ಒಕ್ಕಲಿಗ ಸಮುದಾಯ ಕೃಷಿಗೆ ಸೀಮಿತ ಆಗಕೂಡದು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

Update: 2019-07-21 17:27 GMT

ಬೆಂಗಳೂರು, ಜು.21: ಒಕ್ಕಲಿಗ ಸಮುದಾಯ ಕೇವಲ ಕೃಷಿಗೆ ಮಾತ್ರ ಸೀಮಿತವಾಗದೆ, ಎಲ್ಲ ಕ್ಷೇತ್ರಗಳಲ್ಲೂ ತೊಡಗಿಕೊಳ್ಳಬೇಕು ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

ರವಿವಾರ ನೇಗಿಲಯೋಗಿ ಸೇವಾ ಟ್ರಸ್ಟ್ ನಗರದ ಎಚ್.ನರಸಿಂಹಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ನೇಗಿಲಯೋಗಿ ಸೇವಾ ಟ್ರಸ್ಟ್‌ನ 10ನೆ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬಗಳು ಬೆಳೆಯುತ್ತಿದ್ದಂತೆ ಕುಟುಂಬದ ಸದಸ್ಯನಿಗೆ ದೊರಕುವ ಭೂಮಿ ಕಿರಿದಾಗುತ್ತಾ ಹೋಗುತ್ತದೆ. ಸಿಗುವ ಸಣ್ಣ ಪ್ರಮಾಣದ ಭೂಮಿಯಲ್ಲಿ ಕೃಷಿ ಮಾಡಿ ಕುಟುಂಬ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕುಟುಂಬದ ಸದಸ್ಯರು ಬೇರೆ, ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಹ ನೈಪೂಣ್ಯತೆಯನ್ನು ಗಳಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

ಇವತ್ತು ರೈತರು ಸಾಲ ಮಾಡಿ, ಅದನ್ನು ತೀರಿಸಲಾಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಸಾಲಮನ್ನಾ ಮಾಡುವುದೊಂದೆ ಪರಿಹಾರವಲ್ಲ. ರೈತರು ಬೆಳೆದ ಪದಾರ್ಥಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸುವುದು ಅಗತ್ಯವಿದೆ. ಹಾಗೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬೆಳೆಸಿಕೊಂಡು ಹೆಚ್ಚು ಇಳುವರಿ ಪಡೆಯುವಂತೆ ಸೂಕ್ತ ತರಬೇತಿ ನೀಡಬೇಕಾಗಿದೆ ಎಂದು ಅವರು ಅಭಿಪ್ರಾಯಿಸಿದರು.

ನಮ್ಮದು ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಮೂಲಭೂತ ಅಭಿವೃದ್ಧಿ ಸೇರಿದಂತೆ ಎಲ್ಲವನ್ನು ಸರಕಾರವೊಂದೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಂಘ, ಸಂಸ್ಥೆಗಳು ತಮ್ಮ ಸುತ್ತಮುತ್ತಲಿನ ಸಮಾಜದ ಸರ್ವತೋಮುಖ ಅಭಿವೃದ್ಧಿ ಮಾಡುವತ್ತ ಕಾರ್ಯಮಗ್ನವಾಗಬೇಕಾಗಿದೆ ಎಂದು ಅವರು ಹೇಳಿದರು.

ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಆಧುನಿಕ ಜಗತ್ತು ಶರವೇಗದಲ್ಲಿ ಬೆಳೆಯುತ್ತಿದೆ. ಒಕ್ಕಲಿಗ ಸಮುದಾಯ ಕೇವಲ ಕೃಷಿ ಭೂಮಿಗೆ ಮಾತ್ರ ಅಂಟಿಕೊಂಡು ಕೂರದೆ, ಎಲ್ಲ ಕ್ಷೇತ್ರದಲ್ಲೂ ಮುನ್ನೆಲೆಗೆ ಬರಬೇಕಾಗಿದೆ. ಆ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಜನರಕ್ ಔಷಧಿ ಮಳಿಗೆಗಳನ್ನು ಪ್ರಾರಂಭಿಸಿರುವುದು ಶ್ಲಾಘನೀಯ ವಾದದ್ದು. ಇದು ಹಳ್ಳಿಗಳಲ್ಲೂ ತೆರೆಯಬೇಕು. ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ರೈತರಿಗೆ ಸಕಾಲಿಕವಾಗಿ ಹಾಗೂ ಕಡಿಮೆ ದರದಲ್ಲಿ ಸಿಗುವಂತಹ ವ್ಯವಸ್ಥೆ ಮಾಡಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ನೇಗಿಲಯೋಗಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ರಾಮಯ್ಯ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್, ಆದಾಯ ತೆರಿಗೆ ಆಯುಕ್ತ ಜಯರಾಮ್ ರಾಯಪುರ, ಹಿರಿಯ ಸಾಹಿತಿ ಪ್ರೊ.ಜಯಪ್ರಕಾಶ್‌ಗೌಡ ಮತ್ತಿತರರಿದ್ದರು. ಈ ವೇಳೆ ಎಸೆಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News