ರಾಜೀನಾಮೆ ನೀಡಿರುವ ಶಾಸಕರಿಗೆ ‘ವಿಪ್’ ನೀಡುವ ಅಧಿಕಾರವಿದೆ: ಸಿದ್ದರಾಮಯ್ಯ

Update: 2019-07-23 13:28 GMT

ಬೆಂಗಳೂರು, ಜು. 23: ‘ನಮ್ಮ ಪಕ್ಷದಿಂದ ಆಯ್ಕೆಯಾಗಿ ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್ ನೀಡುವ ಅಧಿಕಾರ ಇದೆ. ವಿಪ್ ನೀಡಬೇಡಿ ಎಂದು ಸುಪ್ರೀಂ ಕೋರ್ಟ್ ಎಲ್ಲಿಯೂ ಹೇಳಿಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲೆ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದ ವೇಳೆ ಬಿಜೆಪಿ ಸದಸ್ಯರ ಪ್ರತಿಕ್ರಿಯೆಗೆ ಮಧ್ಯಪ್ರವೇಶಿಸಿ ಉತ್ತರ ನೀಡಿದ ಸಿದ್ದರಾಮಯ್ಯ, ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಶಾಸಕರನ್ನು ಒತ್ತಾಯಿಸುವಂತಿಲ್ಲ ಎಂದು ಹೇಳಿದೆ. ಆದರೆ, ವಿಪ್ ನೀಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ವಿಪಕ್ಷ ನಾಯಕರು ಹೇಗೆ ಅರ್ಥೈಸಿಕೊಂಡಿದ್ದಾರೆಯೋ ಗೊತ್ತಿಲ್ಲ. ಆದರೆ, ನಾನು ಅರ್ಥೈಸಿಕೊಂಡಿರುವ ಪ್ರಕಾರ ಪಕ್ಷಾಂತರ ನಿಷೇಧ ಕಾಯ್ದೆಯ 10ನೆ ಶೆಡ್ಯೂಲ್ಡ್‌ನಲ್ಲಿ ಸ್ಪಷ್ಟವಾಗಿದೆ ಎಂದರು.

ವಿಪ್ ಉಲ್ಲಂಘನೆ ಮಾತ್ರವಲ್ಲ, ಬೇರೆ ಪಕ್ಷದ ಜತೆ ಗುರುತಿಸಿಕೊಂಡರೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅನರ್ಹ ಗೊಳಿಸಲು ಅವಕಾಶವಿದೆ. ಆದರೆ, ಬಿಜೆಪಿ ಮುಖಂಡರು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 15 ಮಂದಿ ಶಾಸಕರಿಗೆ ವಿಪ್ ನೀಡಬೇಡಿ ಎಂದು ಕೋರ್ಟ್ ಹೇಳಿಲ್ಲ. ಅಲ್ಲದೆ, ನಾನು ಎತ್ತಿದ ಕ್ರಿಯಾಲೋಪಕ್ಕೆ ಸ್ಪೀಕರ್ ರೂಲಿಂಗ್ ನೀಡಿದ್ದಾರೆ. ವಿಪಕ್ಷ ನೀಡುವ ಅಧಿಕಾರ ಪಕ್ಷದ ನಾಯಕರಿಗೆ ಇದೆ ಎಂದು ತಿಳಿಸಿದ್ದಾರೆ ಎಂದರು.

ಸಂವಿಧಾನಕ್ಕಿಂತ ಯಾರೂ ಮೇಲೆ ಅಲ್ಲ. ನಮ್ಮ ಪಕ್ಷದಿಂದ ಆಯ್ಕೆಯಾದ ಶಾಸಕರಿಗೆ ರಾಜೀನಾಮೆ ನೀಡಲು ಪ್ರೇರಣೆ ನೀಡಿ ಇದೀಗ ಅನರ್ಹಗೊಳಿಸಿ, ಅವರ ರಾಜಕೀಯ ಭವಿಷ್ಯವನ್ನೇ ಹಾಳು ಮಾಡಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕವಡೆ ಕಾಸಿನ ಕಿಮ್ಮತ್ತಿಲ್ಲ: ಆರಂಭಕ್ಕೆ ಮಾತನಾಡಿದ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಸುಪ್ರೀಂ ಕೋರ್ಟ್‌ನಲ್ಲಿ ಸರಕಾರದ ಪರ ವಕೀಲರು ಸ್ಪೀಕರ್ ಸೂಚನೆಯಂತೆ ಸಂಜೆ ಆರು ಗಂಟೆಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ಸ್ಪಷ್ಟನೆಣೆ ನೀಡಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದನ್ವಯ 15 ಮಂದಿ ಶಾಸಕರಿಗೆ ವಿಪ್ ಅನ್ವಯ ಆಗುವುದಿಲ್ಲ. ಜತೆಗೆ ಅವರನ್ನು ಸದನಕ್ಕೆ ಬರುವಂತೆ ಬಲವಂತ ಮಾಡುವಂತಿಲ್ಲ. ಹೀಗಾಗಿ ನಿಮ್ಮ ವಿಪ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ತಿರುಗೇಟು ನೀಡಿದರು.

‘ಪಕ್ಷಾಂತರ ನಿಷೇಧ ಕಾಯ್ದೆ 10ನೆ ಶೆಡ್ಯೂಲ್ಡ್‌ನ 2-1ಎ ಅನ್ವಯ ವಿಪ್ ಉಲ್ಲಂಘನೆ ಮಾಡುವುದಲ್ಲ, ಬೇರೆ ಪಕ್ಷದೊಂದಿಗೆ ಸಂರ್ಪಕವಿದ್ದರೂ ಅನರ್ಹಗೊಳಿಸಬಹುದು. ಈ ಬಗ್ಗೆ ತಮಿಳುನಾಡು ಸ್ಪೀಕರ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ನೀಡಿದ ಆದೇಶಗಳನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ’

-ಕೃಷ್ಣಬೈರೇಗೌಡ, ಸಂಸದೀಯ ವ್ಯವಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News