ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡಿದೆ: ಶಾಸಕ ರೇಣುಕಾಚಾರ್ಯ
ಬೆಂಗಳೂರು, ಜು.21: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂತಿದೆ. ಸಚಿವ ಡಿ.ಕೆ ಶಿವಕುಮಾರ್ ನಾಟಕ ಆಡುತ್ತಿದ್ದಾರೆ ಎಂದು ದೋಸ್ತಿ ನಾಯಕರ ವಿರುದ್ಧ ಬಿಜೆಪಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ನಗರದ ರೆಸಾರ್ಟ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರಸ್ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ವಿಶ್ವಾಸ ಮತಯಾಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಕೆಲಸ ಆಗಿಲ್ಲ. ಇದು ಹೀಗೆ ಮುಂದುವರಿದರೆ ಮತ್ತೊಮ್ಮೆ ಇವರು ವಚನ ಭ್ರಷ್ಟರಾಗುತ್ತಾರೆ. ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂತಿದೆ. ಮೈತ್ರಿ ಉಳಿಸಲು ಡಿ.ಕೆ.ಶಿವಕುಮಾರ್ ನಾಟಕ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮನ್ನ ಪ್ರಚೋದನೆ ಮಾಡುವುದೇ ಮೈತ್ರಿ ಸರಕಾರದ ಉದ್ದೇಶವಾಗಿದೆ. ನಾವು ಶಿಸ್ತಿನಿಂದ ಇದ್ದೇವೆ. ನಾವು ಯಾವ ಅಧಿಕಾರಕ್ಕೂ ಅಂಟಿಕೊಂಡಿಲ್ಲ. ಸರಕಾರ ನಮ್ಮ ಅಪ್ಪನ ಆಸ್ತಿಯೂ ಅಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ ವಿಶ್ವಾಸ ಮತ ಯಾಚನೆ ಮಾಡುತ್ತಿಲ್ಲ. ಗೂಟ ಹೊಡೆದುಕೊಂಡು ಕೂತಿದ್ದೀರಾ? ಎಂದು ಪ್ರಶ್ನಿಸಿದರು. ಬಳಿಕ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದೀರಾ, ರಾಜೀನಾಮೆ ಕೊಟ್ಟುಹೊಗಿ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂಬೈನಲ್ಲಿರುವ ಶಾಸಕರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇವೆ ಎಂದು ಸ್ವತಃ ಹೇಳುತ್ತಿದ್ದಾರೆ. ಆದರೆ, ಡಿಕೆಶಿ ನಾಟಕ ಮಾಡುತ್ತಿದ್ದು, ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಮ್ಮಿಶ್ರ ಸರಕಾರಕ್ಕೆ ಸಂಖ್ಯಾಬಲವಿಲ್ಲ ಎಂದು ಗೊತ್ತಿದ್ದರೂ, ನಮ್ಮ ಮೇಲೆ ಆರೋಪಗಳು ಮಾಡುತ್ತಾ ಸದನದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದರು.