ಅತೃಪ್ತ ಶಾಸಕರ ಅನರ್ಹತೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಸ್ಪೀಕರ್ ರಮೇಶ್‌ ಕುಮಾರ್

Update: 2019-07-23 17:52 GMT

ಬೆಂಗಳೂರು, ಜು. 23: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಅನರ್ಹತೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ವಿಧಾನಸಭೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ಎರಡೂ ಕಡೆಯ ವಾದ-ಪ್ರತಿವಾದವನ್ನು ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ಮೊದಲನೇ ಮಹಡಿಯಲ್ಲಿನ ಸ್ಪೀಕರ್ ಕೊಠಡಿಯಲ್ಲಿ ವಿಚಾರಣೆ ನಡೆಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 16 ಮಂದಿ ಅತೃಪ್ತರ ಅನರ್ಹತೆ ಬಗ್ಗೆ ರಮೇಶ್‌ ಕುಮಾರ್ ತೀರ್ಪು ಕಾಯ್ದಿರಿಸಿದ್ದಾರೆ ಎಂದು ಗೊತ್ತಾಗಿದೆ.

ಕಾಂಗ್ರೆಸ್ ಪಕ್ಷದ ಶಾಸಕರಾದ ರಮೇಶ್ ಜಾರಕಿಹೊಳಿ, ಆನಂದ್‌ ಸಿಂಗ್, ಮಹೇಶ್ ಕುಮಟಳ್ಳಿ, ಪ್ರತಾಪ್‌ ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ, ರೋಷನ್ ಬೇಗ್, ಎಂಟಿಬಿ ನಾಗರಾಜ್, ಡಾ.ಸುಧಾಕರ್, ಶ್ರೀಮಂತ್ ಪಾಟೀಲ್ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದಿನೇಶ್ ಗುಂಡೂರಾವ್ ದೂರು ನೀಡಿದ್ದರು.

ಜೆಡಿಎಸ್‌ನ ಶಾಸಕರಾದ ಎಚ್.ವಿಶ್ವನಾಥ್, ನಾರಾಯಣಗೌಡ ಹಾಗೂ ಕೆ. ಗೋಪಾಲಯ್ಯ ವಿರುದ್ದವೂ ಪಕ್ಷ ದೂರು ನೀಡಿತ್ತು. ಶಾಸಕ ಗೈರು ಹಾಜರಿಯಲ್ಲಿ ಅವರ ಪರ ಆರು ಮಂದಿ ವಕೀಲರು ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೆ, ಸ್ಪೀಕರ್ ನೋಟಿಸ್‌ಗೆ ಉತ್ತರ ನೀಡಲು ಹಾಗೂ ವಿಚಾರಣೆಗೆ ಹಾಜರಾಗಲು ನಾಲ್ಕು ವಾರ ಕಾಲಾವಕಾಶ ಕೋರಿ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿವಾದ ಮಂಡಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪರ ವಕೀಲರು ಸಂವಿಧಾನದ 10ನೆ ಶೆಡ್ಯೂಲ್ಡ್ ಅನ್ವಯ ಮೇಲ್ಕಂಡ ಎಲ್ಲ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜೀನಾಮೆ ನೀಡಿರುವ 16 ಮಂದಿ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ್ದು, ಅಧಿವೇಶನಕ್ಕೆ ಗೈರು ಹಾಜರಾಗಿದ್ದಾರೆ. ಅಲ್ಲದೆ ಪಕ್ಷಾಂತರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪರ ವಕೀಲ ವಿ.ಎಸ್.ಉಗ್ರಪ್ಪ ವಾದ ಮಂಡಿಸಿದರು.

ವಿಚಾರಣೆ ವೇಳೆ ದೂರುದಾರರು ಆಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಂಡರೆ ಸಚಿವರಾಗಲು ಅವಕಾಶವಿಲ್ಲ. ಹೀಗಾಗಿ ಅನಗತ್ಯ ಕಾಲಹರಣ ಮಾಡಲು ಸಮಯಾವಕಾಶ ಕೇಳುತ್ತಿದ್ದಾರೆ. ಇದು ಕಾನೂನು ಉಲ್ಲಂಘನೆ. ಅವರಿಗೆ ಯಾವುದೇ ಸಮಯಾವಕಾಶ ನೀಡದೆ ತ್ವರಿತ ಕ್ರಮ ಕೈಗೊಳ್ಳಬೇಕು’

-ವಿ.ಎಸ್.ಉಗ್ರಪ್ಪ, ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News