ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಆಗುವವರೆಗೆ 'ವಿಶ್ವಾಸಮತ' ಬೇಡ: ಶಾಸಕ ಶಿವಲಿಂಗೇಗೌಡ

Update: 2019-07-22 16:45 GMT

ಬೆಂಗಳೂರು, ಜು.22: ಇಬ್ಬರು ಪಕ್ಷೇತರ ಸದಸ್ಯರು ಇಂದೇ ವಿಶ್ವಾಸಮತ ಯಾಚನೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತೆಗೆದು ಪಕ್ಕಕ್ಕೆ ಇಟ್ಟು, ನಾಳೆ ವಿಚಾರಣೆ ಮಾಡುವಂತೆ ತಿಳಿಸಿದೆ. ಆದುದರಿಂದ, ಅವರ ಅರ್ಜಿ ವಿಚಾರಣೆ ಆಗುವವರೆಗೆ ವಿಶ್ವಾಸಮತ ಯಾಚನೆ ಮಾಡುವುದನ್ನು ಮುಂದೂಡುವಂತೆ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಮನವಿ ಮಾಡಿದರು.

ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ನಡೆಯುತ್ತಿದ್ದ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಶಿವಲಿಂಗೇಗೌಡ, ವಿರೋಧ ಪಕ್ಷದವರು ಈ ವಿಚಾರದಲ್ಲಿ ಯಾಕಿಷ್ಟು ಆತುರ ಪಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನಿರ್ಣಯವನ್ನು ಮಂಡಿಸಿ ಆಗಿದೆ. ಇಂದಲ್ಲ ನಾಳೆ ಅದನ್ನು ಮತಕ್ಕೆ ಹಾಕಲೇಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ನಾನು ಹಾಗೆ ಮಾಡಲು ಸಾಧ್ಯವಿಲ್ಲ. ಇಲ್ಲದಿದ್ದರೆ ಹೊರಗಡೆ ಜನ ನನ್ನನ್ನು ತಪ್ಪು ತಿಳಿದುಕೊಳ್ಳುತ್ತಾರೆ. ಕಾರ್ಯಕಲಾಪ ಪಟ್ಟಿಯಂತೆ ಇವತ್ತೆ ಇವತ್ತೇ ವಿಶ್ವಾಸಮತ ಯಾಚನೆಯ ಪ್ರಕ್ರಿಯೆ ನಡೆಯಬೇಕಿದೆ ಎಂದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಹಲವಾರು ಸದಸ್ಯರು ಎದ್ದು ನಿಂತು, ವಿಶ್ವಾಸಮತ ಯಾಚನೆಯ ನಿರ್ಣಯದ ಮೇಲೆ ನಾವು ಮಾತನಾಡಬೇಕಿದೆ. ನಮಗೂ ಅವಕಾಶ ಕಲ್ಪಿಸಿಕೊಡಿ, ನಮ್ಮ ಹಕ್ಕನ್ನು ಮೊಟಕುಗೊಳಿಸಬೇಡಿ ಎಂದು ಸ್ಪೀಕರ್‌ಗೆ ಮನವಿ ಮಾಡಿದರು.

ಅಲ್ಲದೇ, ಇದೇ ವೇಳೆ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿದ್ದರಿಂದ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಸದನವನ್ನು 10 ನಿಮಿಷ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News