ಚಂದ್ರನಲ್ಲಿ ಮೊದಲು ಮಾನವ ಕಾಲಿಟ್ಟ ಘಳಿಗೆಗೆ ಈಗ ಸುವರ್ಣ ಸಂಭ್ರಮ!

Update: 2019-07-27 18:36 GMT

ನಮಗೆ ಅತ್ಯಂತ ಸಮೀಪ ಇರುವ ಚಂದಿರನ ಮೇಲೆ ಪಾದಾರ್ಪಣೆ ಮಾಡುವ ಸಕಲ ಸಿದ್ಧತೆಗಳೂ ನಡೆದವು. ‘ಜೀವಕ್ಕೆ ಹೆದರಿ ಈ ಯಾನಗಳನ್ನು ನಿಲ್ಲಿಸುವುದು ಮನುಷ್ಯನ ಸಾಹಸಕ್ಕೆ ಕಳಂಕ’ ಎನ್ನುವ ಸಾಹಸಿ ಯಾತ್ರಿ ಜಾನ್ ಗ್ಲೆನ್‌ನ ನುಡಿಗಳು ಅಂತರಿಕ್ಷ ಪಯಣಕ್ಕೆ ಮನುಷ್ಯನ ಸಾಹಸಿ ಪ್ರಜ್ಞೆ ಮತ್ತು ಪ್ರೇರಣೆಯನ್ನು ನೀಡಿದವು. ಕುತೂಹಲ ಕೆರಳಿಸುವ ಸಂಗತಿಗಳಲ್ಲಿ ಚಂದ್ರನೂ ಒಬ್ಬ. ಚಂದ್ರ ಗೋಚರವಾದಾಗಲೆಲ್ಲ ‘ಆ ಚಂದ್ರನಲ್ಲಿಗೆ ಹೋಗಲು ಸಾಧ್ಯವೇ?’ ಎಂದು ನಾವು ಕುತೂಹಲದಿಂದ ಅಂದುಕೊಂಡದ್ದೂ ಇದೆ. ಈ ಕನಸು ಸಾಕಾರಗೊಂಡದ್ದು ಮಾತ್ರ 20ನೇ ಜುಲೈ 1969 ರಲ್ಲಿ. ಇಂದಿಗೆ ಬರೋಬ್ಬರಿ 50 ವರ್ಷಗಳಾದವು!

ಜುಲೈ -16 ರಂದು ಅಮೆರಿಕದ ಮೂವರು ಸಾಹಸಿ ಖಗೋಳ ಯಾತ್ರಿಗಳನ್ನು ಹೊತ್ತ ‘ಅಪೋಲೊ-11’ ನೌಕೆಯು ಚಂದ್ರನಲ್ಲಿಗೆ ಯಾತ್ರೆ ಬೆಳೆಸಿತ್ತು. ಇಂತಹ ಅದ್ಭುತ ಯಾತ್ರೆಯಲ್ಲಿ ಪಾಲ್ಗೊಂಡವರು ; ಅಮೆರಿಕದ ಕಮಾಂಡರ್ ನೀಲ್ ಆರ್ಮ್ ಸ್ಟ್ರಾಂಗ್ ( 5-ಆಗಸ್ಟ್-1930 ರಿಂದ 25-ಆಗಸ್ಟ್-2012), ಕಮ್ಯಾಂಡರ್ ಮಾಡ್ಯೂಲ್ ಪೈಲಟ್ ಮೈಕಲ್ ಕೊಲಿನ್ಸ್ ( 31-ಅಕ್ಟೋಬರ್-1930) ಹಾಗೂ ಲ್ಯೂನರ್ ಮಾಡ್ಯೂಲ್ ಪೈಲಟ್ ಎಡ್ವಿನ್ ಆಲ್ಟ್ರೀನ್ (20-ಜನವರಿ-1930 -). ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಮೊದಲು ಇಳಿದು ದಾಖಲೆ ನಿರ್ಮಿಸಿದರೆ, ನಂತರದಲ್ಲಿ ಆಲ್ಟ್ರೀನ್ ಇಳಿದರು. ಮೈಕಲ್ ಕೋಲಿನ್ಸ್ ಆಗಸದಲ್ಲಿ ತಾವು ಬಂದ ನೌಕೆಯಲ್ಲೇ ಇದ್ದುಕೊಂಡು ತಾಂತ್ರಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು.

ಇಂತಹ ಚಂದ್ರಯಾನಕ್ಕಾಗಿ ಅಪೋಲೊ ಸರಣಿ ನೌಕೆಗಳ ಪ್ರಯೋಗವನ್ನು ಅಮೆರಿಕ 21, ಫೆಬ್ರವರಿ 1967 ರಲ್ಲಿ ಆರಂಭಿಸಿತು. ಶನಿ ಹೆಸರಿನ ರಾಕೆಟ್ ನೌಕೆಗಳಿಂದ ಸೇವಾ ನೌಕೆ ಮತ್ತು ಚಂದ್ರನೌಕೆಗಳನ್ನು ಬೇರ್ಪಡಿಸಿ ಪುನಃ ಹಿಂದಕ್ಕೆ ಒಟ್ಟಾಗಿ ಕರೆತರುವ ಯೋಜನೆಯ ಪ್ರಯೋಗಗಳು ಆರಂಭವಾದವು. ‘ಅಪೋಲೊ ಯುಗ’ ಆರಂಭವಾಯಿತು ಅಂತಾನೇ ಹೇಳಬಹುದು. ಈವರೆಗೆ ಚಂದ್ರನತ್ತ ಮಾನವ ಸಹಿತ ಪ್ರಯಾಣವನ್ನು ಪರಿಗಣಿಸಿದ್ದ ರಶ್ಯ ತಾನೂ ಆ ದಾರಿಯಲ್ಲಿ ಯಶ ಪಡೆಯಲು 1964ರಲ್ಲಿ ಸೆರ್ಗಿ.ಪಿ.ಕೊರೊಲೋವ್ ಅಂತರಿಕ್ಷ ವಿಜ್ಞಾನಿಯ ನೇತೃತ್ವದಲ್ಲಿ ಸ್ಪರ್ಧೆಗಿಳಿಯಿತು. ರಶ್ಯದ ವಿಜ್ಞಾನಿಗಳ ಹಲವಾರು ತಾಂತ್ರಿಕ ಭಿನ್ನಾಭಿಪ್ರಾಯಗಳು ಈ ಯೋಜನೆಯನ್ನು ಜಗ್ಗಾಡಿದವು. 1968ರ ವೇಳೆಗೆ ಎನ್-1 ಮಾದರಿಯ 75 ಟನ್ ಭಾರ ಹೊರುವ ರಾಕೆಟ್‌ನ್ನು ಬಳಸಿ ಚಂದ್ರನ ಮೇಲೆ ಮಾನವ ನನ್ನು ಇಳಿಸುವ ಪ್ರಯತ್ನ ನಡೆಯಿತು. ಈ ಮಧ್ಯೆ ಕೊರೊಲೋವ್ ನಿಧನ ಹೊಂದಿದರು. ಕಾರಣ ಯೋಜನೆ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. 1964ರಲ್ಲಿ ಅಮೆರಿಕದ ಗೂಢಚಾರ ಉಪಗ್ರಹಗಳು ರಶ್ಯ ನಿರ್ಮಿಸುತ್ತಿರುವ ಭಾರೀ ಪ್ರಮಾಣದ ಉಡಾವಣಾ ಕೇಂದ್ರದ ಬಗ್ಗೆ ವರದಿ ನೀಡಿದವು. ತಕ್ಷಣ ಅಮೆರಿಕ ತನ್ನ ಕಾರ್ಯವನ್ನು ತ್ವರಿತಗೊಳಿಸಿತು. ಕೊನೆಗೆ ತಾನೇ ಮೊದಲು ಚಂದ್ರನಲ್ಲಿಗೆ ನೌಕೆಯನ್ನು ಕಳಿಸಿ ಮನುಷ್ಯ ಪಾದಾರ್ಪಣೆಯ ಖ್ಯಾತಿಗೆ ಪಾತ್ರವಾಯಿತು.

ಭೂಮಿಯಿಂದ ಚಂದ್ರನಿಗಿರುವ ದೂರ 3,84,400 ಕಿ.ಮೀ. ಸರಿಸುಮಾರು 4 ಲಕ್ಷ ಕಿ.ಮೀ. ನಮ್ಮ ಇಡೀ ಭೂಮಿಯನ್ನು 10 ಬಾರಿ ಸುತ್ತುಹಾಕುವಷ್ಟು ದೂರ ಅಂತಾನೇ ಹೇಳಬಹುದು!. 16, ಜುಲೈ 1969ರ ಮುಂಜಾನೆಯ 9:32 ಗಂಟೆಗೆ ಸರಿಯಾಗಿ 111 ಮೀಟರ್ ಉದ್ದದ ಅಂತರಿಕ್ಷ ನೌಕೆ ಅಪೋಲೊ-12ವು 2700 ಟನ್ ಭಾರದೊಡನೆ ಅಂತರಿಕ್ಷಕ್ಕೆ ಜಿಗಿಯಿತು. ಒಂಬತ್ತು ವರ್ಷಗಳ ಅವಧಿಯಲ್ಲಿ ನಡೆಸಿದ ಈ ಸಿದ್ಧತೆ ಅಪಾರ ಶ್ರಮದಿಂದ ಕೂಡಿತ್ತು. ವಿಜ್ಞಾನಿಗಳು, ತಂತ್ರಜ್ಞರು ಅನೇಕ ಪರೀಕ್ಷೆಗಳನ್ನು ನಡೆಸಿ, ಚಂದ್ರನ ಪರಿಸರದ ಮೇಲೆ ಮನುಷ್ಯನ ಓಡಾಟವನ್ನು ಸಾಧ್ಯವಾಗಿಸಿದರು. ಹಲವು ದಶಲಕ್ಷ ವಸ್ತುಗಳನ್ನು ಬಹುವಿಧವಾಗಿ ಪರೀಕ್ಷಿಸಿ ಈ ಅಪೋಲೊ ಸ್ಯಾಟರ್ನ್ ರಾಕೆಟ್‌ನ್ನು ಸಿದ್ಧಪಡಿಸಲಾಯಿತು. ಈ ವಾಹನಕ್ಕೆ ಸೂಕ್ತವಾದ ಇಂಧನವನ್ನು ಹೊಸದಾಗಿ ಸೃಷ್ಟಿಸಲಾಯಿತು. ಭೂ ಗುರುತ್ವದಿಂದ ಹೊರಜಿಗಿಯಲು ಈ ಭಾರೀ ನೌಕೆಗೆ 3,400 ಟನ್‌ಗಳ ನೂಕು ಬಲ ಬೇಕಿತ್ತು. ಆಗ ಅದರ ವರೆಗೆ ಕನಿಷ್ಠ ಗಂಟೆಗೆ 40 ಸಾವಿರ ಕಿ.ಮೀ. ಗಳಷ್ಟು ವೇಗದಿಂದ ಚಲಿಸುವ ನೌಕೆ ಭೂಮಿಯ ವಾತಾವರಣದೊಡನೆ ಘರ್ಷಿಸುತ್ತದೆ. ಇದರಿಂದ ಉಂಟಾಗುವ ತಾಪ 2,660 ಡಿಗ್ರಿಯಷ್ಟು. ಈ ತಾಪದಲ್ಲಿ ಕಬ್ಬಿಣ ಕರಗಿ ನೀರಾಗುತ್ತದೆ!. ಅಪೋಲೊ ನೌಕೆಯ ಪ್ರತಿ ವಸ್ತುವೂ ಮಾನವ ತಾನು ಆವರೆಗೆ ಸಾಧಿಸಿದ ತಂತ್ರ ಮತ್ತು ಯಂತ್ರ ವಿಜ್ಞಾನದ ಕೌಶಲ್ಯದ ಪರಮ ಸಾಧನೆಯಾಗಿತ್ತು.

ಮೊದಲ ಬಾರಿಗೆ ಅತ್ಯಂತ ವೇಗದ ನೌಕೆಯನ್ನು ನಿರ್ಮಿಸಲಾಯಿತು. ಈ ವೇಗ ನೌಕೆಯ ಇಂಧನ ದ್ರವ ಜಲಜನಕ, ಆಮ್ಲಜನಕ ಮತ್ತು ಸೀಮೆ ಎಣ್ಣೆಯ ಮಿಶ್ರಣದಿಂದ ತಯಾರಿಸಲಾಗಿತ್ತು. ಈ ದ್ರವಗಳನ್ನು -253 ಡಿಗ್ರಿಯಷ್ಟು ಸದಾ ತಂಪಾಗಿ ಇರಿಸುವ ಮತ್ತು ಅದನ್ನು ಕಾಯ್ದು ಕೊಳ್ಳುವ ವ್ಯವಸ್ಥೆ ಅತ್ಯಂತ ಪ್ರಮುಖ ಹಾಗೂ ಕ್ಲಿಷ್ಟಕರವಾಗಿತ್ತು. ಜೆಟ್ ವಿಮಾನದಂತೆ ಕಾರ್ಯ ನಿರ್ವಹಿಸುವ ಕ್ಷಿಪಣಿಯ ಇಂಜಿನನ್ನು ನಿಯಂತ್ರಿಸಲು ಕ್ಷೀಪ್ತ ನಿರ್ಧಾರಗಳು ಮಾನವರಿಗೆ ಅಸಾಧ್ಯ. ಇದರಿಂದ ಹೋಸ್ಟನ್ ನಿಯಂತ್ರಣ ಕೇಂದ್ರದ ಗಣಕ(ಕಂಪ್ಯೂಟರ್) ಇದರ ಸಂಪೂರ್ಣ ನಿಯಂತ್ರಣ ಮತ್ತು ಭೂಮಿಯಿಂದಲೇ ಎಲ್ಲ ಚಾಲನೆಯ ನಿರ್ದೇಶನಗಳನ್ನು ನೀಡುತ್ತಿತ್ತು. ಪ್ರತೀ ಸೆಕೆಂಡಿಗೆ 10 ಕಿ.ಮೀ ವೇಗದಲ್ಲಿದ್ದ ನೌಕೆಯ ನಿಯಂತ್ರಣವು ಗಣಕದಿಂದ ಮಾತ್ರ ಸಾಧ್ಯವಿತ್ತು. ಗಣಕವಿಲ್ಲದೆ ಹೋಗಿದ್ದರೆ ಈ ಪ್ರಯತ್ನ ಸಾಧ್ಯವೇ ಆಗುತ್ತಿರಲಿಲ್ಲ.ಚಂದ್ರನ ಮೇಲೆ ಇಳಿಯುವ ಮನುಕುಲದ ಕನಸನ್ನು ಅಪೋಲೊ-11 ರ ಧೀರ ಯಾತ್ರಿಗಳು ನನಸಾಗಿಸಿದರು. ಉಡಾವಣೆಗೆ 11 ಸೆಕೆಂಡುಗಳ ಮೊದಲು ಅಪೋಲೊ-11 ರ ನಿರ್ದೇಶಕ ಜೆನಿಕ್ರಾನ್ ‘ಹೊರಡಿ’ ಎನ್ನುವ ಸೂಚನೆ ಇತ್ತ. 3 ಸೆಕೆಂಡ್ ಮೊದಲು ಎಣಿಕೆ (ಕೌಂಟ್ ಡೌನ್) ಆರಂಭ. 3,2,1, ಸೊನ್ನೆ ಎನ್ನುತ್ತಲೇ ಅಪೋಲೊ-11 ನೌಕೆಯ ಐದು ಎಫ್ - 1 ಇಂಜಿನ್‌ಗಳನ್ನು ಒಮ್ಮೆಲೆ ಸಿಡಿಸಿದವು. ಆಕಾಶಕ್ಕೆ ಚಿಮ್ಮಿದ ಆ ನೌಕೆ ಮೋಡಗಳನ್ನು ಸೀಳಿ,ವಾಯುಗೋಳದೊಂದಿಗೆ ಹೋರಾಡುತ್ತ ಮುನ್ನಡೆಯಿತು. ‘ನಾವೀಗ ಹೊರಟಿದ್ದೇವೆ.... ನೌಕೆ ನಿಯಂತ್ರಣದಲ್ಲಿದೆ. ನಾವಿರುವ ಸ್ಥಳ ನಮಗೆ ಗೊತ್ತು’ ಎಂದು ಈ ನೌಕೆಯ ಚಾಲಕ ಕಾಲಿನ್ಸ್ ಭೂ ನಿಯಂತ್ರಣಕ್ಕೆ ತಿಳಿಸಿದ. 11 ಸೆಕೆಂಡ್ ಮತ್ತು 42 ಸೆಕೆಂಡುಗಳ ಅಂತರದಲ್ಲಿ ರಾಕೆಟ್ ಗಳು ಸಿಡಿದವು. ಭೂಮಿಯಿಂದ 4,800 ಕಿ.ಮೀ./ ದೂರದಲ್ಲಿ ಪ್ರತಿ ಸೆಕೆಂಡಿಗೆ 10 ಸಾವಿರ ಮೀಟರ್ ವೇಗದಲ್ಲಿ ಮುನ್ನುಗ್ಗುತ್ತಿರುವ ನೌಕೆ. ಭೂಮಿಯ ಗುರುತ್ವವನ್ನು ಮೀರಿ ಮುನ್ನಡೆಯಿತು. ಕಾಕಿನ್ಸ್, ಆಲ್ಟ್ರಿನ್ ಮತ್ತು ನೀಲ್ ಆರ್ಮ್ ಸ್ಟ್ರಾಂಗ್ ಈ ನೌಕೆಯ ಪಯಣಿಗರು. ಉಡಾವಣೆಯ ಒಂಭತ್ತು ಗಂಟೆಯ ನಂತರ 90 ಸಾವಿರ ಕಿ.ಮೀ. ದೂರದಲ್ಲಿತ್ತು. ಅಪೋಲೊ-11.

ಈ ಅಪೋಲೊ-11 ರ ಚಂದ್ರಯಾನ ಘಟಕ ‘ಈಗಲ್’ನ್ನು 4 ಲಕ್ಷ ಕಿ.ಮೀ. ಗಳಿಗೂ ಹೆಚ್ಚು ದೂರ ಕೊಂಡೊಯ್ದ ರಾಕೆಟ್‌ನ ಹೆಸರು ‘ಕೊಲಂಬಿಯಾ’. ‘ಈಗಲ್’ ಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸುವ ನೌಕೆಯಾದರೆ, ಆನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ತಂದಿಳಿಸುವ ಜವಾಬ್ದಾರಿ ‘ಕೊಲಂಬಿಯಾ’ ನಿರ್ವಹಿಸಿತ್ತು. ಯಾತ್ರಿಗಳನ್ನು ಹೊತ್ತುಕೊಂಡಿದ್ದ ಹಾಗೂ ಕಂಪ್ಯೂಟರಿನ ನಿಯಂತ್ರಣದಲ್ಲಿದ್ದ ‘ಈಗಲ್’ಗೆ ಚಂದ್ರನ ಮೇಲೆ ಇಳಿಯಲು ಸಮತಟ್ಟಾದ ಜಾಗವೇ ಸಿಗಲಿಲ್ಲ. ತಕ್ಷಣವೇ ನೌಕೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ನೀಲ್ ಆರ್ಮ್ ಸ್ಟ್ರಾಂಗ್,ತಮ್ಮ ಹುಡುಕಾಟವನ್ನು ಮುಂದುವರಿಸಿದರು.ಆ ಸಂದರ್ಭದಲ್ಲಿ ಆರ್ಮ್ ಸ್ಟ್ರಾಂಗ್‌ನ ಹೃದಯ ನಿಮಿಷಕ್ಕೆ 156ರಂತೆ ‘ಲಬ್, ಡಬ್......’! ಅಂತ ಜೋರಾಗಿ ಬಡಿದುಕೊಳ್ಳುತ್ತಿತ್ತು. ಚಂದ್ರನ ಸುತ್ತಮುತ್ತಲು ಹರಡಿರುವ ಕಲ್ಲು-ಮಣ್ಣುಗಳ ಗುಡ್ಡೆಗಳನ್ನು ಜಾಗರೂಕತೆಯಿಂದ ವೀಕ್ಷಿಸುತ್ತ ಸೆಕೆಂಡಿಗೆ ಒಂದು ಅಡಿಯಂತೆ ನೌಕೆಯನ್ನು ಇಳಿಸತೊಡಗಿದರು. ಆ ಸಂದರ್ಭದಲ್ಲಿ ನೌಕೆಯಲ್ಲಿ ಸೀಮಿತ ಇಂಧನವಿರುವುದು ಈ ಯಾನಿಗಳಿಗೆ ಆತಂಕ ಮೂಡಿಸಿತ್ತು. ಕೊನೆಗೂ ಅವರಿಗೆ ನೌಕೆಯನ್ನು ಇಳಿಸಲು ಯೋಗ್ಯವಾದ ಸಮತಟ್ಟಾದ ಜಾಗ ಸಿಕ್ಕಿತು. ಆಕ್ಷಣವೇ ಅವರು ತಮ್ಮ ರೇಡಿಯೊವನ್ನು ಆನ್ ಮಾಡಿಕೊಂಡು ‘‘ಹೋಸ್ಟನ್ , ವಿ, ಉಹ್....’’ ಎಂದು ಹರ್ಷದಿಂದ ಉಧ್ಘರ್ಸಿಸುತ್ತ, ತಮ್ಮ ಅಧಿಕೃತ ಭಾಷೆಯಲ್ಲಿ ಭೂಮಿಗೆ ಸಂದೇಶ ರವಾನಿಸಿದರು. ‘ಟ್ರಾಂಕ್ವಿಲಿಟಿ ಬೇಸ್ ಹಿಯರ್. ದಿ ಈಗಲ್ ಹ್ಯಾಸ್ ಲ್ಯಾಂಡೆಡ್’ ಎಂಬ ವಾಕ್ಯ ಐತಿಹಾಸಿಕ ದಾಖಲಾಯಿತು. ಮೊದಲು ತಮ್ಮ ಎಡ ಪಾದವನ್ನು ಚಂದ್ರನ ಮೇಲೆ ಇಟ್ಟ ನೀಲ್ ಆರ್ಮ್ ಸ್ಟ್ರಾಂಗ್ ಅವರ ವಿಶೇಷ ಬೂಟ್‌ಗೆ ಚಂದ್ರನ ಧೂಳು ಮೆತ್ತಿಕೊಂಡಿತು. ಅದೇ ಸಂದರ್ಭದಲ್ಲಿ ಆರ್ಮ್ ಸ್ಟ್ರಾಂಗ್ ('That's one small step for a man, one giant leap for mankind'')  ಮನುಷ್ಯನಿಗೆ ಇದೊಂದು ಸಣ್ಣ ಹೆಜ್ಜೆ. ಆದರೆ ಮನುಕುಲದ ಇತಿಹಾಸದಲ್ಲಿ ಮಹಾ ಜಿಗಿತ! ಎಂದು ಹೇಳಿಬಿಟ್ಟರು. ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಸುಲಭವಾಗಿ ನಡೆಯಬಹುದೆಂದು ತಿಳಿದನು. ಪಾದಗಳನ್ನು ಅಲ್ಲಿ ಊರುತ್ತಿದ್ದಂತೆ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತಹ ಬೂಟಿನ ಗುರುತುಗಳು ಮೂಡುತ್ತಿದ್ದವು. ಝೀರೋ ಗ್ರಾವಿಟಿಯಲ್ಲಿ ನಡೆಯುವುದೇ ಒಂದು ಸಾಹಸದ ಕೆಲಸ!. ನೀಲ್ ಆರ್ಮ್ ಸ್ಟ್ರಾಂಗ್ ಇಳಿದಾದ 19 ನಿಮಿಷಗಳ ನಂತರ ಆಲ್ಟ್ರಿನ್ ಇಳಿದರು. ಅವರಿಬ್ಬರೂ ತಾವು ತಂದ ಕ್ಯಾಮರಾವನ್ನು ಜೋಡಿಸಿ ನೆಲಕ್ಕೆ ಊರಿದರು. ಅಲ್ಲೇ ಅಮೆರಿಕದ ಧ್ವಜವನ್ನು ಸ್ಥಾಪಿಸಿ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು. ಅಲ್ಲೇ ಒಂದಷ್ಟು ಕಲ್ಲು ಮಣ್ಣನ್ನು ಸಂಗ್ರಹಿಸಿ ಅದೇ ಸ್ಥಳದಲ್ಲಿ ಕೆಲವು ಪ್ರಯೋಗಗಳನ್ನು ಮಾಡಿದರು. ಅಲ್ಲಿಂದ ಅವರು ಭೂಮಿಗೆ ಬಂದಾಗ 382 ಕಿಲೋ ಚಂದ್ರ ಶಿಲೆಗಳನ್ನು ತಮ್ಮಾಂದಿಗೆ ತಂದಿದ್ದರು. ಇಂತಹ ಅವಿಸ್ಮರಣೀಯ ಘಟನೆಯನ್ನು ಅಂದು ಜಗತ್ತಿನಾದ್ಯಂತ 50 ಕೋಟಿಗೂ ಹೆಚ್ಚು ಜನ ಟಿ.ವಿ.ಯಲ್ಲಿ ವಿಕ್ಷೀಸಿ ಇತಿಹಾಸ ನಿರ್ಮಿಸಿದ್ದರು. ಈ ದೃಶ್ಯವನ್ನು ವೀಕ್ಷಿಸುತ್ತಿದ್ದ ಅಂದಿನ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ತಮ್ಮ ಶ್ವೇತ ಭವನದ ಕಚೇರಿಯಿಂದ ಟೆಲಿಫೋನ್ ಮೂಲಕ ಸಂದೇಶ ನೀಡಿದರು. ‘‘ಇದೊಂದು ಇಡೀ ಜಗತ್ತು ದಾಖಲಿಸಿಕೊಳ್ಳಬೇಕಾದ ಐತಿಹಾಸಿಕ ಫೋನ್ ಕರೆಯಾಗಿದೆ’’ ಎಂದೇ ತಮ್ಮ ಮಾತುಗಳನ್ನು ಮುಂದುವರಿಸಿದರು.ಅಂದು ಅಧಿವೇಶನದಲ್ಲಿದ್ದ ಭಾರತದ ಎಲ್ಲ ಸಂಸತ್ ಸದಸ್ಯರೂ, ಅಮೆರಿಕದ ಸಂಸತ್ ಸದಸ್ಯರೆಲ್ಲರೂ ಎದ್ದು ನಿಂತು ಒಂದು ಕ್ಷಣ ಕರತಾಡನ ಮಾಡಿ ಸಾಹಸಿ ಯಾತ್ರಿಗಳಿಗೆ ಗೌರವ ಸೂಚಿಸಿದರು. ರಾಣಿ ಎಲಿಜಬೆತ್, ಧರ್ಮಗುರು ದಲೈಲಾಮಾ ಮತ್ತು ಮುಂತಾದ ಪ್ರಸಿದ್ಧರು ಅಮೆರಿಕದ ಅಧ್ಯಕ್ಷರಿಗೆ ಕೆರಬಲ್ ಮೂಲಕ ಸಂದೇಶಗಳನ್ನು ಕಳುಹಿಸಿದರು. ಆ ಕಾಲದ ಮನಮೋಹಕ ನಟಿಯಾಗಿದ್ದ ಇಟಲಿಯ ಗೀನಾ ಲೊಲ್ಲೊಬ್ರಿಗಿಡಾ ‘‘ನಮ್ಮ ಥಳಕು ಬಳುಕಿನ ಪ್ರದರ್ಶನಕ್ಕಿಂತಲೂ ಮಿಗಿಲಾದ ದೃಶ್ಯಗಳನ್ನು ಟೆಲಿವಿಷನ್ ನಲ್ಲಿ ನಾನು ಕಂಡೆ’’ ಎಂದು ಹೇಳುತ್ತಾ ಒಂದರೆ ಕ್ಷಣ ದಂಗಾಗಿ ಹೋದರು.

ಈ ಯಶಸ್ವಿ ಯಾನ ಮುಂದಿನ ಆರು ಯಾನಗಳಿಗೂ ಸಹ ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ತಂದುಕೊಟ್ಟಿತು. ಎಲ್ಲ ಯಾನಗಳೂ ಯಶಸ್ವಿಯಾಗಿವೆ. ಕಾರಣ, ನೀಲ್ ಆರ್ಮ್ ಸ್ಟ್ರಾಂಗ್‌ನಿಂದ ಹಿಡಿದು ಕೊನೆಯ ಯಾನವಾದ ಅಪೋಲೊ-17 ಯಾನದವರೆಗೆ ಹೋಗಿದ್ದ ಎಲ್ಲ ಗಗನಯಾನಿಗಳೂ ಬಹುಪಾಲು ಏರೋನಾಟಿಕಲ್ ಇಂಜಿನಿಯರಿಂಗ್ ಹಿನ್ನೆಲೆ ಹೊಂದಿರುವ ಹಾಗೂ ವಾಯುದಳದಲ್ಲಿ ಯುದ್ಧ ವಿಮಾನ ಚಲಾಯಿಸಿದವರೇ ಆಗಿದ್ದರು. ಅವರಿಗೆ ನಾಸಾ ನೀಡಿದ್ದ ಕಠಿಣ ತರಬೇತಿಯಲ್ಲಿ ಗೆದ್ದಿದ್ದರು. ಪ್ರತಿ ಚಂದ್ರಯಾನದಲ್ಲೂ ಹೊಸ ಹೊಸ ಮಾಹಿತಿಗಳು ಸಿಗುತ್ತಿವೆ. ಅಪೋಲೊ-11ರಲ್ಲಿ ಚಂದ್ರನಿಂದ ಶಿಲೆಗಳನ್ನು ತಂದಾಗ ವಿಜ್ಞಾನಿಗಳು ಅದನ್ನು ವಿಶ್ಲೇಷಿಸಿ ಅಧ್ಯಯನ ಮಾಡಲು ತುದಿಗಾಲಲ್ಲಿ ನಿಂತಿದ್ದರು.ಅದನ್ನು ನೋಡಿದಾಕ್ಷಣ ವಿಜ್ಞಾನಿಗಳು ‘‘ಇದು ಭೂಮಿಯಲ್ಲಿ ಕಂಡುಬರುವ ಅಗ್ನಿಪರ್ವತಗಳು ಸೃಷ್ಟಿಸಿದ ಶಿಲೆಯಂತೆಯೇ ಇದೆ.ಆರುವಾಗ ಅನಿಲಗಳು ಬಿಡುಗಡೆಯಾಗಿ ರಂಧ್ರಗಳನ್ನು ಮಾಡಿರುವ ಗುರುತುಗಳೂ ಇವೆ. ಇದು ಬಸಾಲ್ಟ್ ಶಿಲೆ’’ ಎಂದು ಹೇಳಿದ್ದರು. ಹಾಗಾದರೆ ಈ ಚಂದ್ರ ಶಿಲೆಯ ಆಯಸ್ಸು ಎಷ್ಟು ಎಂದು ಪತ್ತೆಹಚ್ಚಿದಾಗ ಆಗಿನ ಕಾರ್ಬನ್ ಡೇಟಿಂಗ್‌ನಲ್ಲಿ ಅದು 331 ಕೋಟಿ ವರ್ಷಗಳು ಎಂದು ತಿಳಿಸಿತ್ತು. ನಂತರದಲ್ಲಿ ಹೈಲ್ಯಾಂಡ್‌ನಿಂದ ಅಪೋಲೊ-17 ರಲ್ಲಿ ತಂದ ಚಂದ್ರ ಶಿಲೆಗಳನ್ನು ವಿಶ್ಲೇಷಿಸಿದಾಗ, ಕಾರ್ಬನ್ ಡೇಟಿಂಗ್‌ನಿಂದ ಆಗ ಗೊತ್ತಾದ ಅವುಗಳ ಆಯಸ್ಸು 441 ಕೋಟಿ ವರ್ಷಗಳು. ಇದರಿಂದ ಭೂಮಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಇನ್ನೂ ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಲು ಉಪಯೋಗವಾಗುತ್ತದೆ. ಹೀಗಾಗಿ ಚಂದ್ರಯಾನಗಳನ್ನು ಆಗಾಗ ಎಲ್ಲ ಪ್ರತಿಷ್ಠಿತ ಮುಂದುವರಿದ ದೇಶಗಳು ಕೈಗೊಳ್ಳುತ್ತಿವೆ.

ಚಂದ್ರನಲ್ಲಿ ಹೀಲಿಯಂ! :

ಸೌರ ಮಾರುತದ ಮೂಲಕ ಚಂದ್ರನತ್ತ ವೇಗದಿಂದ ಬರುವ ಹೈಡ್ರೋಜನ್, ನೈಟ್ರೋಜನ್ ಮತ್ತು ಹೀಲಿಯಂ ಅನಿಲಗಳ ಜೊತೆಗೆ ವಿಕಿರಿಣಶೀಲ ಧಾತು ಹೀಲಿಯಂ-3 ಸಹ ತೂರಿ ಬಂದು ಚಂದ್ರನ ನೆಲದ ಮೇಲೆ ಸೇರಿಕೊಳ್ಳುತ್ತದೆ. ಇಂತಹ ಹೀಲಿಯಂ-3 ಚಂದ್ರನ ಮೇಲ್ಮೈಯಲ್ಲಿ ಸುಮಾರು 400 ಕೋಟಿ ವರ್ಷಗಳಿಂದ ಧಾತು ಶೇಖರವಾಗುತ್ತಿದೆ. ಚಂದ್ರನ ಕುರಿತು ಅಧ್ಯಯನ ಮಾಡಲು ಹೊರಟಿರುವ ಜಗತ್ತಿನ ದೇಶಗಳೆಲ್ಲ ಈ ಧಾತುವಿನ ಮೇಲೆ ಕಣ್ಣಿರಿಸಿವೆ.

ವಿಕಿರಿಣಶೀಲ ಧಾತು ಹೀಲಿಯಂ-3 ಇದೊಂದು ಅಪರೂಪದ ಇಂಧನ. ನ್ಯೂಕ್ಲೀಯ ಸಮ್ಮಿಲನ ಕ್ರಿಯೆಯ ಮೂಲಕ ಮಾಲಿನ್ಯವಿಲ್ಲದ ಶುದ್ಧ,ಅಪರಿಮಿತ ಶಕ್ತಿ ಸಂಪಾದಿಸಲು ಸಾಧ್ಯವಿದೆ. ಹೀಲಿಯಂನಿಂದ ಯಾವುದೇ ಹಸಿರುಮನೆ ಅನಿಲಗಳು ಹೊರಹೊಮ್ಮುವುದಿಲ್ಲ. ಬೇರೆ ಪರಮಾಣುಗಳಿಗೆ ತದ್ವಿರುದ್ಧವಾಗಿ ಇದರಿಂದ ಬಾಂಬು ತಯಾರಿಸಲು ಸಾಧ್ಯವಿಲ್ಲ.ನಾಸಾ ಈ ಕುರಿತು ಸಾಕಷ್ಟು ಅಧ್ಯಯನ ಕೈಗೊಂಡಿದೆ. ಒಂದು ವೇಳೆ ಚಂದ್ರನಲ್ಲಿ ಗಣಿಗಾರಿಕೆ ಮತ್ತು ಶುದ್ಧೀಕರಣ ಸ್ಥಾವರಗಳನ್ನು ನಿರ್ಮಿಸಿದ್ದೇ ಆದರೆ ಈ ಪರಿಷ್ಕೃತ ಹೀಲಿಯಂ-3 ನ್ನು ಭೂಮಿಗೆ ತರಲು ಸಾಧ್ಯವಿದೆ. ಹಾಗೇನಾದರೂ ಆದರೆ ಸಮಸ್ತ ಭೂಮಂಡಲದ ಇಂಧನದ ಅಗತ್ಯವನ್ನು ಶಾಶ್ವತವಾಗಿ ಪೂರೈಸಲು ಸಹಾಯವಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು. ಅಪೋಲೊ-18 ರಲ್ಲಿ ಪಯಣಿಸಿ ಚಂದ್ರನನ್ನು ತಲುಪಿದ್ದ ಭೂಶಾಸ್ತ್ರಜ್ಞ ಗಗನಯಾನಿ ‘ಹ್ಯಾರಿಸನ್ ಸ್ಮಿತ್’ ತಾವು ಬರೆದ ‘ರಿಟರ್ನ್ ಟು ದ ಮೂನ್’ ಪುಸ್ತಕದಲ್ಲಿ ಅಂದಾಜು ಮಾಡಿರುವಂತೆ ಚಂದ್ರನ ಮೇಲೆ ಎರಡು ಚ.ಕಿ.ಮೀಟರ್ ವಿಸ್ತೀರ್ಣ, ಮೂರು ಮೀಟರ್ ಆಳದ ಚಂದ್ರನ ನೆಲವನ್ನು ಗಣಿಗಾರಿಕೆ ಮಾಡಿದರೆ ಸುಮಾರು 100 ಕೆ.ಜಿ. ಪರಿಷ್ಕೃತ ಹೀಲಿಯಂ-3 ಸಿಗಬಹು. ಇದರಿಂದ ವರ್ಷಕ್ಕೆ 10,000 ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಬಹುದು! ಈ ಕುರಿತು ಚಂದ್ರನಲ್ಲಿ ಗಣಿಗಾರಿಕೆಗೆ ಆಸಕ್ತಿ ತೋರಿಸಿರುವ ಅಮೆರಿಕ, ರಶ್ಯಾ, ಚೀನಾ ದೇಶಗಳ ಸಾಲಿನಲ್ಲಿ ಭಾರತವೂ ನಿಲ್ಲುತ್ತದೆ. ಈ ಸಾರಿಯ ನಮ್ಮ ಚಂದ್ರಯಾನ-2 ರಲ್ಲಿ ಹೀಲಿಯಂ-3 ಕುರಿತ ಅನ್ವೇಷಣಾ ಕಾರ್ಯಟುವಟಿಕೆಗೂ ವೇದಿಕೆ ನಿರ್ಮಿಸಲಾಗಿದೆ.ಇನ್ನೂ ಹಲವು ಚಂದ್ರನ ಅನ್ವೇಷಣೆಗಳನ್ನು ಕುರಿತು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತವು ಈ ಮೊದಲು ಚಂದ್ರನ ಅಧ್ಯಯನ ಕುರಿತು ‘ಚಂದ್ರಯಾನ-1’ನ್ನು ನಮ್ಮ ಹೆಮ್ಮೆಯ ಸಂಸ್ಥೆ ಇಸ್ರೊ ಯಶಸ್ವಿಗೊಳಿಸಿತ್ತು. ಸದ್ಯ ಈಗ ‘ಚಂದ್ರಯಾನ-2’ ಕ್ಕೆ ಹೊರಟಿದೆ. ಏನೇ ಇರಲಿ ಚಂದ್ರನನ್ನು ಮೊದಲು ಕಂಡು ಬಂದು ಮುಂದಿನ ವೈಜ್ಞಾನಿಕ ಸಂಶೋಧನೆಗಳಿಗೆ ತಳಹದಿ ಹಾಕಿಕೊಟ್ಟ ನೀಲ್ ಆರ್ಮ್ ಸ್ಟ್ರಾಂಗ್, ಎಡ್ವಿನ್ ಆಲ್ಟ್ರಿನ್ ಹಾಗೂ ಮೈಕೆಲ್ ಕೊಲಿನ್ಸ್ ರು ಪ್ರಾತಃಸ್ಮರಣೀಯರಲ್ಲವೇ!.

ಚಂದ್ರನಲ್ಲಿಗೆ:

► 1959- ಜನವರಿ: ಚಂದ್ರನ ಮೇಲೆ ಮೊದಲ ಬಾರಿ ರಶ್ಯದ ಅಂತರಿಕ್ಷ ನೌಕೆ ಲೂನಾ-1.

► ರಶ್ಯದ ಅಂತರಿಕ್ಷ ನೌಕೆ ಲೂನಾ- 2.

► 1959, ನವೆಂಬರ್ : ಚಂದ್ರನ ಹಿಂಭಾಗದ ಚಿತ್ರವನ್ನು ಮೊದಲ ಬಾರಿಗೆ ಸೆರೆ ಹಿಡಿದ ಲೂನಾ-3.

► 1964 ಜುಲೈ 28 : ಅಮೆರಿಕದ ರೇಜರ್-7 ಉಪಗ್ರಹ ಚಂದ್ರನ ಮೇಲ್ಮೈನ ಚಿತ್ರಗಳನ್ನು ಸೆರೆಹಿಡಿಯಿತು.

► 1966 ಫೆಬ್ರವರಿ 13 : ಚಂದ್ರನ ಮೇಲಿಳಿದು ಅದರ ಚಿತ್ರಗಳನ್ನು ರವಾನಿಸಿದ ಲೂನಾ - 9.

► 1966 ಎಪ್ರಿಲ್ 3 : ಚಂದ್ರನ ಮೇಲೆ ರಶ್ಯದ ಉಪಗ್ರಹ ಲೂನಾ-10.

► 1966 ಜೂನ್ 2 : ಚಂದ್ರನ ಮೇಲಿಳಿದು 6 ವಾರಗಳ ಕಾಲ ಅಲ್ಲಿನ ಚಿತ್ರಗಳನ್ನು ಸತತವಾಗಿ ಭೂಮಿಗೆ ರವಾನಿಸಿದ ಅಮೆರಿಕದ ಸರ್ವೇಯರ್-2.

► 1968 : ಚಂದ್ರನನ್ನು ಸ್ಪರ್ಶಿಸಿ ಭೂಮಿಗೆ ಮೊದಲು ಮರಳಿದ ರಶ್ಯದ ನೌಕೆ ಜೋಂಡ್ - 5.

► 1968 ಡಿಸೆಂಬರ್ 21-27 : ಮಾನವ ಸಹಿತ ಮೊದಲ ಅಂತರಿಕ್ಷ ನೌಕೆ ಚಂದ್ರನನ್ನು ಅತ್ಯಂತ ಹತ್ತಿರದಿಂದ ಪ್ರದಕ್ಷಿಸಿ ಹಿಂದಿರುಗಿತು. ಯಾನಿಗಳು ಫ್ರಾಂಕ್ ಬೋರ್ ಮನ್, ಜೇಮ್ಸ್ ಲಾವೆಲಗ ಮತ್ತು ವಿಲಿಯಂ ಆಂಡ್ರೆಸ್.

► 1969 ಜುಲೈ 16 : ಮಾನವನ ಮೊದಲ ಪಾದಾರ್ಪಣೆ ಚಂದ್ರನ ಮೇಲೆ ಅಪೋಲೊ-12 ರ ಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ( ಜುಲೈ 20). ಆಲ್ಟ್ರಿನ್ ಮತ್ತು ಕೋಲಿನ್ಸ್ ಇವರ ಜತೆಗಿದ್ದ ಇನ್ನುಳಿದ ಯಾನಿಗಳು.

► 1969 ನವೆಂಬರ್ 14-24 : ಎರಡನೇ ಮಾನವ ಸಹಿತ ಚಂದ್ರಯಾನ ಅಪೋಲೊ- 12.

► 1971-72( ಜನವರಿ-ಫೆಬ್ರುವರಿ) : ಅಪೊಲೊ-14.

►ಅಪೋಲೊ- 15 ( ಜುಲೈ, ಆಗಸ್ಟ್ಟ್,1971).

► ಅಪೋಲೊ-16 ( ಎಪ್ರಿಲ್ - 1971).

► ಅಪೋಲೊ-17 ( ಡಿಸೆಂಬರ್-1972).

► 1989 : ಅಮೆರಿಕವು ಚಂದ್ರನ ಮೇಲೆ ವಸಾಹತು ನಿರ್ಮಿಸುವುದಾಗಿ ಘೋಷಿಸಿತು.

Writer - ಎಲ್.ಪಿ.ಕುಲಕರ್ಣಿ, ಬಾದಾಮಿ

contributor

Editor - ಎಲ್.ಪಿ.ಕುಲಕರ್ಣಿ, ಬಾದಾಮಿ

contributor

Similar News