ನೂತನ ಸರಕಾರ ರಚನೆ: ಬಿಎಸ್‌ವೈರಿಂದ ನಾಳೆ ರಾಜ್ಯಪಾಲರ ಭೇಟಿ ಸಾಧ್ಯತೆ

Update: 2019-07-23 17:11 GMT

ಬೆಂಗಳೂರು, ಜು. 23: ರಾಜ್ಯದಲ್ಲಿನ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ವಿಶ್ವಾಸಮತ ಯಾಚನೆಯಲ್ಲಿ ಸೋತಿರುವುದರಿಂದ ಬಿಜೆಪಿ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ನೂತನ ಸರಕಾರ ರಚನೆಗೆ ನಾಳೆ (ಜು.24) ರಾಜ್ಯಪಾಲರ ಬಳಿಗೆ ತೆರಳಿ ಹಕ್ಕು ಮಂಡಿಸುವ ಸಾಧ್ಯತೆಗಳಿವೆ.

ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಬಿಜೆಪಿ ಸಂಖ್ಯಾಬಲದಲ್ಲಿ (105) ದೊಡ್ಡ ಪಕ್ಷವಾಗಿದ್ದು, ನೂತನ ಸರಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಲಿದ್ದಾರೆ. ರಾಜ್ಯಪಾಲರು ಆಹ್ವಾನ ನೀಡಿದರೆ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದೆ.

ಮೂಲಗಳ ಪ್ರಕಾರ ಜು.25ರ ಗುರುವಾರ ಅಥವಾ ಜು.26ರ ಶುಕ್ರವಾರ ಮಧ್ಯಾಹ್ನ ಬಿಜೆಪಿ ನೇತೃತ್ವದ ನೂತನ ಸರಕಾರದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿ ಸ್ವೀಕರಿಸುವ ಸಾಧ್ಯತೆಗಳಿದ್ದು, ಅದಷ್ಟು ಶೀಘ್ರದಲ್ಲೆ ನೂತನ ಸಚಿವ ಸಂಪುಟವೂ ಅಸ್ತಿತ್ವಕ್ಕೆ ಬರಲಿದ್ದು ಹೊಸ ಸರಕಾರ ಕಾರ್ಯಾರಂಭವಾಗಲಿದೆ ಎನ್ನಲಾಗುತ್ತಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಮುಂಬೈ ಮತ್ತು ಪೂನಾದಲ್ಲಿ ಬೀಡು ಬಿಟ್ಟಿದ್ದು, ಮೈತ್ರಿ ಸರಕಾರ ಪತನಗೊಂಡ ಹಿನ್ನೆಲೆಯಲ್ಲಿ ಅವರು ನಾಳೆ ರಾಜ್ಯಕ್ಕೆ ಆಗಮಿಸುವ ಸಾಧ್ಯತೆಗಳಿದ್ದು, ಹೊಸ ರಾಜಕೀಯ ಬೆಳವಣಿಗೆಗಳಿಗೆ ನಾಂದಿಯಾಗಲಿದೆ.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಮುಖಂಡರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಪ್ರದೇಶ, ಜಾತಿ ಆಧಾರ ಮೇಲೆ ಮುಖಂಡರು ಲಾಬಿ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News