ಮಲೇಷ್ಯಾಕ್ಕೆ ಯುವಕರ ಸಾಗಾಟ ಆರೋಪ: ಓರ್ವನ ಬಂಧನ

Update: 2019-07-23 13:32 GMT

ಬೆಂಗಳೂರು, ಜು.23: ಉದ್ಯೋಗ ನೆಪದಲ್ಲಿ ಪಂಜಾಬ್ ಮೂಲದ ಮೂವರನ್ನು ಮಲೇಷ್ಯಾ ದೇಶಕ್ಕೆ ಮಾನವ ಕಳ್ಳ ಸಾಗಾಣೆ ಮಾಡುತ್ತಿದ್ದ ಆರೋಪಿಯನ್ನು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್ ನ ಅಮೃತಸರ ಮೂಲದ ರಾಜ್‌ ಕುಮಾರ್(26) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಆರೋಪಿಯು ಮಾನವ ಕಳ್ಳಸಾಗಣೆ ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡಿದ್ದ. ಬಡವರನ್ನು ಗುರಿಯಾಗಿಸಿಕೊಂಡು ವಿದೇಶದಲ್ಲಿ ಕೆಲಸ ನೀಡುವ ಆಮಿಷವೊಡ್ಡಿ ಹಣ ಪಡೆಯುತ್ತಿದ್ದ. ಅದರಂತೆ ಪಂಜಾಬ್ ಮೂಲದ ಮೂವರು ಯುವಕರಿಂದ ತಲಾ 70 ಸಾವಿರ ರೂ. ಪಡೆದಿದ್ದ ಎನ್ನಲಾಗಿದ್ದು, ಇಂದು ಮೂವರು ಯುವಕರನ್ನು ಆರೋಪಿಯು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೇಷ್ಯಾಕ್ಕೆ ವಿಮಾನ ಹತ್ತಿಸಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಮಾನ ನಿಲ್ದಾಣ ಪೊಲೀಸರು ಮೂವರು ಯುವಕರನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ರಾಜ್‌ಕುಮಾರ್ ವಿರುದ್ಧ ದೇಶದ ಹಲವೆಡೆ ಮಾನವ ಕಳ್ಳಸಾಗಾಣೆ ಪ್ರಕರಣಗಳಿವೆ. ಜೈಲಿಗೆ ಹೋಗಿ ಬಂದರೂ ದಂಧೆಯನ್ನು ಬಿಟ್ಟಿರಲಿಲ್ಲ. ವಿದೇಶಕ್ಕೆ ಹೋದ ಅಮಾಯಕರನ್ನು ಮನೆ ಕೆಲಸ, ಮದ್ಯದಂಗಡಿಗಳಲ್ಲಿ ಕೆಲಸಕ್ಕೆ ಸೇರಿಸುತ್ತಿದ್ದ. ವಿದೇಶಕ್ಕೆ ಹೋದವರು ಪುನಃ ಭಾರತಕ್ಕೆ ಬರಲು ಆಗುತ್ತಿರಲಿಲ್ಲ. ಹಣದ ಆಸೆಗೆ ಈ ರೀತಿ ಕೃತ್ಯವೆಸಗುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News