×
Ad

ಸಂತೋಷದಿಂದಲೇ ಪದತ್ಯಾಗ ಮಾಡುತ್ತೇನೆ: ಎಚ್.ಡಿ.ಕುಮಾರಸ್ವಾಮಿ

Update: 2019-07-23 22:32 IST

ಬೆಂಗಳೂರು, ಜು.23: ನಾನು ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ, ಸಂತೋಷದಿಂದಲೇ ಪದತ್ಯಾಗ ಮಾಡಿ ಹೋಗುತ್ತೇನೆ. ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ರಾಜೀಗೂ ನಾನು ಮಣಿಯುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಮನುಷ್ಯ ತಪ್ಪು ಮಾಡುವುದು ಸಹಜ. ನಾವು ಸದನದಲ್ಲಿ ಸ್ವಲ್ಪ ಕಾಲ ಹರಣ ಮಾಡಿದ್ದೇವೆ. ಹೆಚ್ಚು ಸಮಯ ನೀಡಿದರೆ ಹೊರಗೆ ಹೋಗಿರುವ ನಮ್ಮ ಶಾಸಕರಿಗೆ ಮನವರಿಕೆಯಾಗಬಹುದು, ತಮ್ಮ ತಪ್ಪನ್ನು ತಿದ್ದುಕೊಳ್ಳುತ್ತಾರೇನೋ ಎಂಬ ನಿರೀಕ್ಷೆಯಿತ್ತು. ನಾಲ್ಕು ದಿನಗಳ ಕಾಲ ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಚರ್ಚೆ ನಡೆದಿದೆ. ರಾಜ್ಯದ ಇತಿಹಾಸದಲ್ಲೆ ಇದೊಂದು ವಿಶಿಷ್ಟವಾದ ಸಂಗತಿ. ಈ ನಿರ್ಣಯದ ಮೇಲೆ ವಿರೋಧ ಪಕ್ಷದ ಒಬ್ಬ ಸದಸ್ಯರು ಭಾಗವಹಿಸಲಿಲ್ಲ. ಈ ಹಿಂದೆ ಸ್ಪೀಕರ್ ಆಗಿದ್ದ ಬೋಪಯ್ಯರನ್ನು ಯಾವ ರೀತಿ ದುರುಪಯೋಗ ಪಡಿಸಿಕೊಂಡರು ಎಂಬುದು ಗೊತ್ತಿದೆ. ಆದರೆ, ಇವತ್ತು ಅಂತಹ ಪರಿಸ್ಥಿತಿಯಿಲ್ಲ. ನಮ್ಮ ವಿಳಂಬದಿಂದ ವಿಪಕ್ಷ ನಾಯಕರ ಕಾತುರ ಹೆಚ್ಚಾಗುತ್ತಿದೆ. 2018ರ ಮೇ 23ರಂದು ಮೈತ್ರಿ ಸರಕಾರ ರಚನೆಯಾಯಿತು. ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದೆ ಇದ್ದ ಕಾರಣದಿಂದ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಮೈತ್ರಿ ಸರಕಾರ ರಚನೆ ಮಾಡಲಾಯಿತು. ನಾವು 104 ಸಂಖ್ಯಾಬಲವಿದ್ದರೂ ನಮಗೆ ಸರಕಾರ ರಚಿಸಲು ಬಿಡದೆ ಅನೈತಿಕ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪ ಮಾಡಿಕೊಂಡು ಬರುತ್ತಿದ್ದಾರೆ.

ಸಾಮಾಜಿಕ ಜಾಲ ತಾಣಗಳು ದೇಶದ ಸಂಸ್ಕೃತಿಯನ್ನು ನಾಶ ಮಾಡಲು ಹುಟ್ಟಿಕೊಂಡಿವೆ. ಯುವ ಜನರನ್ನು ಹಾಳು ಮಾಡುತ್ತಿವೆ. ಮುಖ್ಯಮಂತ್ರಿಯಾದ ನಂತರ ನಡೆದಿರುವ ಅಪಪ್ರಚಾರದಿಂದ ಬಹಳ ನೊಂದಿದ್ದೇನೆ. ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತಿದೆ. ನಾನು ನನ್ನ ಜೀವನದಲ್ಲಿ ಹಲವಾರು ತಪ್ಪು ನಿರ್ಣಯಗಳನ್ನು, ಉತ್ತಮ ನಿರ್ಣಯಗಳನ್ನು ಮಾಡಿದ್ದೇನೆ. ನನ್ನ ತಪ್ಪು ತಿದ್ದಿಕೊಳ್ಳಲು ನನ್ನ ಹೆಂಡತಿ ನನಗೆ ಕಾಲಾವಕಾಶ ಕೊಟ್ಟಳು. ಆಕೆಯ ತ್ಯಾಗವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

'ಸಾಮಾಜಿಕ ಜಾಲ ತಾಣಗಳಲ್ಲಿ ನಾನು ವಿಶ್ವಾಸಮತ ಯಾಚನೆ ಮಾಡದೆ ಪಲಾಯನ ಮಾಡುತ್ತಿದ್ದೇನೆ. ಖಾಸಗಿ ಹೊಟೇಲ್‌ನಲ್ಲಿ ಕೂತು ಲೂಟಿ ಹೊಡೆಯುತ್ತಿದ್ದೇನೆ' ಎಂದು ಆಪಾದಿಸಲಾಗುತ್ತಿದೆ. ಇವತ್ತು ಅರವಿಂದ ಲಿಂಬಾವಳಿಗೆ ಏನಾಗಿದೆ, ಇತ್ತೀಚೆಗೆ ವಿಶ್ವನಾಥ್ ಅವರದ್ದು ಆಡಿಯೋ ಬಿಡುಗಡೆಯಾಯಿತು ಅದನ್ನು ಕೇಳಿದರೆ ವಾಂತಿ ಬರುತ್ತದೆ ಎಂದು ಅವರು ಕಿಡಿಗಾರಿದರು.

ಬಿಜೆಪಿ ಬರುವವರಿಗೆ ಅವರವರ ಯೋಗ್ಯತೆಗೆ ಅನುಗುಣವಾಗಿ ಸ್ಥಾನಮಾನ ನೀಡುವುದಾಗಿ ಸಿ.ಟಿ.ರವಿ ಹೇಳಿದ್ದಾರೆ. ಇಂತಹ ಯೋಗ್ಯತೆ ಇರುವವರು ನಿಮಗೆ ಬೇಕೆ ? ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಸುದ್ದಿ ವಾಹಿನಿಗಳು ನನ್ನ ಬಗ್ಗೆ, ರೇವಣ್ಣ ಬಗ್ಗೆ, ಸರಕಾರದ ಭವಿಷ್ಯದ ಬಗ್ಗೆ ನಿರಂತರವಾಗಿ ಸುದ್ದಿಗಳನ್ನು ಪ್ರಸಾರ ಮಾಡಿವೆ. ದಿನ ನಿತ್ಯ ಕಿರುಕುಳ, ನನ್ನ ತಂದೆ ತಾಯಿಯ ಆಶೀರ್ವಾದದ ಪರಿಣಾಮವಾಗಿ ಬದುಕಿದ್ದೇನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಸರಕಾರ ಇವತ್ತು ಇರತ್ತೋ, ಹೋಗುತ್ತೋ ಎಂದು ಪ್ರತಿದಿನದ ಗೊಂದಲದಲ್ಲೂ ನಮ್ಮ ಅಧಿಕಾರಿಗಳು ಹಗಲು ರಾತ್ರಿ ಉತ್ತಮ ಆಡಳಿತ ನೀಡಲು ಸಹಕಾರ ನೀಡಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ 2.09 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಲಾಗಿತ್ತು. ನಾನು ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ 2.30 ಲಕ್ಷ ಕೋಟಿ ರೂ.ಗಳಾಗಿದ್ದು, ರೈತರ ಸಾಲ ಮನ್ನಾ ಮಾಡಲು 25 ಸಾವಿರ ಕೋಟಿ ರೂ.ತೆಗೆದಿರಿಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ನಾನು ಸರಕಾರಿ ಕಾರು, ಬಂಗಲೆ, ಟಿಎ, ಡಿಎ ಯಾವುದನ್ನು ಪಡೆಯುತ್ತಿಲ್ಲ. ಜನರ ತೆರಿಗೆ ಹಣ ದುರುಪಯೋಗಪಡಿಸಿಕೊಳ್ಳುವುದು ನನಗೆ ಬೇಕಿಲ್ಲ. ನಮ್ಮ ಸರಕಾರ ಲಜ್ಜೆ ಗೆಟ್ಟ ಆಡಳಿತ ಮಾಡಿಲ್ಲ. ಕುಂಭಕರ್ಣನ ನಿದ್ದೆಯಲ್ಲೂ ಇಲ್ಲ. ನಾನು ಬಜೆಟ್ ಮಂಡನೆ ಮಾಡಲು ಮುಂದಾದಾಗ ಯಡಿಯೂರಪ್ಪ ಅದಕ್ಕೆ ವಿರೋಧ ಮಾಡಿದರು. ಅದೇ ರೀತಿ ಈ ಹಿಂದೆ ಸದಾನಂದಗೌಡರಿಗೂ ಹಿಂಸೆ ಕೊಡಲಾಗಿತ್ತು ಎಂದು ಅವರು ಹೇಳಿದರು.

ವಿಶ್ವಾಸಮತ ಯಾಚನೆಗೆ ಹೆದರಿ ಕೇವಲ ಭಾಷಣ ಮಾಡಿ ಹೋಗುವುದಿಲ್ಲ. ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ರಾಜ್ಯದ ಜನರಿಗೂ ಗೊತ್ತಾಗಲಿ, ಮತ ವಿಭಜನೆಗೆ ಹಾಕಿ ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಎಚ್.ವಿಶ್ವನಾಥ್, ರಾಜ್ಯದಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ. ಇವರೊಬ್ಬ ಸಂಸದೀಯ ಪಟುವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಶಾಸಕ ಗೋಪಾಲಯ್ಯ ಕುಟುಂಬದಲ್ಲಿ ಒಂದು ಕೊಲೆಯಾಗಿದೆ. ಆ ಕೊಲೆ ಪ್ರಕರಣದಲ್ಲಿ ನಾನು ಅವರ ಸಹೋದರನಿಗೆ ರಕ್ಷಣೆ ನೀಡಬೇಕೇ? ಐಎಂಎ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಶಾಸಕನನ್ನು ವಿಶೇಷ ವಿಮಾನದಲ್ಲಿ ಹೊರ ರಾಜ್ಯಕ್ಕೆ ಕಳುಹಿಸಲು ಪ್ರಯತ್ನಿಸಿದ್ದು ಯಾರು? ಇದಕ್ಕೆ ಬೇಕಿರುವ ಸಾಕ್ಷಾಧಾರಗಳು ಬೇಕೆ? ಎಂದು ಅವರು ಹೇಳಿದರು.

ಯಾರಿಗೂ ಅಧಿಕಾರ ಶಾಶ್ವತವಲ್ಲ, ದ್ವೇಷದ ರಾಜಕಾರಣ ನಾನು ಮಾಡುವುದಿಲ್ಲ. ನಿಮ್ಮ ತೆವಲುಗಳಿಗಾಗಿ ದೇಶವನ್ನು ಹಾಳು ಮಾಡಬೇಡಿ ಎಂದು ಸುದ್ದಿ ವಾಹಿನಿಗಳ ವಿರುದ್ಧ ಹರಿಹಾಯ್ದ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಉಳಿದುಕೊಂಡಿದ್ದ ಹೊಟೇಲ್ ಮೇಲೆ ಐಟಿ ದಾಳಿ ಮಾಡಿದರು. ಏನು ಸಿಕ್ಕಿತು ಅವರಿಗೆ? ಎಂದು ಪ್ರಶ್ನಿಸಿದರು.

ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್‌ನನ್ನು ಮನವೊಲಿಸಿ ದುಬೈಯಿಂದ ಕರೆ ತಂದದ್ದು ನಮ್ಮ ರಾಜ್ಯದ ಅಧಿಕಾರಿಗಳು, ಆದರೆ, ಆತ ದಿಲ್ಲಿಯಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆತನನ್ನು ವಿಚಾರಣೆಗಾಗಿ ಕರೆದುಕೊಂಡು ಹೋದರು. ಯಾರನ್ನು ಸಿಲುಕಿಸಲು ಆತನನ್ನು ಕರೆದುಕೊಂಡು ಹೋಗಲಾಯಿತು ಎಂದು ಕುಮಾರಸ್ವಾಮಿ ಹೇಳಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 35 ಲಕ್ಷ ರೈತರ ಮಾಹಿತಿಯನ್ನು ವೆಬ್‌ಸೈಟ್‌ಗೆ ಹಾಕಿದ್ದೇವೆ. ಕೊಡಗಿನ ಜನರಿಗೆ ನಾವು ದ್ರೋಹ ಮಾಡಿದ್ದೇವೆಯಾ? ತಲಾ 10 ಲಕ್ಷ ರೂ.ಗಳ ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಿಕೊಡುತ್ತಿದ್ದೇವೆ. ಮನೆ ಸಿಗುವವರೆಗೆ ಸಂತ್ರಸರಿಗೆ ಮಾಸಿಕ 10 ಸಾವಿರ ರೂ.ಗಳಂತೆ ಮನೆ ಬಾಡಿಗೆ ನೀಡುತ್ತಿದ್ದೇವೆ. ಗ್ರಾಮೀಣ ಭಾಗದ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕೆಂಬ ನಿರ್ಧಾರದಿಂದ 1000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದ್ದೇವೆ. ಶಾಲಾ ಕಟ್ಟಡಗಳಿಗಾಗಿ 1200 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರೈತರು ಹನಿ ನೀರಿಗೂ ಪರದಾಡುತ್ತಿರುವುದರಿಂದ, ಇಸ್ರೇಲ್ ಮಾದರಿ ಕೃಷ್ಟಿ ಪದ್ಧತಿಯನ್ನು ಪರಿಚಯಿಸಲಾಗಿದೆ. ಪೊಲೀಸರ ಬಹುದಿನಗಳ ಬೇಡಿಕೆ ಔರಾದ್ಕರ್ ಸಮಿತಿಯ ಶಿಪಾರಸ್ಸುಗಳನ್ನು ಜಾರಿಗೆ ತಂದಿದ್ದೇವೆ. ಬೆಂಗಳೂರು ನಗರದ ಅಭಿವೃದ್ಧಿಗೆ ಉಪನಗರ ರೈಲು, ಎಲಿವೇಟೆಡ್ ಕಾರಿಡಾರ್, ಹೊರ ವರ್ತುಲ ರಸ್ತೆ, ಮುಖ್ಯಮಂತ್ರಿ ನಗರೋತ್ಥಾನ, ಮೆಟ್ರೋ ಸೇರಿದಂತೆ 1.03 ಲಕ್ಷ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇವತ್ತು ಈ ಸರಕಾರವನ್ನು ಪತನಗೊಳಿಸಲು ಪ್ರಯತ್ನಿಸಲಾಗಿದೆ. ಬಿಜೆಪಿಯವರು ಮಂತ್ರಿ ಮಂಡಲ ರಚನೆ ಮಾಡಲಿ, ಒಂದು ವಾರದಲ್ಲೆ ಆ ಭಾಗದಿಂದ ಈ ಕಡೆಗೆ ಶಾಸಕರು ಬರುವ ಕಾಲ ಬರಬಹುದು. ಸರಕಾರವನ್ನು ಯಾವ ರೀತಿ ಉಳಿಸಿಕೊಳ್ಳುತ್ತೀರೋ ಉಳಿಸಿಕೊಳ್ಳಿ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News