ಕಸದ ಲಾರಿ ಹರಿದು ವ್ಯಕ್ತಿ ಮೃತ್ಯು
Update: 2019-07-24 23:11 IST
ಬೆಂಗಳೂರು, ಜು.24: ಬಿಬಿಎಂಪಿ ಕಸದ ಲಾರಿ ಹರಿದು ರಸ್ತೆ ದಾಟುತ್ತಿದ್ದ ಗಾರೆಮೇಸ್ತ್ರಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದ್ವಾರಕಾನಗರದ ಕೃಷ್ಣನ್ (60) ಮೃತಪಟ್ಟ, ಮೇಸ್ತ್ರಿ ಎಂದು ತಿಳಿದುಬಂದಿದೆ.
ಜು.22ರಂದು ರಾತ್ರಿ 8ರ ವೇಳೆ ದ್ವಾರಕಾನಗರದ ರಸ್ತೆಯನ್ನು ದಾಟಿ ಮನೆಗೆ ಹೋಗುವಾಗ ಕಸದ ಲಾರಿ ಢಿಕ್ಕಿ ಹೊಡೆದ ಪರಿಣಾಮ, ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಕೃಷ್ಣನ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರು, ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.