ಸರಕಾರ ರಚನೆಗೆ ಹೈಕಮಾಂಡ್ ಸೂಚನೆ ನಿರೀಕ್ಷೆಯಲ್ಲಿ ವಿಪಕ್ಷ ನಾಯಕ ಬಿಎಸ್‌ವೈ

Update: 2019-07-24 18:01 GMT

ಬೆಂಗಳೂರು, ಜು. 24: ಹದಿನಾಲ್ಕು ತಿಂಗಳ ನಂತರ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನವಾಗಿದ್ದು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ನೂತನ ಸರಕಾರ ರಚಿಸಲು ಹೈಕಮಾಂಡ್ ಸೂಚನೆ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದ ಮೈತ್ರಿ ಸರಕಾರ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಡಾಲರ್ಸ್‌ ಕಾಲನಿಯಲ್ಲಿರುವ ಯಡಿಯೂರಪ್ಪ ನಿವಾಸ, ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ರಾಜಕೀಯ ಚಟುವಟಿಕೆಗಳು ಮನೆ ಮಾಡಿವೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಎಸ್‌ವೈ ಅವರನ್ನು ಅಭಿನಂದಿಸುತ್ತಿದ್ದಾರೆ.

ಸೂಚನೆಗಾಗಿ ಕಾಯುತ್ತಿದ್ದೇನೆ: ರಾಜ್ಯದಲ್ಲಿ ಮೈತ್ರಿ ಸರಕಾರ ಪತನಗೊಂಡಿದ್ದು, ಪರ್ಯಾಯ ಸರಕಾರ ರಚನೆಯ ಹಕ್ಕು ಮಂಡಿಸುವ ಸಂಬಂಧ ಪಕ್ಷದ ಬಿಜೆಪಿ ಕೇಂದ್ರ ನಾಯಕರ ಸೂಚನೆಗಾಗಿ ಕಾಯುತ್ತಿದ್ದೇನೆ ಎಂದು ವಿಪಕ್ಷ ನಾಯಕ ಯಡಿಯೂರಪ್ಪತಿಳಿಸಿದ್ದಾರೆ.

ಬುಧವಾರ ಇಲ್ಲಿನ ಚಾಮರಾಜಪೇಟೆಯಲ್ಲಿನ ಆರೆಸ್ಸೆಸ್ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ಸೂಚನೆಗಾಗಿ ಕಾಯುತ್ತಿದ್ದೇನೆ. ದಿಲ್ಲಿಯಿಂದ ಸೂಚನೆ ಬಂದ ತಕ್ಷಣ ಶಾಸಕಾಂಗ ಸಭೆ ಕರೆಯುತ್ತೇನೆ. ಸಭೆಯ ನಂತರ ರಾಜಭವನಕ್ಕೆ ತೆರಳಿ ನೂತನ ಸರಕಾರ ರಚಿಸುವ ಹಕ್ಕು ಮಂಡಿಸುವೆ ಎಂದು ಹೇಳಿದರು.

ನಾನು ಆರೆಸ್ಸೆಸ್ ಮೂಲದಿಂದ ಬಂದವನಾಗಿದ್ದರಿಂದಲೇ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಹೀಗಾಗಿ ಆರೆಸ್ಸೆಸ್ ಮುಖಂಡರ ಸಲಹೆ ಪಡೆದುಕೊಳ್ಳಲು ಕೇಶವ ಕೃಪಾ ಕಚೇರಿಗೆ ಆಗಮಿಸಿದ್ದೇನೆ ಎಂದು ಬಿಎಸ್‌ವೈ ಇದೇ ಸಂದರ್ಭದಲ್ಲಿ ತಿಳಿಸಿದರು.

ಯಡಿಯೂರಪ್ಪಅವರು ನಾಳೆ(ಜು.25) ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚಿಸಲು ಹಕ್ಕು ಮಂಡಿಸುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಯಡಿಯೂರಪ್ಪ ಅವರನ್ನು ಅಧಿಕೃತವಾಗಿ ಮತ್ತೊಮ್ಮೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ನಾಲ್ಕನೆ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲಿರುವ ಯಡಿಯೂರಪ್ಪ ಅವರ ಡಾಲರ್ಸ್‌ ಕಾಲನಿಯ ದವಳಗಿರಿ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸುತ್ತಿರುವ ಪಕ್ಷ ಕಾರ್ಯಕರ್ತರು ಹಾಗೂ ಮುಖಂಡರು ಶುಭ ಕೋರಿದ್ದು, ಸಿಹಿ ಹಂಚಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News