ಕಾವ್ಯಕ್ಕೆ ದ್ವೇಷ-ಅಸೂಯೆಗಳನ್ನು ನಿಗ್ರಹಿಸುವ ಶಕ್ತಿಯಿದೆ: ಮೂಡ್ನಾಕೂಡು ಚಿನ್ನಸ್ವಾಮಿ
ಬೆಂಗಳೂರು, ಜು.24: ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠವಾದದ್ದು ಕಾವ್ಯ ಧರ್ಮವಾಗಿದ್ದು, ಇದರಿಂದ ಯುದ್ಧ, ದ್ವೇಷ, ಅಸೂಯೆಗಳನ್ನು ನಿಗ್ರಹಿಸಲು ಸಾಧ್ಯವೆಂದು ಹಿರಿಯ ಕವಿ ಮುಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಿಸಿದ್ದಾರೆ.
ಬುಧವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಇಲ್ಲಿನ ಸಭಾಮನೆಯಲ್ಲಿ ಆಯೋಜಿಸಿದ್ದ ಚಕೋರ ಭಾವಗೀತೆಗಳ ಛಾಯಾತಟ್ಟೆ(ಡಿವಿಡಿ) ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾವ್ಯದ ಗುಣವನ್ನು ಅರ್ಥೈಸಿಕೊಳ್ಳುವ ಶಕ್ತಿ ಬಂದರೆ ಸಮಾಜದಲ್ಲಿ ಕೊಲೆ, ದ್ವೇಷಗಳಿಗೆ ಆಸ್ಪದವೇ ಇರುವುದಿಲ್ಲವೆಂದು ತಿಳಿಸಿದರು.
ರಾಜ್ಯದ ಹಳ್ಳಿಗಳಿಗೆ ಕಾವ್ಯ ತಲುಪಿ, ಯುವ ಜನತೆಯ ಹೃದಯಗಳಿಗೆ ನಾಟಬೇಕು. ಕೇವಲ ವಿದ್ವಾಂಸರಿಗೆ ಮಾತ್ರ ಕಾವ್ಯ ಸೀಮಿತವಲ್ಲ. ಪ್ರತಿಯೊಬ್ಬರು ಕಾವ್ಯವನ್ನು ರಚಿಸಲು ಸಾಧ್ಯವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಕೋರ ತಂಡಗಳು ಸಾಬೀತು ಪಡಿಸುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾವ್ಯವೆಂದರೆ ವ್ಯಕ್ತಿಯೋರ್ವ ತನ್ನ ಭಾವನೆಗಳನ್ನು ಅಕ್ಷರಕ್ಕೆ ರೂಪಾಂತರಿಸುವುದೇ ಆಗಿದೆ. ತನ್ನೊಳಗಿರುವ ಭಾವನೆಗಳನ್ನು ಮುಕ್ತವಾಗಿ ಹೇಳಲಿಕ್ಕೆ ಸಾಧ್ಯವಾಗದ ಸಂದರ್ಭದಲ್ಲಿ, ಅದು ಕಾವ್ಯವಾಗಿ ಒಡಮೂಡುತ್ತದೆ. ಕಾವ್ಯವನ್ನು ಬರೆಯಲು ಪ್ರಯತ್ನಿಸುವುದೆ ಬೌದ್ಧಿಕ ಚಟುವಟಿಕೆಯಾಗಿದೆ ಎಂದು ಅವರು ಹೇಳಿದರು.
ಕಾವ್ಯವನ್ನು ಬರೆಯುತ್ತಾ ಹೋದಂತೆ ನಮ್ಮಾಳಗೆ ಉಲ್ಲಾಸ ಸೃಷ್ಟಿಯಾಗುತ್ತದೆ. ಹೀಗೆ ಬರೆಯುತ್ತಾ, ಬರೆಯುತ್ತಲೆ ಉತ್ತಮವಾದ ಕವಿತೆಗಳನ್ನು ಬರೆಯಲು ಸಾಧ್ಯ. ಈ ಕವಿತೆಗಳನ್ನು ಹಾಡಾಗಿಸುವುದು ಮತ್ತೊಂದು ಪ್ರಕ್ರಿಯೆಯಾಗಿದ್ದು, ಅದು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಅವರು ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ, ಕನ್ನಡದ ಜನತೆಯ ಪ್ರತಿಯೊಬ್ಬರ ಜೇಬಿನಲ್ಲಿ ಸಾಹಿತ್ಯ ಸಿಗುವಂತಾಗಬೇಕೆಂದು ನಾನು ಅಕಾಡೆಮಿಯ ಅಧ್ಯಕ್ಷನಾಗಿ ವಹಿಸಿಕೊಂಡ ಪ್ರಾರಂಭದಲ್ಲೇ ಹೇಳಿದ್ದೆ. ಅದರಂತೆ ಪ್ರತಿ ಜಿಲ್ಲೆಯಲ್ಲಿ ಚಕೋರ ತಂಡಗಳನ್ನು ರಚಿಸಿಕೊಂಡು, ವಾಟ್ಸ್ ಆ್ಯಪ್, ಫೇಸ್‌ಬುಕ್ ಮೂಲಕ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಲು ಪ್ರಯತ್ನಿಸಿದ್ದೇನೆಂದು ತಿಳಿಸಿದರು.
ರಾಜ್ಯದಲ್ಲಿ 27ಜಿಲ್ಲೆಗಳಲ್ಲಿ ಚಕೋರ ತಂಡಗಳನ್ನು ರಚಿಸಲಾಗಿದೆ. ಈ ಚಕೋರ ತಂಡಗಳ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಇಬ್ಬರನ್ನು ನೇಮಿಸಲಾಗಿದೆ. ಇವರು ವಾಟ್ಸ್ ಆ್ಯಪ್ ಗ್ರೂಪ್‌ಗಳನ್ನು ರಚಿಸಿಕೊಂಡು ಕವಿಗೋಷ್ಟಿ, ಸಾಹಿತ್ಯ ಸಂವಾದ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅದರ ಭಾಗವಾಗಿಯೆ ಇವತ್ತು ಕೋಲಾರದ ಚಕೋರ ತಂಡವು ತಾವು ಬರೆದ ಕಾವ್ಯಗಳನ್ನು ಹಾಡಿನ ರೂಪದಲ್ಲಿ ಹೊರ ತಂದಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಜಾನಕಿ, ಕೋಲಾರ ಚಕೋರ ತಂಡದ ಪ್ರತಿನಿಧಿ ನ.ಗುರುಮೂರ್ತಿ, ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಮತ್ತಿತರರಿದ್ದರು.
ಅಕಾಡೆಮಿಯಿಂದ ಯೂಟ್ಯೂಬ್ ಚಾನೆಲ್
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಬಳಸಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ವಿಸ್ತರಿಸಲು ಚಿಂತಿಸುತ್ತಿದ್ದು, ಇದರ ಭಾಗವಾಗಿ ಈಗಾಗಲೆ ವಾಟ್ಸ್ ಆ್ಯಪ್, ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈಗ ಇದರ ಮುಂದುವರೆದ ಭಾಗವಾಗಿ ಯೂಟ್ಯೂಬ್ ಚಾನೆಲ್‌ನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
-ಅರವಿಂದ ಮಾಲಗತ್ತಿ, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ