ನಿತ್ರಾಣವಾಗಿಸುವ ನ್ಯಾಯ

Update: 2019-07-24 18:32 GMT

ಕೇಂದ್ರ ಮತ್ತು ರಾಜ್ಯಗಳಲ್ಲಿ ಅಡಳಿತ ನಡೆಸುತ್ತಿರುವ ಸರಕಾರಗಳು ದಲಿತೇತರ ವರ್ಗಗಳನ್ನು ಒಳಗೊಳ್ಳುವ ಸಲುವಾಗಿ ಮೀಸಲಾತಿಯ ತಳಹದಿಯನ್ನು ವಿಸ್ತರಿಸುತ್ತಾ ಹಲವಾರು ಬಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳೆಂದು ವರ್ಗೀಕರಣವಾಗಿದ್ದ ಮೂಲಪಟ್ಟಿಯನ್ನು ಹಿಗ್ಗಿಸುತ್ತಿವೆ ಅಥವಾ ಒತ್ತುವರಿ ಮಾಡುತ್ತಿವೆ. ತಾವು ಮಾಡುತ್ತಿರುವ ಈ ವಿಸ್ತರಣೆಗೆ ಆ ಸರಕಾರಗಳು ಫಲಾನುಭವಿ ವರ್ಗಗಳ ಆರ್ಥಿಕ ಹಿಂದುಳಿದಿರುವಿಕೆಯನ್ನು ಸಮರ್ಥನೆಯನ್ನಾಗಿ ನೀಡುತ್ತಿವೆ. ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡದಲ್ಲಿ ಗಮನಿಸಿದರೂ ಸರಕಾರವು ಅನುಸರಿಸುತ್ತಿರುವ ಆರ್ಥಿಕ ಮಾನದಂಡಗಳು ಇವರಿಗಿಂತ ಆರ್ಥಿಕವಾಗಿ ಹಿಂದುಳಿದಿರುವ ಈವರೆಗಿನ ಮೀಸಲಾತಿ ಕೋಟಾದ ಸಾಮಾಜಿಕ ಗುಂಪುಗಳಿಗೆ ಮತ್ತಷ್ಟು ಅನ್ಯಾಯ ಮಾಡುತ್ತದೆಂದು ಹೇಳಬಹುದಾಗಿದೆ. ಆದರೆ ಈಗ ನಾವು ಕೇಳಬೇಕೆಂದಿರುವ ಪ್ರಶ್ನೆಯೇನೆಂದರೆ ಕೋಟಾ ಮಾನದಂಡದ ಅರ್ಥವ್ಯತ್ಯಾಸಗಳು ಕೇವಲ ಶೇ.10-13ರಷ್ಟು ಜಾತಿಗಳ ವಿಷಯಕ್ಕೆ ಮಾತ್ರ ಬಂದು ನಿಂತುಹೋಗುವುದೇಕೆ ಎಂಬುದೇ ಆಗಿದೆ.

ಏಕೆಂದರೆ ಅಂತಹ ಮಾನದಂಡವೂ ಸಹ ನಮ್ಮ ಸಾಮಾಜಿಕ ವಲಯದಲ್ಲಿ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಗುಂಪುಗಳಿಗೆ ಅನ್ವಯವಾಗುವುದರಿಂದ ಪ್ರಾರಂಭವಾಗಬೇಕಲ್ಲವೇ? ಪ್ರಾಯಶಃ ಈಗ ಜಾರಿಯಾಗುತ್ತಿರುವ ಹೊಸ ಕೋಟಾ ಪದ್ಧತಿಯ ಹಿಂದಿರುವ ರಾಜಕೀಯದಲ್ಲಿ ಇದಕ್ಕೆ ಉತ್ತರಗಳು ಸಿಗಬಹುದು. ಆ ರಾಜಕೀಯದ ಪ್ರಕಾರ ಹಾಲಿ ಅಧಿಕಾರದಲ್ಲಿರುವವರಿಗೆ ಚುನಾವಣೆಗಳಲ್ಲಿ ಗೆಲ್ಲಲು ಅಲ್ಪಸಂಖ್ಯಾತರ ಬೆಂಬಲವು ಅಷ್ಟೇನೂ ಮುಖ್ಯವಲ್ಲ. ಇದರ ಜೊತೆಗೆ ಈ ಹೊಸ ಕೋಟಾ ಪದ್ಧತಿಗೆ ಮತ್ತೊಂದು ಅಲಗೂ ಇದೆ. ಹೊಸ ಮೀಸಲಾತಿಗಾಗಿ ರೂಪಿಸಲಾಗುತ್ತಿರುವ ಕೋಟಾ ಪದ್ಧತಿಯು ನಮ್ಮ ಸಂವಿಧಾನ ಕರ್ತರು ಮನಗಂಡಿದ್ದ ‘ಪ್ರಗತಿಪರ’ ನಿಯಮಗಳಿಂದಲೂ ದೂರ ಸರಿಯುತ್ತಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಾಗ ವ್ಯಕ್ತವಾಗುವ ಮೇಲ್ಜಾತಿ ಪೂರ್ವಗ್ರಹಗಳನ್ನು ತಡೆಗಟ್ಟುವುದೇ ನಮ್ಮ ಸಂವಿಧಾನದ ಮೂಲ ಚೌಕಟ್ಟಿನಲ್ಲಿದ್ದ ಕೊಟಾ ಪದ್ಧತಿಯ ಪ್ರಮುಖ ಆಶಯವಾಗಿತ್ತು. ಈ ಕಾರಣಕ್ಕಾಗಿಯೇ ಅಮೆರಿಕದಲ್ಲಿ ಅನುಸರಿಸಲಾಗುತ್ತಿರುವ ಸದುತ್ತೇಜನ ಪದ್ಧತಿಯ ಬದಲಿಗೆ (ಅಫಿರ್ಮೇಟೀವ್ ಆ್ಯಕ್ಷನ್) ಬದಲಿಗೆ ಭಾರತದಲ್ಲಿ ಕಡ್ಡಾಯ ಮೀಸಲು ಕೋಟಾ ಪದ್ಧತಿಯನ್ನು ಜಾರಿ ಮಾಡಲಾಯಿತು.

ಏಕೆಂದರೆ ಸದುತ್ತೇಜನ ಪದ್ಧತಿಯು ಅಂತಿಮವಾಗಿ ಅವಕಾಶಗಳನ್ನು ಪಡೆದುಕೊಳ್ಳಲು ಬೇಕಾದ ಪ್ರಾರಂಭಿಕ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆಯಷ್ಟೇ ಆಗಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಸದುತ್ತೇಜನ ಪದ್ಧತಿಯು ಅಂತಿಮವಾಗಿ ಅವಕಾಶಗಳನ್ನು ಒದಗಿಸುವುದನ್ನೇನು ಖಾತರಿ ಮಾಡುವುದಿಲ್ಲ. ಈಗ ಜಾರಿಗೆ ಬರಲಿರುವ ಹೊಸಾ ಕೋಟಾ ಪದ್ಧತಿಯು ಒಂದೇ ಬಗೆಯ ಸಾಮಾಜಿಕ ಹಿನ್ನೆಲೆಯುಳ್ಳ ಸ್ಪರ್ಧಿಗಳು ಮತ್ತು ಆಯ್ಕೆದಾರರ ಮಧ್ಯೆ ಏರ್ಪಡುವ ಜಾತಿ ಅನುಕಂಪವನ್ನು ಮಾತ್ರ ತಟಸ್ಥಗೊಳಿಸಬಹುದು. ಅಂತಹ ಸಂದರ್ಭಗಳಲ್ಲಿ ಆಯ್ಕೆದಾರರು ಅಮೂರ್ತವಾದ ಸಾರ್ವತ್ರಿಕ ಮಾನದಂಡಗಳನ್ನು ಅನುಸರಿಸುತ್ತಾರೋ ಅಥವಾ ಮೇಲ್ಜಾತಿಗಳೊಳಗಿನ ಉಪಜಾತಿ ಆಧಾರಿತ ಅನುಕಂಪವನ್ನು ಅನುಸರಿಸುತ್ತಾರೋ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೊಸ ಕೋಟಾ ಪದ್ಧತಿಯ ಫಲಾನುಭವಿಗಳು ಮತ್ತು ಅದನ್ನು ನೀಡುತ್ತಿರುವ ಸರಕಾರಗಳು ಈ ಅವಕಾಶಗಳು ಕೇವಲ ಸರಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾದದ್ದು ಎಂಬುದನ್ನು ಮರೆಯುತ್ತಾರೆ. ಅಂದರೆ ಈ ಮೇಲ್ಜಾತಿ ಫಲಾನುಭವಿಗಳೂ ಸಹ ಮಾರುಕಟ್ಟೆ ಮತ್ತು ಖಾಸಗಿ ಕ್ಷೇತ್ರಗಳು ತಮ್ಮನ್ನು ಹೊರದಬ್ಬುವ ಕೋಟೆಗಳನ್ನು ರಚಿಸಿಕೊಂಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ ಎಂದರ್ಥ.

ಇಂತಹ ನೀತಿಗಳು ಸರಕಾರಿ ಉದ್ಯೋಗಗಳ ಮೇಲೆ ಅತಿಯಾಗಿ ಅವಲಂಬಿಸಬೇಕಾದ ಸ್ಥಿತಿಗೆ ದೂಡಲ್ಪಟ್ಟಿರುವ ಫಲಾನುಭವಿಗಳು ಸಹ ಖಾಸಗಿ ಕ್ಷೇತ್ರವನ್ನು ಪ್ರಶ್ನಿಸದಂತಹ ಮನೋಭಾವವನ್ನು ಸೃಷ್ಟಿಸುತ್ತದೆ. ಆದರೆ ಒಂದು ನಿರ್ದಿಷ್ಟ ಜಾತಿಯ ಒಳಗಿನ ಪರಿಸರದಲ್ಲಿದ್ದು ನೋಡುವುದಾದರೆ ಕೋಟಾ ವ್ಯವಸ್ಥೆಯನ್ನು ವಿಸ್ತರಿಸುವುದರಿಂದ ಹಲವು ಸೌಲಭ್ಯಗಳಿವೆ. ಈ ನೀತಿಯ ಹಿಂದಿನ ಉದ್ದೇಶವೇನೆಂದರೆ ದಲಿತೇತರ, ಹಿಂದುಳಿದ ಜಾತಿಯೇತರ ಮೇಲ್ಜಾತಿ ಫಲಾನುಭವಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಪರ್ಯಾಯ ಅವಕಾಶಗಳನ್ನು ಕಲ್ಪಿಸಿಕೊಡುವುದಾಗಿದೆ ಎಂದುಕೊಳ್ಳಬಹುದು. ಆದರೆ ವಾಸ್ತವದಲ್ಲಿ ಕೋಟಾ ಪದ್ಧತಿಯ ಕತ್ತು ಹಿಸುಕುವ ಈ ಬಗೆಯ ಕಾರಣಸರಣಿಗಳು ಆಂತರಿಕವಾಗಿ ಮತ್ತು ಬಾಹ್ಯವಾಗಿ ಎರಡೂ ಕಡೆಯಿಂದಲೂ ಹೊರದೂಡಲ್ಪಡುವ ಪ್ರಕ್ರಿಯೆಗಳನ್ನು ಗರ್ಭದಲ್ಲಿಟ್ಟುಕೊಂಡಿರುತ್ತದೆ. ಅವಕಾಶಗಳ ಸಂರಚನೆಗಳ ಮೂಲಕ ಸ್ಪರ್ಧೆಯ ನೀತಿ ಮತ್ತು ಪ್ರಕ್ರಿಯೆಗಳನ್ನು ಮುಂದುವರಿಸುವ ಧೋರಣೆಯು ಈಗಾಗಲೇ ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿ ಕಂಡುಬಂದಿರುವಂತೆ ಆಂತರಿಕ ವರ್ಗ ವ್ಯತ್ಯಾಸಗಳಿಗೆ ಈಡುಮಾಡಿಕೊಡುತ್ತದೆ.

ಆದರೆ ಇಂಥ ವರ್ಗ ವ್ಯತ್ಯಾಸಗಳು ಅಂತಿಮವಾಗಿ ಒಬ್ಬ ವ್ಯಕ್ತಿಯನ್ನು ಜಾತಿಯ ಮತ್ತು ಜಾತಿಪ್ರಜ್ಞೆಯ ಊರುಗೋಲಿನ ಆಧಾರವಿಲ್ಲದ ಪರಿಪೂರ್ಣ ವ್ಯಕ್ತಿಯನ್ನಾಗಿಸುವುದರಿಂದ ಅದು ಸ್ವಾಗತಾರ್ಹವೆಂಬ ಯಥಾಸ್ಥಿತಿವಾದಿ ಪ್ರತಿವಾದಗಳೂ ಇವೆ. ಈ ಕೋಟಾ ಪದ್ಧತಿಯು ಆಧುನಿಕ ತಳಹದಿಯಲ್ಲಿ ಒಂದು ಜಾತಿಯ ಒಬ್ಬ ವ್ಯಕ್ತಿ ಅದೇ ಜಾತಿಯ ಮತ್ತೋರ್ವ ವ್ಯಕ್ತಿಯ ಜೊತೆ ಸ್ಪರ್ಧೆೆಗಿಳಿಯುವಂತೆ ಮಾಡಿ ವ್ಯಕ್ತಿಯ ಜಾತಿ ಪ್ರಜ್ಞೆಯನ್ನು ಮಾತ್ರವಲ್ಲದೆ ಜಾತಿ ಆಧಾರಿತ ನೈತಿಕ ಪ್ರಜ್ಞೆಯನ್ನೇ ನಾಶಮಾಡಲು ಅನುಗುಣವಾದ ಪರಿಸರವನ್ನು ಸೃಷ್ಟಿಸುತ್ತದೆ. ಆದರೆ ಇವೆಲ್ಲವೂ ತನ್ನಂತೆ ತಾನೇ ಆಗಿಬಿಡುವುದಿಲ್ಲ. ಆಧುನಿಕತೆಯು ಮುಂದಿಡುವ ಸವಾಲುಗಳನ್ನು ಎದುರಿಸಲಾಗದೆ ವ್ಯಕ್ತಿಗತ ಬಿಕ್ಕಟ್ಟುಗಳಿಗೆ ಗುರಿಯಾಗುವ ವ್ಯಕ್ತಿಗಳು ಜಾತಿಯೊಳಗಿನ ಸಂಪನ್ಮೂಲಗಳ ಮೊರೆ ಹೋಗುತ್ತಾರೆ. ಇದು ಒಂದು ‘ಆಧುನಿಕತೆಯ ಅಹಮಿಕೆ’ಯಾಗಿದ್ದು ಮೀಸಲಾತಿಯಿಂದ ದೊರೆಯುವ ವ್ಯಕ್ತಿಗತ ಯಶಸ್ಸಿನಿಂದ ನಿಯಂತ್ರಿಸಲಾಗುವುದಿಲ್ಲ. ಮತ್ತೊಂದು ಕಡೆ ನ್ಯಾಯ ವ್ಯವಸ್ಥೆಯ ವಿಸ್ತರಣೆಯ ಈ ಸ್ವರೂಪಗಳು ಅದರ ಫಲಾನುಭವಿಗಳ ಸಾಮಾಜಿಕ ಅಸ್ಮಿತೆಗಳ ಜೊತೆಗೆ ಬೆಸೆದುಕೊಂಡು ಕೋಟಾ ವ್ಯವಸ್ಥೆಗೂ ವಿಸ್ತರಿಸಿರುವ ಕಳಂಕವನ್ನು ನಿವಾರಿಸುತ್ತದೆಂಬ ನಿರೀಕ್ಷೆಯಿದೆ.

ಆಗೆಲ್ಲ ಮೇಲ್ಜಾತಿ ಗಳು ದಲಿತ ಮತ್ತು ಸಾಮಾಜಿಕ ನ್ಯಾಯ ಎಂಬ ಪದಗಳನ್ನು ಸಮಾನಾರ್ಥಕವಾಗಿ ಬಳಸುತ್ತಿದ್ದರು. ಹೀಗಾಗಿ, ಈ ಹೊಸ ಕೋಟಾ ವ್ಯವಸ್ಥೆಯು ಪರಿಚಯವಾಗುವ ಮೊದಲು ಮೀಸಲಾತಿ ವಿರೋಧಿಗಳು ಸಾಮಾಜಿಕ ನ್ಯಾಯ ಮತ್ತು ದಲಿತ ಎಂಬ ಪದಗಳನ್ನು ಅವಹೇಳನಾರ್ಥದಲ್ಲಿ ಬಳಸುತ್ತಿದ್ದರು. ಕನಿಷ್ಠ ಈ ಹೊಸ ಕೋಟಾ ಪದ್ಧತಿಯ ಮೂಲಕವಾದರೂ ಅದರ ಫಲಾನುಭವಿಗಳು ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆಯ ವಿಶ್ವಾತ್ಮಕ ಅರ್ಥವನ್ನು ಮನಗಂಡು ಅದರ ಆದರ್ಶಗಳನ್ನು ಅರ್ಥಮಾಡಿಕೊಳ್ಳಬಹುದೆಂದು ಭಾವಿಸಬಹುದು. ಹಾಗಾದಲ್ಲಿ ಸಾಮಾಜಿಕ ನ್ಯಾಯವೆಂಬ ಪರಿಕಲ್ಪನೆಗೆ ಸಾರ್ವತ್ರಿಕ ಗೌರವವೂ ದಕ್ಕಬಹುದು. ಒಂದು ಸಾರ್ವತ್ರಿಕ ಪರಿಕಲ್ಪನೆಯಾದ ಸಾಮಾಜಿಕ ನ್ಯಾಯವೆಂಬ ಆದರ್ಶವನ್ನು ಅದರ ತತ್‌ಕ್ಷಣದ ಸಾಮಾಜಿಕ ಫಲಾನುಭವಿ ಗುಂಪುಗಳಾದ ದಲಿತ ಮತ್ತು ಆದಿವಾಸಿಗಳಿಗೆ ಮಾತ್ರ ಸೀಮಿತಗೊಳಿಸುವ ದುರಂತವು ತಪ್ಪಬಹುದು. ಅಂತಹ ಒಂದು ಆದರ್ಶ ಧೋರಣೆಯು ಈ ಪರಿಕಲ್ಪನೆಯು ಅರ್ಥವ್ಯಾಖ್ಯಾನದ ಬಿಡುಗಡೆಯನ್ನೂ ಪಡೆಯಬಹುದು ಮತ್ತು ಬಿಗಡಾಯಿಸಿರುವ ಸಾಮಾಜಿಕ ಸಂಬಂಧಗಳೂ ಸಹ ಸುಧಾರಿಸಬಹುದು.


ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News