×
Ad

ಪ್ರಸಕ್ತ ವರ್ಷಾಂತ್ಯದೊಳಗೆ ಬಿಬಿಎಂಪಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಗಳ ಆರಂಭ !

Update: 2019-07-24 22:33 IST

ಬೆಂಗಳೂರು, ಜು.24: ಬೃಹತ್ ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿನ ಸರಕಾರಿ ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜುಗಳಲ್ಲಿ ಪ್ರಸಕ್ತ ವರ್ಷದ ವರ್ಷಾಂತ್ಯದೊಳಗೆ ಸ್ಮಾರ್ಟ್ ಕ್ಲಾಸ್‌ಗಳನ್ನು ಆರಂಭಿಸಲು ಬಿಬಿಎಂಪಿ ಮುಂದಾಗಿದೆ.

ಪಾಲಿಕೆಯ ವ್ಯಾಪ್ತಿಯ ಶಾಲಾ-ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಮೆಕ್ರೋಸಾಫ್ಟ್ ಹಾಗೂ ಟೆಕ್ ಆವಂತ್ ಕಂಪನಿಯ ಸಹಯೋಗದೊಂದಿಗೆ ಬಿಬಿಎಂಪಿ ರೂಪಿಸಿದ್ದ ರೋಶಿನಿ ಯೋಜನೆಗೆ ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳೆದ ಸೆಪ್ಟಂಬರ್‌ನಲ್ಲಿ ಚಾಲನೆ ನೀಡಿದ್ದರು. ಈ ನಿಟ್ಟಿನಲ್ಲಿ ಎಲ್ಲೆಡೆ ಕ್ರಿಯಾ ಯೋಜನೆ ಅನುಷ್ಠಾನ ನಡೆಯುತ್ತಿದ್ದು, 10 ತಿಂಗಳ ಅವಧಿಯಲ್ಲಿ ಪಾಲಿಕೆಯ ಸರಕಾರಿ ಶಾಲಾ-ಕಾಲೇಜು ಶಿಕ್ಷಕರಿಗೆ 5-6 ಬಾರಿ ತರಬೇತಿಯನ್ನೂ ನೀಡಲಾಗಿದೆ. ಅಲ್ಲದೆ, ಎಲ್ಲೆಡೆ ಸ್ಮಾರ್ಟ್ ಕ್ಲಾಸ್‌ಗಳಾಗಿ ಪರಿವರ್ತಿಸಲು ಕೆಲಸ ನಡೆಯುತ್ತಿದೆ.

ನಗರದ ವ್ಯಾಪ್ತಿಯಲ್ಲಿನ 91 ಶಿಶುವಿಹಾರಗಳು, 15 ಪ್ರಾಥಮಿಕ ಶಾಲೆ, 34 ಪ್ರೌಢಶಾಲೆ, 14 ಪದವಿ ಪೂರ್ವ ಕಾಲೇಜು, 4 ಪದವಿ ಕಾಲೇಜುಗಳನ್ನು ಬಿಬಿಎಂಪಿ ನಿರ್ವಹಿಸುತ್ತಿದೆ. ಅದರಲ್ಲಿ ಮೈಕ್ರೋಸ್‌ಟಾ ಮತ್ತು ಟೆಕ್ ಅವಂತ್ ಕಂಪನಿ ಪ್ರಸ್ತುತ 34 ಪ್ರೌಢಶಾಲೆ, 14 ಪದವಿ ಪೂರ್ವ ಕಾಲೇಜುಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಗಳಾಗಿ ಪರಿವರ್ತಿಸಲಿದ್ದಾರೆ.

ಪ್ರೌಢಶಾಲೆಗಳಲ್ಲಿ 2,031 ಬಾಲಕರು 3,036 ಬಾಲಕಿಯರಿದ್ದಾರೆ. 14 ಪದವಿ ಪೂರ್ವ ಕಾಲೇಜುಗಳಲ್ಲಿ 765 ವಿದ್ಯಾರ್ಥಿಗಳು ಹಾಗೂ 3,620 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇದೀಗ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿನ ತರಗತಿ ಸ್ಮಾರ್ಟ್ ಕ್ಲಾಸ್ ಆಗಲಿದ್ದು, ಒಟ್ಟಾರೆ 9,452 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಮೇ 10ರಂದು ಪಾಲಿಕೆ ವ್ಯಾಪ್ತಿಯ ಶಾಲಾ-ಕಾಲೇಜುಗಳನ್ನು ರೋಶಿನಿ ಶಿಕ್ಷಣ ಯೋಜನೆಯಡಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ನಡೆದ ಸಭೆಯಲ್ಲಿ ಸುಸಜ್ಜಿತ ಕಟ್ಟಡ ಒದಗಿಸುವ ಭರವಸೆ ನೀಡಿದ್ದರು. ಆ ಬಳಿಕ ಸ್ಮಾರ್ಟ್‌ಕ್ಲಾಸ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಟೆಕ್ ಅವಂತ್ ಸಂಸ್ಥೆಯ ಅಲಿಸೇಠ್ ಹೇಳಿದ್ದಾರೆ.

ವರ್ಷಾಂತ್ಯದಲ್ಲಿ ಏನೆಲ್ಲ ಅಭಿವೃದ್ಧಿಯಾಗಲಿದೆ?: ಎಲ್ಲ ಶಾಲೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಕೆ, 1 ಸಾವಿರಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಕೆ, ಸರಕಾರಿ ಶಾಲಾ-ಕಾಲೇಜುಗಳ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಸ್ಮಾರ್ಟ್‌ಕ್ಲಾಸ್‌ಗಳಾಗಿ ಪರಿವರ್ತನೆ ಮಾಡಲು ಕಾರ್ಯ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳಿವೆ. ಅವುಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಾದ ಬಳಿಕ ಶಾಲಾ-ಕಾಲೇಜುಗಳನ್ನು ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಂತ್ ಸಂಸ್ಥೆಗಳಿಗೆ ಬಿಟ್ಟುಕೊಡಲಾಗುವುದು. ಅವರು ಅದನ್ನು ಮೇಲ್ದರ್ಜೆಗೇರಿಸಲಿದ್ದಾರೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News