ನನ್ನ ಸಹಿ ನಕಲಿ ಮಾಡಿ ರಾಜೀನಾಮೆ ಪತ್ರ ಸೃಷ್ಟಿ: ಸಿಎಂ ಕುಮಾರಸ್ವಾಮಿ

Update: 2019-07-22 16:59 GMT

ಬೆಂಗಳೂರು, ಜು.22: ನಾನು ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನನ್ನ ನಕಲಿ ಸಹಿಯುಳ್ಳ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಆಧರಿಸಿ ಸುದ್ದಿ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಎಷ್ಟೊಂದು ಕೀಳುಮಟ್ಟದ ರಾಜಕಾರಣ ನಡೆಯುತ್ತಿದೆ. ಒಬ್ಬ ಮುಖ್ಯಮಂತ್ರಿಯ ಸಹಿಯನ್ನೇ ನಕಲು ಮಾಡಿ ರಾಜೀನಾಮೆ ಪತ್ರ ಸೃಷ್ಟಿಸಲಾಗಿದೆ. ನಾನು ಮಂಡಿಸಿರುವ ವಿಶ್ವಾಸಮತ ಯಾಚನೆಯ ಪ್ರಸ್ತಾವನೆ ಹಾಗೂ ಇನ್ನಿತರ ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಲು ಸಮಯಾವಕಾಶ ಕೊಡುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.

ಇದೇ ಸದನದಲ್ಲಿ ಹಲವಾರು ವರ್ಷಗಳ ಹಿಂದೆ ಇದೇ ರೀತಿಯ ಪ್ರಕರಣ ನಡೆದಿತ್ತು. ಅವತ್ತಿನ ಸರಕಾರದಲ್ಲಿದ್ದ ಮುಖ್ಯಮಂತ್ರಿ ವಿರುದ್ಧ ಹೋಗಿದ್ದ ಶಾಸಕರು ಪುನಃ ಬಂದಿದ್ದರು. ಬಿಜೆಪಿ ಸದಸ್ಯ ಮಾಧುಸ್ವಾಮಿ ನಿಮ್ಮ(ಸ್ಪೀಕರ್)ಮೇಲೆ ಅಪಾರವಾದ ಗೌರವ, ಭಕ್ತಿಯಿದೆ ಎನ್ನುತ್ತಿದ್ದಾರೆ. ಆದರೆ, ರಾಜೀನಾಮೆ ನೀಡಿದ ಶಾಸಕರಿಗೆ ಪದೇ ಪದೇ ಸುಪ್ರೀಮ್‌ಕೋರ್ಟ್‌ಗೆ ಹೋಗೊಕೆ ಅವಕಾಶ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದರು.

ಶಾಸಕರು ಸುಪ್ರೀಮ್‌ ಕೋರ್ಟ್‌ಗೆ ಹೋಗುವ ಅಗತ್ಯವಿರಲಿಲ್ಲ. ಮೊನ್ನೆ ನಿಮ್ಮ ಸಲಹೆಯ ಮೇರೆಗೆ ಇವತ್ತು ಈ ಚರ್ಚೆಯನ್ನು ಮುಗಿಸೋಣ ಎಂದು ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ನಿಮ್ಮ ಸಲಹೆಗೆ ಒಪ್ಪಿಗೆ ಕೊಟ್ಟಿದ್ದೇವೆ. ಆದರೆ, ಇವತ್ತು ನ್ಯಾಯಾಲಯದಲ್ಲಿ ಇಬ್ಬರು ಸದಸ್ಯರು ಹೋಗಿ ಸಂಜೆ ಐದು ಗಂಟೆಯೊಳಗೆ ವಿಶ್ವಾಸಮತ ಯಾಚನೆಗೆ ನಿರ್ದೇಶನ ಕೋರಿ ಅರ್ಜಿ ಹಾಕಿದ್ದಾರೆ ಎಂದು ಅವರು ಹೇಳಿದರು.

ಪಕ್ಷೇತರ ಸದಸ್ಯರ ಅರ್ಜಿ ಕುರಿತು ಸುಪ್ರೀಮ್‌ಕೋರ್ಟ್ ಕೊಟ್ಟಿರುವ ತೀರ್ಮಾನ. ಹಲವಾರು ಶಾಸಕರು, ಸಚಿವರು ವಿಶ್ವಾಸಮತದ ಮೇಲೆ ಮಾತನಾಡಬೇಕಿದೆ. ಪುನರಾವರ್ತಿತ ವಿಷಯಗಳು ಬೇಡ, ಚರ್ಚೆಯಾಗಲಿ ನಾನು ಉತ್ತರ ಕೊಡಲು ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಜೆ.ಸಿ.ಮಾಧುಸ್ವಾಮಿ, ಇವತ್ತೇ ಈ ವಿಷಯವನ್ನು ಮುಗಿಸಿ ಆಗ ಎಲ್ಲರ ಗೌರವ ಉಳಿಯುತ್ತದೆ ಎಂದರು. ಇದರಿಂದ ಆಕ್ರೋಶಗೊಂಡ ಮುಖ್ಯಮಂತ್ರಿ, ಇವತ್ತೇ ತೀರ್ಮಾನ ಮಾಡಿದರೆ ಗೌರವ ಉಳಿಯುತ್ತದೆಯೇ, ಯಾವ ಗೌರವದ ಬಗ್ಗೆ ಹೇಳುತ್ತಿದ್ದೀರಾ. ಕಳೆದ 15 ದಿನಗಳಿಂದ ನಿಮ್ಮ ನಾಟಕ ನೋಡುತ್ತಿದ್ದೇವೆ. ನೀವು ಏನು ಮಾಡಲಿಲ್ಲವೇ ? ಬೆಳಗ್ಗೆ ಸಚಿವ ಕೃಷ್ಣಭೈರೇಗೌಡ ನಿಮ್ಮ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸುಪ್ರೀಂಕೋರ್ಟ್ ವಿಶ್ವಾಸಮತ ಯಾಚನೆಗೆ ತಡೆಯಾಜ್ಞೆ ನೀಡಿಲ್ಲ. ರಾತ್ರಿ 12 ಗಂಟೆಯಾಗಲಿ, ಒಂದು ಗಂಟೆಯಾಗಲಿ ಚರ್ಚೆ ಮುಂದುವರೆಯಲಿ ನಾವು ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News