BREAKING NEWS: ಬೆಂಗಳೂರಿನಾದ್ಯಂತ ಇಂದು 6 ಗಂಟೆಯಿಂದ ಸೆಕ್ಷನ್ 144 ಜಾರಿ

Update: 2019-07-23 13:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.23: ಇತ್ತೀಚಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜು.23ರ ಸಂಜೆ 5 ಗಂಟೆಯಿಂದ 48 ಗಂಟೆಗಳ ಕಾಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮದ್ಯದಂಗಡಿ, ಪಬ್‌ಗಳನ್ನು ಸಂಪೂರ್ಣ ಬಂದ್ ಮಾಡಲು ಸೂಚಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲೆಂದು ಐಪಿಸಿ 144ನೆ ಸೆಕ್ಷನ್ ಜಾರಿ ಮಾಡಿದ್ದು, ಎರಡು ದಿನ ನಿಷೇಧಾಜ್ಞೆ ಹಾಕಿದ್ದೇವೆ. ಕಾನೂನು ಭಂಗ ಮಾಡುವವರು ಯಾರೇ ಆಗಿದ್ದರೂ ಬಿಡುವುದಿಲ್ಲ. ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.

ಇಂದು ಸಂಜೆ 6 ಗಂಟೆಯಿಂದ ಗುರುವಾರ(ಜು.25) ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಅಷ್ಟೇ ಅಲ್ಲದೆ, ಎರಡು ದಿನಗಳ ಕಾಲ ನಗರದ ಎಲ್ಲ ಮದ್ಯದಂಗಡಿ, ಪಬ್, ಬಾರ್ ಬಂದ್ ಮಾಡಲಾಗುವುದು ಎಂದು ಅವರು ಹೇಳಿದರು.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನ ಸೌಧದ ಒಳಗಡೆ ಮತ್ತು ಹೊರಗಡೆ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ನಿಷೇಧಾಜ್ಞೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದು ನಿಷೇಧವಿದೆ ಎಂದು ಆಯುಕ್ತರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News