ಪಕ್ಷೇತರ ಶಾಸಕರಿಗಾಗಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ: ಬಂಧನ

Update: 2019-07-23 17:56 GMT

ಬೆಂಗಳೂರು, ಜು.23: ಪಕ್ಷೇತರ ಶಾಸಕರು ವಾಸ್ತವ್ಯ ಹೂಡಿರುವ ನಗರದ ನಿತೇಶ್ ಅಪಾರ್ಟ್‌ಮೆಂಟ್ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪರಸ್ಪರ ನೂಕಾಟ, ಗದ್ದಲ, ವಾಗ್ವಾದ ನಡೆಯಿತು.

ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಗೆ ನಿಗಧಿಗೊಂಡಿದ್ದ ಸಂಜೆ 6ಗಂಟೆ ಸಮೀಪ ವಾಗುತ್ತಿದ್ದಂತೆ ಪಕ್ಷೇತರ ಶಾಸಕರಾದ ಎಚ್.ನಾಗೇಶ್, ಆರ್.ಶಂಕರ್ ವಾಸ್ತವ್ಯ ಹೂಡಿರುವ ನಿತೇಶ್ ಅಪಾರ್ಟ್‌ಮೆಂಟ್ ಮುಂಭಾಗ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ, ಪರಸ್ಪರ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಮಾತನಾಡಿ, ಪಕ್ಷೇತರ ಶಾಸಕರಲ್ಲಿ ಆರ್.ಶಂಕರ್ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಹಾಗೂ ಎಚ್.ನಾಗೇಶ್ ಮೈತ್ರಿ ಸರಕಾರದಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ಅವರು ವಿಶ್ವಾಸಮತ ಯಾಚನೆಯಲ್ಲಿ ಸರಕಾರದ ಪರವಾಗಿ ಮತ ಹಾಕುವಂತೆ ಮನವೊಲಿಸಿ ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದರು.

ಕಾರ್ಯಕರ್ತರ ಬಂಧನ: ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಳ್ಳರು ಎಂದು ಘೋಷಣೆ ಕೂಗಿದರೆ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರು ರೌಡಿಗಳೆಂದು ಧಿಕ್ಕಾರ ಕೂಗಿದರು. ಪರಸ್ಪರ ವಿರುದ್ಧದ ಘೋಷಣೆಗಳು ತಾರಕಕ್ಕೆ ಹೋದವು. ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವ ಪೊಲೀಸರ ಪ್ರಯತ್ನ ವಿಫಲವಾದ ಪರಿಣಾಮ ಪ್ರತಿಭಟನಾಕಾರರನ್ನು ಬಂಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News