ಸಕ್ರಮ ಜಾನುವಾರು ಸಾಗಾಟಕ್ಕೆ ಮೊಬೈಲ್ ಆ್ಯಪ್

Update: 2019-07-22 09:30 GMT

ಮಂಗಳೂರು, ಜು.21: ಅಕ್ರಮ ಜಾನುವಾರು ಸಾಗಾಟ ಆರೋಪದ ಹೆಸರಲ್ಲಿ ಗುಂಪು ಹಲ್ಲೆ, ಥಳಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ರಮ ಜಾನುವಾರು ಸಾಗಾಟಗಾರರಿಗೆ ಸೂಕ್ತ ರಕ್ಷಣೆ ಕಲ್ಪಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಸಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುವವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ನೂತನ ಮೊಬೈಲ್ ಆ್ಯಪ್‌ವೊಂದನ್ನು ಆರಂಭಿಸುವ ಚಿಂತನೆ ಜಿಲ್ಲಾ ಮಟ್ಟದಲ್ಲಿ ನಡೆದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರು ಪೊಲೀಸ್ ಆಯುಕ್ತರು ಚರ್ಚೆ ನಡೆಸಿದ್ದು, ಶೀಘ್ರದಲ್ಲಿ ಮೊಬೈಲ್ ಆ್ಯಪ್ ಆಧರಿತ ಪರವಾನಿಗೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ದ.ಕ. ಜಿಲ್ಲೆಯನ್ನು ಸೌಹಾರ್ದ, ಕರಾವಳಿ ಸಂಸ್ಕೃತಿಯನ್ನು ಮರುಕಳಿಸುವಂತೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಲವು ಚಿಂತನೆಗಳು ಈಗಾಗಲೇ ಫಲ ಕೊಟ್ಟಿವೆ. ಈಗ ಮತ್ತೊಂದು ಸಮಸ್ಯೆಯಾದ ಅಕ್ರಮ ಜಾನುವಾರು ಸಾಗಾಟಕ್ಕೆ ಕಡಿವಾಣ ಬೀಳಲಿದೆ. ಈ ನಿಟ್ಟಿನಲ್ಲಿ ಮಹತ್ವದ ಸಮಾಲೋಚನೆ ನಡೆದಿದೆ. ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಈ ಆ್ಯಪ್ ಜನರ ಕೈಸೇರ ಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಜಿಲ್ಲೆಯಲ್ಲಿ ಬಿಗಡಾಯಿಸಿದ್ದ ಅಪರಾತ್ರಿ ನಡೆಯುತ್ತಿದ್ದ ಕ್ಲಬ್‌ಗಳಿಗೆ ಬೀಗ, ಮಸಾಜ್ ಪಾರ್ಲರ್‌ಗಳಿಗೆ, ಅಕ್ರಮ ಮರಳು ಸಾಗಾಟಕ್ಕೂ ಈಗ ಕಡಿವಾಣ ಬಿದ್ದಿದೆ. ಅದರಂತೆ ಜಿಲ್ಲೆಯಲ್ಲಿ ಜಾನುವಾರು ಸಾಗಾಟದ ಹೆಸರಲ್ಲಿ ಪ್ರತಿದಿನ ನಡೆಯುತ್ತಿರುವ ಹಲ್ಲೆ, ಗುಂಪು ಥಳಿತಗಳಿಗೆ ಈ ನೂತನ ಆ್ಯಪ್ ಜಾರಿಗೆ ತರುವ ಮೂಲಕ ನಾಂದಿ ಹಾಡಲು ಜಿಲ್ಲಾಡಳಿತ ಮುಂದಾಗಿದೆ.

ಹೇಗೆ ಕಾರ್ಯಾಚರಿಸಲಿದೆ ಆ್ಯಪ್: ವ್ಯಕ್ತಿಯೊಬ್ಬರು ದನವೊಂದನ್ನು ಖರೀದಿಸಬೇಕೆಂದರೆ ಜಾನುವಾರು ಮಾಲಕನ ಸ್ಥಳಕ್ಕೆ ಖುದ್ದು ತೆರಳಬೇಕು. ಜಾನುವಾರು ಖರೀದಿ ಮಾಡುವವರು ತಮ್ಮ ಹೆಸರು, ಮೊಬೈಲ್ ನಂಬರ್, ಗುರುತಿನ ಚೀಟಿ, ಫೋಟೊಗಳನ್ನು ಬಳಸಿಕೊಂಡು ಜಿಲ್ಲಾಡಳಿತ ಆರಂಭಿಸಿದ ಆ್ಯಪ್‌ನಲ್ಲಿ ವಿವರಗಳನ್ನು ದಾಖಲಿಸಬೇಕು. ಜತೆಗೆ ಜಾನುವಾರಗಳನ್ನು ಯಾರಿಂದ ಖರೀದಿ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನೂ ಆ್ಯಪ್‌ನಲ್ಲಿ ಉಲ್ಲೇಖಿಸಬೇಕು.

ಅಲ್ಲದೆ, ಜಾನುವಾರು ಮಾರುವವರೂ ಕೂಡ, ತಾವು ಯಾರಿಗೆ ಜಾನುವಾರುಗಳನ್ನು ಮಾರಾಟ ಮಾಡುತ್ತೇವೋ ಅವರ ಹೆಸರು, ವಿವರವನ್ನು ಆ್ಯಪ್‌ನಲ್ಲಿ ನಮೂದಿಸಬೇಕು. ಈ ಮಾಹಿತಿಯು ಅರ್ಜಿಯ ರೂಪದಲ್ಲಿರುತ್ತದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆ್ಯಪ್ ಕಾರ್ಯಾಚರಣೆ ನಡೆಯುತ್ತಿರುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಆ್ಯಪ್ ಮೂಲಕವೇ ಸ್ವೀಕೃತಿ ಬರಲಿದೆ. ಜಾನುವಾರು ಸಾಗಾಟಗಾರರು ಈ ಸ್ವೀಕೃತಿ ಪ್ರತಿ(ಪರವಾನಿಗೆ)ಯನ್ನು ಪ್ರಿಂಟ್ ಮಾಡಿಟ್ಟುಕೊಳ್ಳಬೇಕು. ಪೊಲೀಸ್ ಪರಿಶೀಲನೆಯ ವೇಳೆ ಇದನ್ನು ತೋರಿಸಿದರೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ.

ಒಂದು ವೇಳೆ ಅಕ್ರಮ ದನ ಸಾಗಾಟ ನಡೆಯುತ್ತಿರುವ ಬಗ್ಗೆ ಯಾವುದೇ ಅನುಮಾನ ಬಂದರೆ ಸಾರ್ವಜನಿಕರು 1077 ಸಹಾಯ ವಾಣಿಗೆ ಮಾಹಿತಿ ನೀಡಬೇಕು. ಆಗ ಸಂಬಂಧಪಟ್ಟ ಅಧಿಕಾರಿಗಳು ಆಯಾ ವ್ಯಾಪ್ತಿಯ ಪೊಲೀಸರಿಗೆ ಸಂದೇಶ ಕಳುಹಿಸುವರು. ಅದರಂತೆ ಕಾರ್ಯಾಚರಣೆ ನಡೆಯಲಿದೆ.

ಈ ನೂತನ ಮೊಬೈಲ್ ಆ್ಯಪ್ ಜಾರಿಯಿಂದ ಅಕ್ರಮ ದನ ಸಾಗಾಟಕ್ಕೆ ಕಡಿವಾಣ ಬೀಳಲಿದೆ. ಅದೇರೀತಿ ಅಕ್ರಮ ಸಾಗಾಟದ ಹೆಸರಿನಲ್ಲಿ ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪರಿಸ್ಥಿ ತಿಯೂ ನಿರ್ಮಾಣವಾಗದು ಎಂಬುದು ಜಿಲ್ಲಾಡಳಿತದ ವಿಶ್ವಾಸ.

ಈ ಆ್ಯಪ್ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News