ನಾನು ಜೆಡಿಎಸ್ ಬಿಟ್ಟಿರಲಿಲ್ಲ, ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು: ಸಿದ್ದರಾಮಯ್ಯ

Update: 2019-07-22 17:09 GMT

ಬೆಂಗಳೂರು, ಜು.22: ಬಿಜೆಪಿ ಸದಸ್ಯ ಸಿ.ಟಿ.ರವಿಗೆ ಸರಿಯಾದ ಮಾಹಿತಿ ಇಲ್ಲ. ನಾನು ಜೆಡಿಎಸ್ ಬಿಟ್ಟಿರಲಿಲ್ಲ, ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು. ಧರಂಸಿಂಗ್ ನೇತೃತ್ವದ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನದಿಂದಲೂ ನನ್ನನ್ನು ವಜಾ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಮಾತನಾಡಿದ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ, ಶಾಸಕರ ಕುದುರೆ ವ್ಯಾಪಾರದ ಕುರಿತು ಪ್ರಸ್ತಾಪಿಸಿದ ವೇಳೆ, ಬಿಜೆಪಿ ಸದಸ್ಯ ಸಿ.ಟಿ.ರವಿ ಎದ್ದುನಿಂತು, ಜೆಡಿಎಸ್ ಪಕ್ಷದಲ್ಲಿದ್ದ ಝಮೀರ್ ಅಹ್ಮದ್, ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಇನ್ನಿತರರನ್ನು ಕಾಂಗ್ರೆಸ್‌ಗೆ ಕರೆ ತಂದಿದ್ದು ನೈತಿಕತೆಯೇ ಎಂದು ಕಿಚಾಯಿಸಿದರು.

ಈ ವೇಳೆ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಮಾತನಾಡಿ, ಸರಕಾರ ಅಧಿಕಾರದಲ್ಲಿರುವಾಗ ಶಾಸಕರನ್ನು ಬೇರೆ ಪಕ್ಷಕ್ಕೆ ಕರೆ ತರಲಿಲ್ಲ. ಪಕ್ಷದಲ್ಲಿನ ಕೆಲ ಭಿನ್ನಾಭಿಪ್ರಾಯದಿಂದಾಗಿ ಚುನಾವಣೆ ಸಮೀಪಿಸಿದಾಗ ಅವರುಗಳು ಕಾಂಗ್ರೆಸ್‌ಗೆ ಹೋಗಿದ್ದಾರೆ. ಆದರೆ, ಇಲ್ಲಿ ಇನ್ನೂ ಮೂರು ಮುಕ್ಕಾಲು ವರ್ಷ ಸರಕಾರದ ಅವಧಿ ಇರುವಾಗಲೇ, ಶಾಸಕರಿಂದ ರಾಜೀನಾಮೆ ಕೊಡಿಸಿ, ಸರಕಾರವನ್ನು ಬೀಳಿಸಲು ಹೋಗುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಆಗ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಪಕ್ಷದಿಂದ ನನ್ನನ್ನು ಉಚ್ಚಾಟನೆ ಮಾಡುತ್ತಿದ್ದಂತೆ ನಾನು ಹೋಗಿ ಕಾಂಗ್ರೆಸ್ ಸೇರಿಲ್ಲ. ಒಂದು ವರ್ಷಗಳ ಕಾಲ ಅಹಿಂದ ಸಂಘಟನೆ ಮಾಡಿದೆ. 2005ರಲ್ಲಿ ನನ್ನನ್ನು ಉಚ್ಚಾಟನೆ ಮಾಡಲಾಯಿತು. 2006ರಲ್ಲಿ ನಾನು ಕಾಂಗ್ರೆಸ್ ನಾಯಕತ್ವದ ಆಹ್ವಾನದ ಮೇರೆಗೆ ಕಾಂಗ್ರೆಸ್ ಸೇರಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಯಾರಿಗೆ ಆಶೀರ್ವಾದ ಮಾಡುತ್ತಾರೋ ಅವರಿಗೆ ಅಧಿಕಾರ ಸಿಗುತ್ತದೆ. ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆ ಇಟ್ಟುಕೊಂಡಿರುವವನು ನಾನು. ಆದರೆ, ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಶಾಸಕರಿಗೆ ಒತ್ತಡ, ಅಧಿಕಾರ, ಹಣದ ಆಮಿಷವೊಡ್ಡಿ, ಮುಂಬೈನಲ್ಲಿ ಇರಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News