ರಾಜೀನಾಮೆ ನೀಡಿದ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ: ಗೃಹ ಸಚಿವ ಪಾಟೀಲ್ ವಿರುದ್ಧ ಸ್ಪೀಕರ್ ಆಕ್ರೋಶ

Update: 2019-07-22 16:26 GMT

ಬೆಂಗಳೂರು, ಜು.22: ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ತೆರಳಿದ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಜೆಡಿಎಸ್ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತ ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ ರಾಜೀನಾಮೆ ನೀಡಿರುವ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿಕೊಟ್ಟ ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿದರು.

ಈ ವಿಚಾರದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸದನದಲ್ಲಿ ಉತ್ತರಿಸುವಂತೆ ಗೃಹ ಸಚಿವ ಎಂ.ಬಿ.ಪಾಟೀಲ್‌ಗೆ ಸ್ಪೀಕರ್ ಸೂಚನೆ ನೀಡಿದರು. ಅದರಂತೆ ಕೆಲ ಸಮಯದ ಬಳಿಕ ಈ ಸಂಬಂಧ ಉತ್ತರ ನೀಡಿದ ಎಂ.ಬಿ.ಪಾಟೀಲ್, ರಾಜ್ಯಪಾಲರು ರಾಜೀನಾಮೆ ನೀಡಿದ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸ್ ಆಯುಕ್ತರನ್ನು ಕರೆದು ನಿರ್ದೇಶನ ನೀಡಿದ್ದರು ಎಂದರು. ಅಲ್ಲದೆ, ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಬರೋಕೆ 45 ನಿಮಿಷ ಬೇಕು. ನನಗೆ ಇರುವ ಮಾಹಿತಿ ಪ್ರಕಾರ ರಾಜೀನಾಮೆ ನೀಡಿದ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕೊಟ್ಟಿರಲಿಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಸಚಿವರ ಉತ್ತರದಿಂದ ಆಕ್ರೋಶಗೊಂಡ ಸ್ಪೀಕರ್, ರಾಜೀನಾಮೆ ನೀಡಿದ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕೊಟ್ಟಿರುವುದನ್ನು ಇಡೀ ದೇಶವೇ ನೋಡಿದೆ. ನೀವು ಒಬ್ಬ ರಾಜಕಾರಣಿಯಾಗಿ ಅಲ್ಲ, ಒಬ್ಬ ಗೃಹ ಸಚಿವನಾಗಿ ಉತ್ತರ ಕೊಡುತ್ತಿದ್ದೀರಾ? ನೀವು ಕೊಟ್ಟಿರುವ ಉತ್ತರವನ್ನು ನಿಮ್ಮ ಆತ್ಮ ಸಾಕ್ಷಿ ಒಪ್ಪುತ್ತಾ? ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್, ಗೃಹ ಸಚಿವರು ತರಾತುರಿಯಲ್ಲಿ ಉತ್ತರ ನೀಡುವುದು ಬೇಡ. ಅವರು ಕೊಟ್ಟಿರುವ ಉತ್ತರವನ್ನು ಪುನರ್ ಪರಿಶೀಲಿಸಲಿ, ಆನಂತರ ಸರಿಯಾದ ಉತ್ತರವನ್ನು ಸದನಕ್ಕೆ ನೀಡಲಿ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ನಂತರ ಮಾತು ಮುಂದುವರೆಸಿದ ಸ್ಪೀಕರ್ ರಮೇಶ್ ಕುಮಾರ್, ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ನನಗೆ ಖಚಿತ ಮಾಹಿತಿಯಿದೆ. ಯಾವ ಘನ ಕಾರ್ಯಕ್ಕಾಗಿ ಅವರು ಹೋಗುತ್ತಿದ್ದರೆಂದು ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಗಾದರೆ ಯಾರು ಬೇಕಾದರೂ ಗೃಹ ಸಚಿವರಾಗಬಹುದೇ, ಯಾರಿಗೆ ಬೇಕಾದರೂ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಬಹುದೇ ಎಂದು ಪ್ರಶ್ನಿಸಿದರು.

ಈ ವಿಚಾರದ ಕುರಿತು ವಿಡಿಯೋ ತುಣುಕುಗಳನ್ನೆಲ್ಲ ಪರಿಶೀಲಿಸಿ ನಾನು ನಾಳೆ ಸದನದಲ್ಲಿ ಉತ್ತರ ಹೇಳುತ್ತೇನೆ ಎಂದು ಎಂ.ಬಿ.ಪಾಟೀಲ್ ಚರ್ಚೆಗೆ ತೆರೆ ಎಳೆದರು. ಆದರೂ, ನಂತರ ಮಾತನಾಡಿದ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ, ಗೃಹ ಸಚಿವರು ಈ ವಿಚಾರದಲ್ಲಿ ಹಸಿ ಸುಳ್ಳು ಹೇಳುತ್ತಿರುವುದನ್ನು ಕೇಳಿಕೊಂಡು ನಾವು ಈ ಸದನದಲ್ಲಿ ಕೂರಬೇಕೆ? ಹಾಗಿದ್ದಲ್ಲಿ ಒಂದು ಕ್ಷಣವು ನಾನು ಈ ಸದನದಲ್ಲಿ ಇರಲು ಬಯಸುವುದಿಲ್ಲ. ಅವರಿಗೆ ಝೀರೋ ಟ್ರಾಫಿಕ್ ನೀಡಿರುವುದು ಇಡೀ ರಾಜ್ಯ ನೋಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News