್ಯತೀತತೆ ಹಾಗೂ ಧರ್ಮ ಸೌರ್ಹಾದತೆಯನ್ನು ಸಾರುವಂತಹ ಕೃತಿಗಳು ಇಂದು ನಮಗೆ ಅವಶ್ಯಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅಭಿಪ್ರಾಯಪಟ್ಟರು.

ರವಿವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಹಾಗೂ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಯು.ಪಿ.ಪುರಾಣಿಕ್ ಬರೆದಿರುವ ‘ವಿಶ್ವಗುರು ಶ್ರೀ ರಾಘವೇಂದ್ರರು’ ‘ಯಾರಿಗೆ ಬೇಡ ದುಡ್ಡು’ ‘ಉಳಿತಾಯದ ಉಪಾಯಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಹಿಂದೂ ದೇವಾಲವೊಂದು ತನ್ನ ಗೋಪುರದ ಆಕೃತಿಯನ್ನು ಇಸ್ಲಾಂ ಧರ್ಮದ ಗುಂಬಜ್ ಪರಿಕಲ್ಪನೆಯಲ್ಲಿ ನಿರ್ಮಿಸಿಕೊಂಡಿದೆ. ಅಲ್ಲದೆ ಮಂತ್ರಾಲಯಕ್ಕೆ ಸ್ಥಳ ನೀಡಿದವರೂ ಮುಸ್ಲಿಮರೇ ಆಗಿದ್ದಾರೆ. ಬಾಬರಿ ಮಸೀದಿ ಪ್ರಕರಣದ ಹಿನ್ನೆಲೆಯಲ್ಲಿ ಇಂತಹ ವಿಷಯಗಳನ್ನು ಪ್ರಸ್ತುತ ಸಂದರ್ಭದಲ್ಲಿ ಅರಿಯಬೇಕಾದ ತುರ್ತು ಇದೆ ಎಂದು ಸಲಹೆ ನೀಡಿದರು.

ಜೀವನ ಮಾರ್ಗ ಕಂಡುಕೊಳ್ಳುವುದು ಅವರವರ ಆಯ್ಕೆಗೆ ಬಿಟ್ಟದ್ದು, ಯು.ಪಿ.ಪುರಾಣಿಕ್ ಅವರು ಇತಿಹಾಸದ ಸತ್ಯವನ್ನು ವಿಶ್ವಗುರು ರಾಘವೇಂದ್ರರು ಎಂಬ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ. ಧರ್ಮ- ಸೌಹಾರ್ದತೆ, ಜಾತಿ ನಡುವೆ ಕೊಂಡಿ ಬೆಸೆಯುವ ಕೆಲಸವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ. ದೇವರ ವಿಚಾರದಲ್ಲಿ ನಾವೆಲ್ಲ ಒಂದೇ ಆಗಿರಬೇಕು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ ಎಂದರು.

ಪತ್ರಕರ್ತ ರವೀಂದ್ರ ಭಟ್ ಮಾತನಾಡಿ, ಪುರಾಣಿಕ್‌ರ ‘ಉಳಿತಾಯದ ಉಪಾಯಗಳು’ ಪುಸ್ತಕ ಸಂಸಾರಿಗಳಿಗೆ ಹೆಚ್ಚು ಉಪಯುಕ್ತವಾಗಿದ್ದು, ಇಲ್ಲಿ ಯುವಕರು, ವಿದ್ಯಾರ್ಥಿಗಳು, ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ ವಿವಿಧ ಕ್ಷೇತ್ರದ ಜನರು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ, ಯಾವ ರಾಜಕಾರಣಿಯೂ ರೆಸಾರ್ಟ್‌ನಲ್ಲಿ ಸಮಯ ಕಳೆದ ಖರ್ಚು, ಚುನಾವಣೆಗೆ ಹಾಕಿದ ಬಂಡವಾಳದ ಹಿಂಪಡೆತ ಹಾಗೂ ಸಂಸಾರದ ಖರ್ಚಿನ ಲೆಕ್ಕಚಾರದ ಕುರಿತು ಪ್ರಶ್ನೆ ಕೇಳಲಿಲ್ಲ ಎಂದು ಚಟಾಕಿ ಹಾಕಿದರು.

ಪುರಾಣಿಕ್ ಆರ್ಥಿಕ ತಜ್ಞರ ರೀತಿ ಉತ್ತರ ನೀಡದೆ, ಅಂತಃಕರಣವಾಗಿ ಸ್ಪಂದಿಸುತ್ತಾರೆ. ಹೀಗಾಗಿ, ಆರ್ಥಿಕ ಗೊಂದಲ ಇರುವವರಿಗೆ ಚಿಕಿತ್ಸಾಕ ದೃಷ್ಠಿಯಿಂದ ಈ ಪುಸ್ತಕ ಉತ್ತಮವಾಗಿದೆ. ಅಲ್ಲದೆ, ಉಳಿತಾಯದ ಗುಣಗಳನ್ನು ಹೆಚ್ಚಿಸುವ ಅಂಶಗಳು ಪುಸ್ತಕದಲ್ಲಿ ಅಧಿಕವಾಗಿವೆ ಎಂದು ತಿಳಿಸಿದರು.

ಸಿಂಡಿಕೇಟ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಸಾಯಿರಾಮ ಹೆಗಡೆ ಮಾತನಾಡಿ, ‘ಯಾರಿಗೆ ಬೇಡ ದುಡ್ಡು’ ಕೃತಿಯಲ್ಲಿ ಬ್ಯಾಂಕುಗಳ ಆರಂಭದ ದಿನದ ಸವಾಲುಗಳು, ಸಾಧನೆಗಳು, ಸ್ವಾತಂತ್ರ ನಂತರ ರಾಷ್ಟ್ರೀಕರಣದ ಹಂತಗಳು ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಇದೆ. ಸಾಮಾನ್ಯ ಜನರಲ್ಲದೆ ಬ್ಯಾಂಕ್ ಉದ್ಯೋಗಿಗಳು ಓದಲೇ ಬೇಕು ಎಂಬಂತೆ ಸಮಗ್ರವಾದ ಅಂಶಗಳನ್ನು ಕೃತಿಯಲ್ಲಿ ತಿಳಿಸಲಾಗಿದ್ದು, ಇಂತಹ ಪುಸ್ತಕವನ್ನು ಮನೆಯಲ್ಲಿ ಇಟ್ಟುಕೊಂಡರೆ ಬ್ಯಾಂಕ್, ಷೇರು ಮಾರುಕಟ್ಟೆ ಸಂಬಂಧಿಸಿದ ಎಲ್ಲ ಅಂಶಗಳನ್ನು ತಿಳಿಯಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News