ರಾಜೀನಾಮೆ ನೀಡಿದವರಿಗೆ ಸ್ಥಾನ ನೀಡಬೇಡಿ: ಸಚಿವ ಯು.ಟಿ.ಖಾದರ್

Update: 2019-07-23 18:27 GMT

ಬೆಂಗಳೂರು, ಜು. 23: “ವೈಯಕ್ತಿಕ ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ‘ತೃಪ್ತರಿಗೆ’ ಯಾವುದೇ ಕಾರಣಕ್ಕೂ ಸ್ಥಾನ ನೀಡಬಾರದು. ಈ ಮೂಲಕ ಅನೈತಿಕ ರಾಜಕೀಯಕ್ಕೆ ಅಂತ್ಯ ಹಾಡಿ ಸಂವಿಧಾನ-ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿಹಿಡಿಯಬೇಕು” ಎಂದು ಸಚಿವ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವ ಬೆಂಬಲಿಸಿ ಮಾತನಾಡಿದ ಅವರು, ಅಧಿಕಾರದ ಆಸೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸಖ್ಯ ಬೆಳೆಸಿದ್ದಾರೆ. ಇಂತಹ ಜನರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಬಿಜೆಪಿ ಮತ್ತು ರಾಜ್ಯದ ಜನತೆ ಬೆಂಬಲಿಸಬಾರದು ಎಂದು ಕೋರಿದರು.

ಇಂತಹವರಿಗೆ ಯಾವುದೇ ಸ್ಥಾನಮಾನ ನೀಡಿದರೆ ಮುಂದೆ ಒಂದು ದಿನ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದ ಅವರು, ದೇಶ ಮತ್ತು ರಾಜ್ಯದ ಮೇಲೆ ಪ್ರೀತಿ ಇದ್ದರೆ ಅತೃಪ್ತರು ಮುಂಬೈಗೆ ಹೋಗುತ್ತಿರಲಿಲ್ಲ. ಬದಲಿಗೆ ತಮ್ಮ ಕ್ಷೇತ್ರದಲ್ಲೇ ಇರುತ್ತಿದ್ದರು ಎಂದರು.

ಅನಾರೋಗ್ಯಕರ: ಪಕ್ಷದ ಟಿಕೆಟ್ ನೀಡುವ ಸಂದರ್ಭದಲ್ಲೇ ಸ್ಕ್ಯಾನ್ ಮಾಡುವ ವ್ಯವಸ್ಥೆ ಇಲ್ಲ. ಯಾರನ್ನು ದುರ್ಬಿನು ಹಾಕಿ ನೋಡಲು ಆಗುವುದಿಲ್ಲ ಎಂದ ಅವರು, ಅತೃಪ್ತರನ್ನು ಸೆಳೆದುಕೊಳ್ಳುವ ಕೆಲಸಕ್ಕೆ ಶಾಶ್ವತ ಇತಿಶ್ರೀ ಹಾಕಬೇಕು ಎಂದು ಸಲಹೆ ನೀಡಿದರು.

ಅಧಿಕಾರಕ್ಕಾಗಿ ಶಾಸಕರ ರಾಜೀನಾಮೆ ಕೊಡಿಸುವುದು ಬಿಜೆಪಿಯ ಯಾವ ಸಂಸ್ಕೃತಿ ರಕ್ಷಣೆ ಎಂದ ಅವರು, ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿದ್ದ ಸಚಿವ ಶಿವಕುಮಾರ್‌ ಗೆ ಅವಕಾಶ ನೀಡಲಿಲ್ಲ ಎಂದು ಟೀಕಿಸಿದರು.

ರಾಜೀನಾಮೆ ನೀಡಿದ ಶಾಸಕರು ಜನರಿಂದ ಆಯ್ಕೆಯಾದ ಸಂವಿಧಾನಬದ್ಧ ಸರಕಾರವನ್ನೇ ಬುಡಮೇಲು ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ. ಇವರೇ ಮುಂದೊಂದು ಬಿಜೆಪಿಯವರ ಕೃತ್ಯದ ಸತ್ಯ ಬಹಿರಂಗಪಡಿಸಲಿದ್ದಾರೆ. 3 ತಿಂಗಳು ಕಾದು ನೋಡಿ. ಎಲ್ಲಾ ಸತ್ಯವನ್ನು ಅವರೇ ತೆರೆದಿಡಲಿದ್ದಾರೆ. ಎಷ್ಟೇ ಬಚ್ಚಿಟ್ಟರೂ ಎಲ್ಲಾ ಸತ್ಯಗಳು ಹೊರಬರಲಿವೆ ಎಂದರು.

ಕೊಡಗು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿಲ್ಲ ಎನ್ನುವ ಶಾಸಕ ಅಪ್ಪಚ್ಚು ರಂಜನ್ ಆರೋಪಕ್ಕೆ ಉತ್ತರಿಸಿದ ಖಾದರ್, ನಾವು ಯಾರನ್ನೂ ಶೆಡ್ ಗಳಲ್ಲಿರಲು ಅವಕಾಶ ಮಾಡಿಕೊಡಬಾರದು ಎಂದು ತೀರ್ಮಾನಿಸಿದ್ದೆವು. ಕೆಲವೊಮ್ಮೆ ತಡವಾಗುತ್ತದೆ. ಪ್ರತಿ ತಿಂಗಳು 10 ಸಾವಿರ ರೂ. ಬಾಡಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು ಎಂದರು. ಈ ಸಂದರ್ಭ “ಎಷ್ಟು ಮಂದಿಗೆ ನೀಡಿದ್ದೀರಿ” ಎನ್ನುವ ರಂಜನ್ ಪ್ರಶ್ನೆಗೆ ಉತ್ತರಿಸಿದ ಖಾದರ್, “ನೀವು ಕ್ಷೇತ್ರದ ಶಾಸಕರೇ ಅಥವಾ ನಾನು ಶಾಸಕನೇ?” ಎಂದು ಮರು ಪ್ರಶ್ನಿಸಿದರು.

“ನೀವು ಕೊಡದಿದ್ದರೆ ಹೇಳಿ. ನಿಮ್ಮನ್ನು ಕಳುಹಿಸಿದ್ದೇಕೆ. ಸರಕಾರದ ಆದೇಶಗಳನ್ನು ಅನುಷ್ಠಾನಗೊಳಿಸಲು ನಿಮ್ಮನ್ನು ಕಳುಹಿಸಿದ್ದಾರೆ. ನೀವು ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಬೇಕಿತ್ತು” ಎಂದು ಖಾದರ್ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News