ಐಎಂಎ ವಂಚನೆ ಪ್ರಕರಣ: ಆಸ್ತಿ ಮುಟ್ಟುಗೋಲು ಆದೇಶಕ್ಕೆ ಅಧಿಕಾರಿಯನ್ನು ನೇಮಿಸಿ- ಹೈಕೋರ್ಟ್

Update: 2019-07-23 17:31 GMT

ಬೆಂಗಳೂರು, ಜು.23: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಮಾಲಕ ಮುಹಮ್ಮದ್ ಮನ್ಸೂರ್‌ಖಾನ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಬೇಕಾದ ಸಕ್ಷಮ ಪ್ರಾಧಿಕಾರದ ಅಧಿಕಾರಿಯನ್ನು ಜು.24ರೊಳಗೆ ನೇಮಕ ಮಾಡಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಹಗರಣಕ್ಕೆ ಸಂಬಂಧಿಸಿದಂತೆ ವಕೀಲ ಮುಹಮ್ಮದ್ ತಾಹೀರ್ ಸೇರಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರೂ ಆಗಿರುವ ಮುಹಮ್ಮದ್ ತಾಹೀರ್ ಅವರು ವಾದಿಸಿ, ಈಗಾಗಲೇ ಮುಹಮ್ಮದ್ ಮನ್ಸೂರ್‌ಖಾನ್ ಅವರನ್ನು ಎಸ್‌ಐಟಿ ಅವರು ಬಂಧಿಸಿದ್ದು, ಇಡಿ ಅವರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮನ್ಸೂರ್ ಅವರ ಆಸ್ತಿಗಳನ್ನು ಜಪ್ತಿ ಮಾಡುವ ವೇಳೆ ಎಲ್ಲ ವಸ್ತುಗಳನ್ನು ಕ್ಯಾಮೆರಾ ಕಣ್ಗಾವಲಿನಲ್ಲಿ ಸೀಜ್ ಮಾಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಮನ್ಸೂರ್‌ಖಾನ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಬೇಕಾದ ಪ್ರಾಧಿಕಾರದ ಅಧಿಕಾರಿಯನ್ನು ನಾಳೆಯೊಳಗೆ ನೇಮಕ ಮಾಡಬೇಕೆಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News