ಶ್ವಾಸ ಹೊರಬಿಡುವಾಗಲೂ ಆಮ್ಲಜನಕ ನೀಡುವ ಏಕೈಕ ಪ್ರಾಣಿ ದನ ಎಂದ ಉತ್ತರಾಖಂಡ ಸಿಎಂ!

Update: 2019-07-26 10:12 GMT

ಡೆಹ್ರಾಡೂನ್: ಶ್ವಾಸ ಹೊರಬಿಡುವಾಗಲೂ ಆಮ್ಲಜನಕ ನೀಡುವ ಏಕೈಕ ಪ್ರಾಣಿ ದನ ಆಗಿದೆ, ಎಂದು ಹೇಳುವ ಮೂಲಕ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿವಾದಕ್ಕೀಡಾಗಿದ್ದಾರೆ. ದನಕ್ಕೆ ಮಸಾಜ್ ಮಾಡಿದರೆ ಉಸಿರಾಟ ಸಮಸ್ಯೆ ನಿವಾರಿಸಬಹುದೆಂದೂ ಅವರು ಹೇಳಿಕೊಂಡಿದ್ದಾರೆ.

ದನದ ಹಾಲು ಹಾಗೂ ಗೋಮೂತ್ರದ ಔಷಧೀಯ ಗುಣಗಳನ್ನು ರಾವತ್ ಡೆಹ್ರಾಡೂನ್ ನಲ್ಲಿ ನಡೆದ ಸಮಾರಂಭದಲ್ಲಿ ವಿವರಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ದನಗಳು ಉಸಿರು ಒಳಗೆ ಎಳೆದುಕೊಳ್ಳುವಾಗಲೂ ಆಮ್ಲಜನಕ ಬಳಸುತ್ತವೆ ಹಾಗೂ ಶ್ವಾಸ ಹೊರಕ್ಕೆ ಬಿಡುವಾಗಲೂ ಆಮ್ಲಜನಕ ನೀಡುತ್ತವೆ ಎಂದು ಹೇಳಿದ ಅವರು ದನದ ಹತ್ತಿರದಲ್ಲಿಯೇ ವಾಸಿಸುವವರು ಕ್ಷಯ ರೋಗದಿಂದಲೂ ಗುಣಮುಖರಾಗುತ್ತಾರೆಂದು ಹೇಳಿಕೊಂಡಿದ್ದಾರೆ.

ಉತ್ತರಾಖಂಡದಲ್ಲಿರುವ ಸಾಮಾನ್ಯ ನಂಬಿಕೆಗಳನ್ನೇ ಮುಖ್ಯಮಂತ್ರಿ ಹೇಳಿದ್ದಾರೆಂದು ಅವರ ಕಾರ್ಯಾಲಯ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದೆ. "ದನದ ಹಾಲು ಹಾಗೂ ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಜನರಿಗೆ ತಿಳಿದಿರುವ ಹೊರತಾಗಿ ದನಗಳು ತಮಗೆ ಆಮ್ಲಜನಕವನ್ನೂ ನೀಡುತ್ತವೆ ಎಂದು ಇಲ್ಲಿನ ಜನರು ನಂಬಿದ್ದಾರೆಂದು,'' ಸಿಎಂ ಕಾರ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರಾಖಂಡದ ಬಾಗೇಶ್ವರ್ ಜಿಲ್ಲೆಯಲ್ಲಿರುವ ಗರುಡ್ ಗಂಗಾ ಎಂಬ ನದಿಯ ನೀರನ್ನು ಕುಡಿದ ಗರ್ಭಿಣಿಯರು ಸಿಸೇರಿಯನ್ ಹೆರಿಗೆಯನ್ನು ನಿವಾರಿಸಬಹುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ನೈನಿತಾಲ್ ಶಾಸಕ್ ಅಜಯ್ ಭಟ್ಟ್ ಹೇಳಿದ ಮರುದಿನವೇ ಮುಖ್ಯಮಂತ್ರಿಯ ಈ ಹೇಳಿಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News