ಎಂಟು ಪದಕ ಬಾಚಿಕೊಂಡ ಭಾರತ

Update: 2019-07-28 03:04 GMT

ಹೊಸದಿಲ್ಲಿ, ಜು.27: ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಇಂಟರ್‌ನ್ಯಾಶನಲ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಭಾರತ 8 ಪದಕಗಳ ಗೊಂಚಲು ಬಾಚಿಕೊಂಡಿದ್ದು, ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಆಶೀಶ್ ಕುಮಾರ್ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸ್ವರ್ಣ ಜಯಿಸಿ ಗಮನ ಸೆಳೆದಿದ್ದಾರೆ.

ಭಾರತ ಒಂದು ಚಿನ್ನ, 4 ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಜಯಿಸಿದೆ. ಟೂರ್ನಮೆಂಟ್‌ನಲ್ಲಿ 37 ದೇಶಗಳ ವಿಶ್ವಶ್ರೇಷ್ಠ ಬಾಕ್ಸರ್‌ಗಳು ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ತಂಡದ ಸಾಧನೆ ಅಮೋಘವಾಗಿದೆ.

ಸ್ಪರ್ಧೆಯ ಕೊನೆಯ ದಿನ ಮಾಜಿ ವಿಶ್ವ ಜೂನಿಯರ್ ಚಾಂಪಿಯನ ನಿಖಾತ್ ಝರೀನ್(51ಕೆಜಿ), ದೀಪಕ್(49ಕೆಜಿ), ಮುಹಮ್ಮದ್ ಹಸಮುದ್ದೀನ್ (56ಕೆಜಿ) ಹಾಗೂ ಬ್ರಿಜೇಶ್ ಯಾದವ್(81ಕೆಜಿ) ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು.

ಕೇವಲ ಎರಡು ತಿಂಗಳ ಹಿಂದೆ ಇಂಡಿಯಾ ಓಪನ್ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದ ಆಶೀಶ್(75ಕೆಜಿ)ಕೊರಿಯಾದ ಕಿಮ್ ಜಿನ್‌ಜಾರನ್ನು 5-0 ಅಂತರದಿಂದ ಮಣಿಸಿ ವೃತ್ತಿಜೀವನದಲ್ಲಿ ಮಹತ್ವದ ಗೆಲುವು ದಾಖಲಿಸಿದರು.

 ಏಶ್ಯನ್ ಚಾಂಪಿಯನ್‌ಶಿಪ್ ಹಾಗೂ ಇಂಡಿಯಾ ಓಪನ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ನಿಖಾತ್ ಏಶ್ಯನ್ ಗೇಮ್ಸ್ ಚಾಂಪಿಯನ್ ಚಾನ್ ಯುಯಾನ್ ಎದುರು ಕಠಿಣ ಸವಾಲು ಎದುರಿಸಿದರು. ತೆಲಂಗಾಣದ ಬಾಕ್ಸರ್ 0-5 ಅಂತರದಿಂದ ಸೋಲನುಭವಿಸಿದರು.

ಇಂಡಿಯಾ ಓಪನ್ ಚಾಂಪಿಯನ್ ಥಾಯ್ಲೆಂಡ್‌ನ ಚಾಟ್‌ಚೈ ಡೆಚಾ ತನ್ನ ಉತ್ತಮ ಫಾರ್ಮ್ ಮುಂದುವರಿಸಿ ಹಸಮುದ್ದೀನ್ ವಿರುದ್ಧ 5-0 ಅಂತರದ ಗೆಲುವು ದಾಖಲಿಸಿದರು.

ಉಜ್ಬೇಕಿಸ್ತಾನದ ಮಿರಾಝ್‌ಖಮೆಡೊವ್ 49 ಕೆಜಿ ವಿಭಾಗದಲ್ಲಿ ದೀಪಕ್‌ಗೆ ಸೋಲುಣಿಸಿದರು. ಬ್ರಿಜೇಶ್ ಯಾದವ್ ಥಾಯ್ಲೆಂಡ್‌ನ ಅನಾವತ್ ಥಾಂಗ್‌ಕ್ರಾಟೊಕ್ ವಿರುದ್ಧ 1-4 ಅಂತರದಿಂದ ಸೋತಿದ್ದಾರೆ.

ಸ್ಟ್ರಾಂಡ್ಜಾ ಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಮಂಜು ರಾಣಿ (48ಕೆಜಿ) ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಥಾಯ್ಲೆಂಡ್‌ನ ಚುಥಾಮತ್ ರಾಕ್‌ಸಟ್ ವಿರುದ್ಧ ಸೋತಿದ್ದಾರೆ.

ಆಶೀಶ್(69ಕೆಜಿ) ಹಾಗೂ ಭಾಗ್ಯವತಿ ಕಚಾರಿ(75ಕೆಜಿ)ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಆಶೀಶ್ ಥಾಯ್ಲೆಂಡ್‌ನ ವುಟಿಚೈ ಮಸೂಕ್‌ಗೆ 1-4 ಅಂತರದಿಂದ ಸೋತಿದ್ದರೆ, ಭಾಗ್ಯವತಿ ಚೀನಾದ ಲಿ ಕ್ವಿಯಾನ್‌ಗೆ 0-5 ಅಂತರದಿಂದ ಶರಣಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News