ಕಪಿಲ್ ದೇವ್ ನೇತೃತ್ವದ ಸಮಿತಿಯಿಂದ ನೂತನ ಕ್ರಿಕೆಟ್ ಕೋಚ್ ಆಯ್ಕೆ

Update: 2019-07-26 19:00 GMT

ಹೊಸದಿಲ್ಲಿ, ಜು.26: ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್‌ನ್ನು ಆಯ್ಕೆ ಮಾಡಲಿದೆ.

ನೂತನ ಕೋಚ್ ಆಯ್ಕೆಗೆ ಸಂದರ್ಶನ ಆಗಸ್ಟ್ ಮಧ್ಯಭಾಗದಲ್ಲಿ ನಡೆಯಲಿದೆ. ಇಂದು ನಡೆದ ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಪಿಲ್ ದೇವ್ ನೇತೃತ್ವದ ಸಮಿತಿಯು ಕಳೆದ ಡಿಸೆಂಬರ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಕೋಚ್‌ನ್ನು ಆಯ್ಕೆ ಮಾಡಿತ್ತು. ಸಮಿತಿಯಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಮತ್ತು ಮಾಜಿ ಕೋಚ್ ಅಂಶುಮನ್ ಗಾಯಕ್ವಾಡ್ ಇದ್ದಾರೆ. ಭಾರತದ ಹಾಲಿ ಕೋಚ್ ರವಿ ಶಾಸ್ತ್ರಿ ಗುತ್ತಿಗೆ ಅವಧಿಯನ್ನು ವೆಸ್ಟ್‌ಇಂಡೀಸ್ ಪ್ರವಾಸ ಮುಗಿಯುವ ತನಕ ವಿಸ್ತರಿಸಲಾಗಿದೆ. ವಿಂಡೀಸ್ ವಿರುದ್ಧ ಭಾರತದ ಪ್ರವಾಸ ಸರಣಿ ಆಗಸ್ಟ್ 3ರಿಂದ ಸೆಪ್ಟಂಬರ್ 3ರ ತನಕ ನಡೆಯಲಿದೆ. ರವಿ ಶಾಸ್ತ್ರಿ ಎರಡನೇ ಅವಧಿಗೆ ಕೋಚ್ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುವುದನ್ನು ನಿರೀಕ್ಷಿಸಲಾಗಿದೆ. ಸಿಎಸಿ ಸದಸ್ಯರಾದ ಸೌರವ್ ಗಂಗುಲಿ ಮತ್ತು ವಿವಿಎಸ್ ಲಕ್ಷ್ಮಣ್ ವಿರುದ್ಧ ಇರುವ ಸ್ವಹಿತಾಸಕ್ತಿ ಸಂಘರ್ಷ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಮಾರ್ಗದರ್ಶನಕ್ಕಾಗಿ ಆಡಳಿತಾಧಿಕಾರಿಗಳ ಸಮಿತಿ ಕಾಯುತ್ತಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News