×
Ad

ಪೊಲೀಸ್ ಅಧಿಕಾರಿಗಳೊಂದಿಗೆ ಬಿಎಸ್‌ವೈ ಸಭೆ

Update: 2019-07-27 22:27 IST

ಬೆಂಗಳೂರು, ಜು.27: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಬಿ.ಎಸ್.ಯಡಿಯೂರಪ್ಪ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ಕಾನೂನು ಸುವ್ಯವಸ್ಥೆಯ ಬಗ್ಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು.

ಶನಿವಾರ ನಗರದ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ನಿವಾಸಕ್ಕೆ ತಮ್ಮನ್ನು ಅಭಿನಂದಿಸಲು ಆಗಮಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅನೌಪಚಾರಿಕವಾಗಿ ಸಭೆ ನಡೆಸಿದ ಯಡಿಯೂರಪ್ಪ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ರಾಜ್ಯದ ಜನರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿ ಜನರ ಅಹವಾಲುಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ನೀಡಬೇಕು. ಯಾವುದೇ ವಿಚಾರಗಳಲ್ಲೂ ನಿರ್ಲಕ್ಷ್ಯ ಬೇಡ. ಮುಂದೆ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಮತ್ತು ಕಟ್ಟಳೆಗಳ ಪಾಲನೆ ಸಂಬಂಧ ಸೂಕ್ತ ಸಲಹೆ ಸೂಚನೆ ನೀಡುತ್ತೇನೆ ಎಂದು ಅವರು ಈ ಸಭೆಯಲ್ಲಿ ಹೇಳಿದರು ಎಂದು ತಿಳಿದುಬಂದಿದೆ.

ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇರಿದಂತೆ ನಗರದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News