ಕಾಡಿದ ಬರಗಾಲದ ಮಳೆ

Update: 2019-07-28 06:02 GMT

ಮಳೆಯಂತೂ ನಮ್ಮನ್ನು ಹಿಂದಿನ ದಿನದಿಂದಲೇ ಕಾಡಿತ್ತು. ಜೊತೆಗೆ ನಮ್ಮ ಮನೆಯ ಕಾರ್ಯಕ್ರಮಕ್ಕೆ ಬಂದ ಜನರನ್ನು ಕೂಡ ಅದು ಬಿಟ್ಟಿರಲಿಲ್ಲ.ಆದರೆ ಬರಗಾಲದಲ್ಲೇ ಸುರಿದ ಇಂಥ ಎರಡು ದಿನದ ಮಳೆ ಜೀವನಪೂರ್ತಿ ನೆನಪಿಟ್ಟುಕೊಳ್ಳುವಂತೆ ಮಾಡಿತ್ತು.

ಅವು ಮಳೆಗಾಲದ ದಿನಗಳೇ ಆಗಿದ್ದವು.ನಮಗೆಲ್ಲ ಗೊತ್ತಿರುವಂತೆ ಕರ್ನಾಟಕದಲ್ಲಿ ಎರಡು ವರ್ಷಗಳ ಹಿಂದೆ ಅಷ್ಟೇನೂ ಮುಂಗಾರು ಸರಿಯಿರಲಿಲ್ಲ.ಅದು ಸಾಧಾರಣವಾಗಿತ್ತು.ಕಾಲ ಎಂದು ಕರೆಯುವುದಕ್ಕೆ ಮಳೆಗಾಲ ಪ್ರಾರಂಭವಾಗಿದ್ದರೂ, ಹೌದೆನ್ನುವಂತಹ ಮಳೆಯಾಗಿರಲಿಲ್ಲ.ಆಗೊಮ್ಮೆ ಈಗೊಮ್ಮೆ ಬಿದ್ದ ಮಳೆ ಅರೆಬರೆ ಬೆಳಗಾವಿ ನೆಲವನ್ನು ತೊಯಿಸಿತ್ತು.ಆದರೆ ನಾವು ಚಿಕ್ಕವರಿದ್ದಾಗ ಮಳೆಯ ಆರ್ಭಟವೇ ಬೇರೆಯಿತ್ತು.ಮಳೆಗಾಲದ ನಾಲ್ಕೂ ತಿಂಗಳು ಹೀಗೆ ಮಳೆ ಸುರೀತ್ತಿತ್ತಲ್ಲಾ, ಕೊಡೆ ಅಥವಾ ರೇನ್ ಕೋಟ್ ಇಲ್ಲದೇ ಶಾಲೆಗೆ ಹೋದ ನೆನಪೇ ಇಲ್ಲ.ನೀರು ಹರಿಯತೊಡಗಿದರೆ ರಸ್ತೆಗಳೆಲ್ಲ ಹಳ್ಳ, ನದಿಗಳಾಗಿ ಬದಲಾಗುತ್ತಿದ್ದವು.ಇಂಥ ದಿನಗಳನ್ನು ಕಂಡ ನನಗೆ ಹೋದ ವರ್ಷ ಅಷ್ಟೊಂದು ಮಳೆಯಾಗದಿದ್ದರೂ, ಆಗೊಮ್ಮೆ ಈಗೊಮ್ಮೆ ಬಿದ್ದ ಮಳೆಯನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.

ನಾಳೆ ಎಂದರೆ ನನ್ನ ಅತ್ತಿಗೆ ಅಂದರೆ ತಮ್ಮನ ಹೆಂಡತಿಯ ಸೀಮಂತ ಕಾರ್ಯಕ್ರಮ. ಇದಕ್ಕೆ ಬೇಕಾದ ಅಗತ್ಯ ಕೆಲಸಗಳನ್ನು ಮೊದಲೇ ಮಾಡಿದ್ದೆವು.ಆದರೂ ಕೊನೆ ಘಳಿಗೆಯಲ್ಲಿ ಬೇಕಾದ ಕೆಲ ಸಾಮಾನುಗಳನ್ನು ತರಲು ಹಾಗೂ ಕೆಲ ವಿಷಯಗಳ ನಿರ್ವಹಣೆಗಾಗಿ ಹಿಂದಿನ ದಿನ ನನಗೆ ಮತ್ತು ತಮ್ಮನಿಗೆ ಕೆಲಸದ ಜವಾಬ್ದಾರಿ ಬಿದ್ದಿತ್ತು. ಯಾವುದೇ ಕಾರ್ಯಕ್ರಮಕ್ಕೆ ಎಷ್ಟೇ ಮುತುವರ್ಜಿಯಿಂದ ಕೆಲಸದ ಪೂರ್ವ ತಯಾರಿ ಮಾಡಿಕೊಂಡಿದ್ದರೂ ಕೆಲ ಕೆಲಸಗಳನ್ನು ಹಾಗೂ ಸಾಮಾನುಗಳನ್ನು ಮರೆತು ಬಂದು ಕಾರ್ಯಕ್ರಮದ ಕೊನೆಯ ಘಳಿಗೆಯವರೆಗೂ ಓಡಾಡುವ ದೊಂಬರಾಟ ಎದುರಾಗುತ್ತದೆ. ಕಳೆದ ಒಂದು ತಿಂಗಳಿಂದ ಓಡಾಡಿ, ಓಡಾಡಿ ಸುಸ್ತಾದ ನಮಗೆ ಅಕ್ಷರಶಃ ಕೆಲಸ ಬೇಡಾಗಿತ್ತು. ಓಡಾಟದಲ್ಲಿ ಊಟವನ್ನು ಮರೆತಂತಾಗಿತ್ತು. ಈ ಜವಾಬ್ದಾರಿಯನ್ನು ನೋಡಿಕೊಳ್ಳಲು ಮೇಲಿಂದಮೇಲೆ ಕಾರ್ಯಾಲಯ ಹಾಗೂ ಪೇಟೆಗೆ ಹೋಗಬೇಕಾಗಿತ್ತು. ಈ ಜಂಜಾಟದಲ್ಲಿ ಕಳೆದ ಎರಡು ದಿನಗಳಲ್ಲಿ ಇಲ್ಲದ ಮಳೆ ಒಂದೇ ಸಮನೆ ಬೀಳಲು ಪ್ರಾರಂಭಿಸಿತು.ಮರೆತ ಕೆಲ ಸಾಮಾನುಗಳನ್ನು ತರಲು ಪೇಟೆಯ ಮಧ್ಯಭಾಗದಲ್ಲಿ ಅಡ್ಡಾಡಬೇಕಾದ ಅನಿವಾರ್ಯತೆ. ಈ ಮಧ್ಯೆ ಸಾಮಾನುಗಳನ್ನು ಹೇಳಲು ಮರೆತ ಅಡುಗೆಯವನನ್ನು ಮನಸ್ಸಿನಲ್ಲಿ ಬೈಯುತ್ತಾ, ಪೇಟೆಯನ್ನು ಸುತ್ತಾಡಲು ಪ್ರಾರಂಭಿಸಿದೆವು. ಹೀಗಾಗಿ ಮಳೆಯಿದ್ದರೂ ಕಾರನ್ನು ತೆಗೆದುಕೊಂಡು ಹೋಗಲಾರದ ಪರಿಸ್ಥಿತಿ. ಪಾರ್ಕ್ ಮಾಡುವ ಸ್ಥಳ ಮಾರ್ಕೆಟ್‌ನಿಂದ ಬಲು ದೂರ ಹೀಗಾಗಿ ಡೋರ್ ಟು ಡೋರ್ ಸರ್ವಿಸ್‌ಗೆ ಅನುಕೂಲವೆಂದು ದ್ವಿಚಕ್ರ ವಾಹನದಲ್ಲಿ ಸುತ್ತಾಡಿದೆವು.

 ಹೆಚ್ಚು ಕಡಿಮೆ ದಿನ ಪೂರ್ತಿ ಮಳೆ ಸುರಿಯಿತು. ದ್ವಿಚಕ್ರ ವಾಹನದಲ್ಲಿ ಓಡಾಡಿದ ನಮಗೆ ಮಳೆಯಿಂದ ತಪ್ಪಿಸಿ ಕೊಳ್ಳಲಾಗಲಿಲ್ಲ. ಛತ್ರಿ, ಜಾಕೆಟ್ ಉಪಯೋಗಕ್ಕೆ ಬರಲಿಲ್ಲ.ಮಳೆ ನಿಲ್ಲಲಿ ಎಂದರೆ, ನಾಳೆ ಆಗಲೇ ಬೇಕಾದ ಕೆಲಸಗಳು ನಿಲ್ಲಗೊಡಲಿಲ್ಲ. ಬಿಟ್ಟು ಬಿಡದೇ ಸುರಿದ ಮಳೆಯಲ್ಲಿ ದಿನಪೂರ್ತಿ ನೆನೆದು ರಾತ್ರಿ 11ಕ್ಕೆ ಮನೆಗೆ ವಾಪಸಾಗಿದ್ದೆವು. ನೆನೆದ ದೇಹ ತಂಪಿನಿಂದ ಕಂಪಿಸುತ್ತಿತ್ತು.ಚಳಿಗಾಲದ ಚಳಿಯ ಅನುಭವವನ್ನು ನೀಡಿತ್ತು.ಮನೆಗೆ ಬಂದವರೇ ಮೊದಲು ಗೀಸರ್ ಆನ್ ಮಾಡಿ ಊಟ ಏನೂ ಬೇಡ ಎಂದು ಸ್ನಾನ ಮಾಡಿದೆವು ಸಂಪೂರ್ಣ ದೇಹ ತೊಯ್ದು ತಂಡಿ ಜ್ವರ ಬಂದಾಗ ಹೇಗೆ ಮೈ ನಡುಗುತ್ತದೊ ಹಾಗೆ ನಡುಗಲಾರಂಭಿಸಿತ್ತು.ದ್ವಿಚಕ್ರ ವಾಹನದ ಹಿಂದೆ ಕುಳಿತ ನನಗೆ ಅಷ್ಟೊಂದು ಮಳೆಯ ನೀರು ಮುಖಕ್ಕೆ ಬಡಿದಿರಲಿಲ್ಲ. ಆದರೆ ತಮ್ಮನಿಗೆ ದೊಡ್ಡ ದೊಡ್ಡ ಹನಿಗಳ ಮಳೆ ಮುಖಕ್ಕೆ ಒಂದೇ ಸವನೆ ಬಾರಿಸಿತ್ತು. ಅವನಂತೂ ಚಿಕ್ಕ ಹಸುಳೆ ನಡುಗುವಂತೆ ನಡುಗಲಾರಂಭಿಸಿದ.

ತಮ್ಮ ಅಜಾರಿ ಬಿದ್ದರೆ ನಾಳೆಯ ಕಾರ್ಯಕ್ರಮ ಹೇಗಪ್ಪಾದೇವರೆ ಎಂದು ಚಿಂತೆಯಾಗಿತ್ತು. ಆದರೆ ಮನಸ್ಸಿನಲ್ಲಿ ದೇವರಿಗೆ ನಾಳೆಯ ದಿನ ಸುಸೂತ್ರವಾಗಿ ಸಾಗಿದರೆ ಸಾಕಪ್ಪಾ ಎಂದು ಬೇಡಿಕೊಳ್ಳುತ್ತಿದ್ದೆ.

ಮಾರನೆಯ ದಿನವೂ ಮಳೆ ನಿಲ್ಲಲಿಲ್ಲ. ಹಾಗೆ ಸುರಿತಾನೇ ಇತ್ತು. ಬರಗಾಲದಲ್ಲಿ ಬಂದ ತಾತ್ಕಾಲಿಕ ಮಳೆ ನಮ್ಮನ್ನಲ್ಲದೆ ಜನರನ್ನು ಸಿಕ್ಕಾಪಟ್ಟೆ ಕಾಡಿಸಿತ್ತು. ತಯಾರಾಗಿ ನಿಂತ ಅವರಿಗೆ ಮಳೆರಾಯ ನಿಲ್ಲುವ ಸೂಚನೆಯನ್ನೇ ಕೊಟ್ಟಿರಲಿಲ್ಲ. ಸೀಮಂತ ಕಾರ್ಯಕ್ರಮವಂತೂ ಹೆಣ್ಮಕ್ಕಳಿಗಾಗಿಯೇ ಮೀಸಲಾದುದು.

ಯಾವಾಗಲೂ ಹೆಣ್ಮಕ್ಕಳು ತಯಾರಾಗುವುದು ಲೇಟು ಅಂತಹ ದೋಷನೆಗೆ ಒಳಗಾಗುತ್ತಿರುವಾಗ, ಈ ಮಳೆ ತಯಾರಾದವರನ್ನು ಹೀಗೆ ಕಾಡಿಸುವುದಾ? ಬಹುಶಃ ಮಳೆ ಎಲ್ಲ ಗಂಡಸರ ಮಾತನ್ನು ಕೇಳಿರಬೇಕು.ಯಾವಾಗಲೂ ನಾವು ಇವರ ಸಲುವಾಗಿ ಕಾಯುತ್ತೇವೆ, ನೀನು ಇವರನ್ನೂ ಒಂದು ಸಲ ಕಾಯಿಸಿ ನೋಡು ಎಂದು ಹೇಳಿದಂತಾಗಿತ್ತು.ಈ ಎಲ್ಲಾ ತೊಡಕುಗಳನ್ನು ಎದುರಿಸಿ, ಸೀಮಂತ ಕಾರ್ಯಕ್ಕೆ ಇಂತಹ ಮಳೆಯಲ್ಲಿ ಸಂಬಂಧಿಕರು, ನೆರೆಹೊರೆಯವರು ಮತ್ತು ಸ್ನೇಹಿತರು ತಪ್ಪಿಸದೇ ಬಂದದ್ದು ಅಗಾಧ ಸಂತೋಷ ತಂದಿತ್ತು. ಲೇಟಾಗಿ ಬಂದವರು ಮಳೆ ನಿಲ್ಲಲಿ ಅಂತ ಕಾದೆವು ಎಂಬ ಕಾರಣ ನೀಡಿದ್ದರು.ಅದು ನಿಜವಾಗಿತ್ತು.ಊಟದ ಮೆನುನಲ್ಲಿ ಶೇಂಗಾ ಹೋಳಿಗೆ ಬಂದವರ ಮನ ಗೆದ್ದಿತ್ತು.ಹೋಗುವುದಕ್ಕಿಂತ ಮುಂಚೆ ಜನರು ತಪ್ಪದೇ ಊಟದಲ್ಲಿ ಶೇಂಗಾ ಹೋಳಿಗೆ ಚೆನ್ನಾಗಿತ್ತು ಎಂದು ಹೇಳುವುದನ್ನು ಮರೆಯಲಿಲ್ಲ. ಮಳೆಯಂತೂ ನಮ್ಮನ್ನು ಹಿಂದಿನ ದಿನದಿಂದಲೇ ಕಾಡಿತ್ತು. ಜೊತೆಗೆ ನಮ್ಮ ಮನೆಯ ಕಾರ್ಯಕ್ರಮಕ್ಕೆ ಬಂದ ಜನರನ್ನು ಕೂಡ ಅದು ಬಿಟ್ಟಿರಲಿಲ್ಲ.ಆದರೆ ಬರಗಾಲದಲ್ಲಿ ಸುರಿದ ಇಂತಹ ಎರಡು ದಿನದ ಮಳೆ ಜೀವನಪೂರ್ತಿ ನೆನಪಿಟ್ಟುಕೊಳ್ಳುವಂತೆ ಮಾಡಿತ್ತು.

ಮಾಲಾ.ಮ ಅಕ್ಕಿಶೆಟ್ಟಿ

Writer - ಮಾಲಾ.ಮ ಅಕ್ಕಿಶೆಟ್ಟಿ

contributor

Editor - ಮಾಲಾ.ಮ ಅಕ್ಕಿಶೆಟ್ಟಿ

contributor

Similar News