ಜು.27, 28ಕ್ಕೆ ದಕ್ಷಿಣ ಭಾರತ ಎನ್‌ಜಿಓಗಳ ಸಮಾವೇಶ: ಪ್ರೊ.ಅಶ್ರಫ್ ಅಲಿ

Update: 2019-07-21 17:15 GMT

ಬೆಂಗಳೂರು, ಜು.21: ಸಿಗ್ಮಾ ಫೌಂಡೇಷನ್ ಹಾಗೂ ಲೀಡ್ ಟ್ರಸ್ಟ್ ವತಿಯಿಂದ ಜು.27 ಹಾಗೂ 28ರಂದು ಬೆಂಗಳೂರಿನ ಕ್ಯಾನೋಪಿ ಹೊಟೇಲ್‌ನಲ್ಲಿ ದಕ್ಷಿಣ ಭಾರತ ಎನ್‌ಜಿಓಗಳ ಎಂಟನೇ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಲೀಡ್ ಟ್ರಸ್ಟ್ ಅಧ್ಯಕ್ಷ ಪ್ರೊ.ಅಶ್ರಫ್ ಅಲಿ ತಿಳಿಸಿದರು.

ನಗರದ ಬಸವಗುಡಿಯಲ್ಲಿರುವ ಸಿಗ್ಮಾ ಫೌಂಡೇಷನ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಎರಡು ದಿನಗಳ ಸಮಾವೇಶದಲ್ಲಿ ಸುಮಾರು 250 ರಿಂದ 300 ಎನ್‌ಜಿಓಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಈ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಎ.ಬಿ.ಇಬ್ರಾಹೀಮ್ ಅಡೂರ್, ಗೌರವಾನ್ವಿತ ಅತಿಥಿಗಳಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಇಸ್ಲಾಹುದ್ದೀನ್ ಗದ್ಯಾಲ್, ಸಿಲ್ವರ್‌ಲೈನ್ ರಿಯಾಲಿಟಿ ವ್ಯವಸ್ಥಾಪಕ ನಿರ್ದೇಶಕ ಫಾರೂಕ್ ಮುಹಮ್ಮದ್, ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಹುಸ್ನಾ ಶರೀಫ್, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ನಿಸಾರ್ ಅಹ್ಮದ್, ಪ್ರೆಸ್ಟಿಜ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಝಕರಿಯಾ ಹಾಶಿಮ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಸಿಗ್ಮಾ ಫೌಂಡೇಷನ್‌ನ ಸಿಇಓ ಅಮೀನ್ ಮುದಸ್ಸಿರ್ ಮಾತನಾಡಿ, 2016ರಿಂದ ನಾವು ಸೋಷಿಯಲ್ ಹೀರೊ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿದೆವು. ಈ ಬಾರಿ ಸೋಷಿಯಲ್ ಹೀರೊ, ಯಂಗ್ ಸೋಷಿಯಲ್ ಹೀರೊ ಹಾಗೂ ಮಾಡೆಲ್ ಎನ್‌ಜಿಓ ವಿಭಾಗದಡಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.

ಸೋಷಿಯಲ್ ಹೀರೊ ವಿಭಾಗದಡಿ ಕೇರಳ ರಾಜ್ಯದ ಸಿಫಿಯಾ ಹನೀಫ್, ಮೈಸೂರಿನ ಅಯ್ಯುಬ್ ಅಹ್ಮದ್ ಹಾಗೂ ಲಕ್ನೋವಿನ ಸಮೀನಾ ಬಾನು, ಯಂಗ್ ಸೋಷಿಯಲ್ ಹೀರೊ ವಿಭಾಗದಡಿ ಕೋಲ್ಕತ್ತಾದ ಉಮ್ಮೀದ್ ಸಂಸ್ಥೆಯ ಸಂಸ್ಥಾಪಕ ವಲಿ ರಹ್ಮಾನಿ ಹಾಗೂ ಮಾಡೆಲ್ ಎನ್‌ಜಿಓ ವಿಭಾಗದಡಿ ಮುಂಬೈನ ಸುನ್ನಿ ಮುಸ್ಲಿಮ್ ಚೋಟಾ ಖಬರಸ್ಥಾನ್ ಟ್ರಸ್ಟ್‌ನ ಲಂಗರೇ ರಸೂಲ್, ಹರಿಯಾಣದ ತರಖ್ಖೀ ಐ ಫೌಂಡೇಷನ್ ಹಾಗೂ ಹೈದರಾಬಾದ್‌ನ ಸಫಾ ಬೈತುಲ್‌ಮಾಲ್ ಸಂಘ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಸಕ್ತರಿರುವ ಸಂಘ ಸಂಸ್ಥೆಗಳು ಜು.24ರೊಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಶುಲ್ಕ 1800 ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 98455 67687, 98440 16821ಗೆ ಸಂಪರ್ಕಿಸಬಹುದಾಗಿದೆ ಎಂದು ಅಮೀನ್ ಮುದಸ್ಸಿರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಲೀಡ್ ಟ್ರಸ್ಟ್‌ನ ಸಂಯೋಜಕ ತನ್ವೀರ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News