ರಾಜೀನಾಮೆ ಕೊಡಲು ಸಿದ್ಧವಾದ ಸ್ಪೀಕರ್ ರಮೇಶ್ ಕುಮಾರ್ ?

Update: 2019-07-22 18:01 GMT

ಬೆಂಗಳೂರು, ಜು.22: ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮತಕ್ಕೆ ಹಾಕಲು ಇನ್ನು ಕಾಲಾವಕಾಶ ನೀಡುವಂತೆ ಆಡಳಿತ ಪಕ್ಷದ ನಾಯಕರು ಮಾಡಿದ ಮನವಿಗೆ ಸ್ಪಂದಿಸದ ಸ್ಪೀಕರ್, ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ವಿಶ್ವಾಸಮತ ನಿರ್ಣಯದ ಚರ್ಚೆಯನ್ನು ಸೋಮವಾರ ಮುಗಿಸಿ ಮತಕ್ಕೆ ಹಾಕುವುದಾಗಿ ಶುಕ್ರವಾರ ಸ್ಪೀಕರ್ ಸದನದಲ್ಲಿ ರೂಲಿಂಗ್ ನೀಡಿದ್ದರು. ಅದರಂತೆ ಅವರು ಮತದಾನ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿಧಾನಸಭೆ ಸಚಿವಾಲಯದ ಸಿಬ್ಬಂದಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಆದರೆ, ಸಂಜೆ 6.25ಕ್ಕೆ ಸದನ ಮುಂದೂಡಲ್ಪಟ್ಟ ಸಂದರ್ಭದಲ್ಲಿ ಸ್ಪೀಕರ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸಮತದ ಮೇಲೆ ಚರ್ಚೆಗೆ ಇನ್ನೂ ಸಮಯ ಬೇಕಿರುವುದರಿಂದ, ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸದ ಸ್ಪೀಕರ್, ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಸದನದಲ್ಲಿ ಆಡಿದ ಮಾತಿಗೆ ನಾನು ಬದ್ಧ. ಮಾತು ತಪ್ಪುವ ಪರಿಸ್ಥಿತಿ ಬಂದರೆ, ನಾನು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಬರುತ್ತೇನೆಯೇ ಹೊರತು, ವಚನಭ್ರಷ್ಟ ಎಂಬ ಆಪಾದನೆಯನ್ನು ಹೊತ್ತುಕೊಳ್ಳಲು ಸಿದ್ಧನಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ನೀವು ಪೀಠದಿಂದ ಕೂತು ಸೋಮವಾರ ಚರ್ಚೆ ಮುಗಿಸುತ್ತೇನೆ ಎಂದು ಹೇಳಿದ್ರಿ. ಈಗ 11 ಗಂಟೆ ಆಗಿದೆ. ಇನ್ನೂ ಒಂದು ಗಂಟೆ ಸಮಯವಿದೆ. ಸುಮ್ಮನೆ ಚರ್ಚೆ ಮಾಡುತ್ತಿದ್ದರೆ ಏನು ಆಗುವುದಿಲ್ಲ. ಎಷ್ಟು ಹೊತ್ತು ಮಾತನಾಡುವುದು. ಇಲ್ಲ ಚರ್ಚೆ ಮುಗಿಸಿ, ಇಲ್ಲ ನಿಮ್ಮ ತೀರ್ಮಾನ ಮಾಡಿ ಎಂದು ಸದನದಲ್ಲಿ ಸ್ಪೀಕರ್‌ಗೆ ಸಚಿವ ಝಮೀರ್ ಅಹ್ಮದ್ ಖಾನ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News