ನಗರಾಭಿವೃದ್ಧಿ ಇಲಾಖೆಯಿಂದ ಜಾಹೀರಾತು ನಿಯಮ ಕರಡು ತಯಾರು

Update: 2019-07-22 16:37 GMT

ಬೆಂಗಳೂರು, ಜು.22: ನಗರದ ಸಾರ್ವಜನಿಕ ಸ್ಥಳಗಳಲ್ಲಿ ವಾಣಿಜ್ಯ ಉದ್ದೇಶದ ಹೋರ್ಡಿಂಗ್‌ಗಳನ್ನು ಸಂಪೂರ್ಣ ನಿಷೇಧಿಸುವ ಸಂಬಂಧ ಬಿಬಿಎಂಪಿ ಕೈಗೊಂಡಿರುವ ನಿರ್ಣಯ ಬದಿಗೆ ಸರಿಸಿ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ ಜಾಹೀರಾತು ನಿಯಮಗಳು-2019 ಅನ್ನು ಜಾರಿಗೆ ತರಲು ಮುಂದಾಗಿದೆ.

ಹೈಕೋರ್ಟ್ ನಿರ್ದೇಶನದಂತೆ ಪಾಲಿಕೆಯು ಕಳೆದ ವರ್ಷ ಆಗಸ್ಟ್‌ನಲ್ಲಿ ನಗರದ ಎಲ್ಲೆಡೆ ಒಂದೇ ದಿನದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದ ಅನೇಕ ರೀತಿಯ ಜಾಹೀರಾತು ಫಲಕಗಳನ್ನು ತೆರವು ಮಾಡಲಾಗಿತ್ತು. ಆ ಬಳಿಕ ಬೈಲಾ ತಿದ್ಧುಪಡಿ ಮಾಡಿದ್ದ ಬಿಬಿಎಂಪಿಯು ಜಾಹೀರಾತುಗಳನ್ನು ನಿಷೇಧಿಸಲು ನಿರ್ಣಯ ಕೈಗೊಂಡಿತ್ತು. ಆದರೆ, ಇದೀಗ ನಗರಾಭಿವೃದ್ಧಿ ಇಲಾಖೆಯ ಜಾರಿಗೆ ಮುಂದಾಗಿರುವ ನಿಯಮಗಳಲ್ಲಿ ಈ ನಿರ್ಣಯದ ಪ್ರಸ್ತಾವವನ್ನೇ ಮಾಡಿಲ್ಲ.

ನಗರಾಭಿವೃದ್ಧಿ ಇಲಾಖೆ ಈಗಾಗಲೇ ಕರಡು ಸಿದ್ಧಪಡಿಸಿದ್ದು, ಅದರ ಪ್ರಕಾರ ನಗರದ ನೆಲದಲ್ಲಿ, ಚಾವಣಿಗಳ ಮೇಲೆ ಖಾಸಗಿ ಹೋರ್ಡಿಂಗ್‌ಗಳಿಗೆ ಹಾಗೂ ಬಿಲ್‌ಬೋರ್ಡ್‌ಗಳಿಗೆ ಅವಕಾಶ ಕಲ್ಪಿಸಿದೆ ಎಂದು ಮೂಲಗಳು ಹೇಳಿವೆ.

ಹಿನ್ನೆಲೆ ಏನು?: ನಗರದಲ್ಲಿ ಫ್ಲೆಕ್ಸ್ ಹಾಗೂ ಅನಧಿಕೃತ ಜಾಹೀರಾತು ಹಾವಳಿ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2018ರ ಆಗಸ್ಟ್ 1ರಂದು ಹೈಕೋರ್ಟ್ ವಿಚಾರಣೆ ನಡೆಸಿತ್ತು. ನಗರದಲ್ಲಿರುವ ಎಲ್ಲ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಅದೇ ದಿನ ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಅಂದಿನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಪಾಲಿಕೆಗೆ ಸೂಚನೆ ನೀಡಿದ್ದರು.

ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಸಮರೋಪಾದಿಯಲ್ಲಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಿದ್ದರಿಂದ ಒಂದೇ ದಿನದಲ್ಲಿ ನಗರ ಫ್ಲೆಕ್ಸ್, ಬ್ಯಾನರ್‌ಗಳಿಂದ ಮುಕ್ತವಾಗಿತ್ತು. ಅನಂತರ ಎಲ್ಲ ಜಾಹೀರಾತು ಫಲಕಗಳನ್ನು ತೆರವು ಮಾಡುವಂತೆಯೂ ಆದೇಶಿಸಿತು.

ಪಾಲಿಕೆಯು ಹೊರಾಂಗಣ ಸೈನೇಜ್ ಹಾಗೂ ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018 ರೂಪಿಸಿತು, ಆ.28 ರಂದು ಪಾಲಿಕೆ ಕೌನ್ಸಿಲ್ ಸಭೆ ಅನುಮೋದಿಸಿದ್ದು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೆ.11 ರಂದು ಅನುಮೋದನೆ ನೀಡಿದ್ದರು. ಸೆ.25ರಂದು ಬೈಲಾ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು.

ಅನಂತರ ಆಕ್ಷೇಪಣೆಗಳು, ಸಲಹೆಗಳು ಸೇರಿದಂತೆ 737 ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಲ್ಲವನ್ನೂ ಪಾಲಿಕೆ ಆಯುಕ್ತರು ಪರಿಶೀಲಿಸಿ, ಅಂತಿಮ ಅನುಮೋದನೆಗಾಗಿ ಬೈಲಾ ಕರಡನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದರು. ಇಲಾಖೆಯು ಈ ಸಂಬಂಧ ಸಂಸದೀಯ ವ್ಯವಹಾರಗಳ ಇಲಾಖೆಯ ಸಲಹೆ ಕೇಳಿತ್ತು. ಸಂಸದೀಯ ವ್ಯವಹಾರ ಇಲಾಖೆಯು ಈ ಕರಡು ದೋಷದಿಂದ ಕೂಡಿದ್ದು, ಅದನ್ನು ಪರಿಷ್ಕರಿಸಿ, ಸಾರ್ವಜನಿಕರ ಆಕ್ಷೇಪಣೆ ಹಾಗೂ ಸಲಹೆ ಮತ್ತೊಮ್ಮೆ ಆಹ್ವಾನಿಸಿ ಎಂದು ಸಲಹೆ ನೀಡಿತು. ಆದರೆ, ನಗರಾಭಿವೃದ್ಧಿ ಇಲಾಖೆ ಪಾಲಿಕೆ ನೀಡಿದ್ದ ಕರಡಿನಲ್ಲಿರುವ ಅಂಶಗಳನ್ನು ಕೈ ಬಿಟ್ಟು ಹೊಸ ಜಾಹೀರಾತು ನೀಡಿ ಕರಡು ರೂಪಿಸಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News