ಬೆತ್ತಲೆಗೊಳಿಸಿ ಹಲ್ಲೆಗೈದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2019-07-21 17:17 GMT

ಬೆಂಗಳೂರು, ಜು.21: ಮಕ್ಕಳು ಮೊಬೈಲ್ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಅವರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿ ಅಮಾನವೀಯವಾಗಿ ವರ್ತಿಸಿದ್ದ ಆರೋಪದಡಿ ಇಬ್ಬರನ್ನು ನಗರದ ಶ್ರೀರಾಮಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಮನೋಜ್ ಹಾಗೂ ಆಟೊ ಚಾಲಕ ಆನಂದ್ ಬಂಧಿತ ಆರೋಪಿಗಳಾಗಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾದ ಜಾನ್ ಹಾಗೂ ವಿವೇಕ್ ಎಂಬುವರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಮಾಡಿರುವ ಆರೋಪಿಗಳೆಲ್ಲ ಶ್ರೀರಾಮಪುರದ ಓಕಳಿಪುರದಲ್ಲಿ ವಾಸವಾಗಿದ್ದರು. ಆರೋಪಿ ಜಾನ್ ಮನೆಯಲ್ಲಿ ಜು.16 ರಂದು ಮನೆಯಲ್ಲಿಟ್ಟಿದ್ದ ಸುಮಾರು 8 ಸಾವಿರ ರೂ. ಬೆಲೆಯ ಮೊಬೈಲ್ ಕಳ್ಳತನವಾಗಿತ್ತು. ಈ ವೇಳೆ ಮನೆ ಮುಂದೆ ಆಟ ಆಡುತ್ತಿದ್ದ ಐದಾರು ವರ್ಷದ ಮಕ್ಕಳ ಮೇಲೆ ಅನುಮಾನ ಪಟ್ಟಿದ್ದಾನೆ. ಅಲ್ಲದೆ, ಮಕ್ಕಳನ್ನು ಗದರಿಸಿ ಓಕಳಿಪುರದ ಆರ್.ಆರ್. ಕಲ್ಯಾಣ ಮಂಟಪದ ಹಿಂಭಾಗದ ಖಾಲಿ ಜಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. ಆತನೊಂದಿಗೆ ವಿವೇಕ್, ಮುರಳಿ ಮನೋಜ್ ಹಾಗೂ ಸ್ಥಳೀಯ ಆಟೊ ಚಾಲಕ ಆನಂದ್ ಎಂಬಾತನನ್ನು ಕರೆದುಕೊಂಡು ಹೋಗಿದ್ದ. ನಾಲ್ಕು ಮಕ್ಕಳ ಬಟ್ಟೆ ಬಿಚ್ಚಿಸಿ, ಅವರ ತಲೆ ಮೇಲೆ ಇಟ್ಟಿಗೆ ಇಟ್ಟು ಬೆದರಿಸಿದ್ದಾರೆ. ಕದ್ದ ಮೊಬೈಲ್ ಕೊಡುವಂತೆ ಕೋಲಿನಿಂದ ಮೈ-ಕೈ, ಕಾಲುಗಳಿಗೆ ಹೊಡೆದು ಅಮಾನವಿಯವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಸಂಬಂಧ ಮಕ್ಕಳ ಪೋಷಕರು ಶ್ರೀರಾಮಪುರ ಪೊಲೀಸರು ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News