ಮಕ್ಕಳೆಲ್ಲಾ ದೇವರಲ್ಲ

Update: 2019-07-28 08:57 GMT

ದೂರಿನ ಉರುಳು

ಅದೊಂದು ಶಾಲೆ. ಶಾಲೆಯಲ್ಲಿ ಕ್ರೀಡಾ ಶಿಕ್ಷಕರ ಮೇಲೆ ಒಂದು ದೂರು ಬಂದಿತು. ಅದೇನೆಂದರೆ, ಅವರು ಮಗುವಿನ ಕೈ ಮೇಲೆ ಉದ್ದನೆಯ ಗಾಯವಾಗುವಂತೆ ಹೊಡೆದಿದ್ದಾರೆ ಎಂದು. ಆದರೆ, ಮಕ್ಕಳು ಮನೆಯಲ್ಲಿ ಬೇಡಿಕೊಂಡರಂತೆ, ಶಿಕ್ಷಕರು ಹೊಡೆದಿರುವುದನ್ನು ಶಾಲೆಗೆ ಬಂದು ಹೇಳಬೇಡಿ ಎಂದು. ಆದರೆ ಪೋಷಕರು ಬಿಡಲಿಲ್ಲ. ಬಂದೇ ಬಂದರು. ರಣದುಂಧುಬಿ ಮೊಳಗಿದರು. ಯುದ್ಧ ಸಾರಿದರು. ಅವರ ದೂರಿನಲ್ಲಿ ಅನೇಕ ಅಂಶಗಳು ಅಡಕವಾಗಿದ್ದವು.

ಆ ಪಿಟಿ ಟೀಚರ್ ಹೆಣ್ಣುಮಕ್ಕಳ ಮೈಕೈ ಮುಟ್ಟುತ್ತಾನೆ. ಬರೆ ಬರುವಂತೆ, ಗಾಯವಾಗುವಂತೆ ಜೋರಾಗಿ ಹೊಡೆಯುತ್ತಾನೆ. ಮಕ್ಕಳು ಮನೆಯಲ್ಲಿ ದೂರು ಹೇಳಿದರೆ ಅವರ ಮೇಲೆ ಕಣ್ಣಿಡುತ್ತಾರಂತೆ ಇತ್ಯಾದಿ. ಅವನ ಮೇಲೆ ಈ ಕೂಡಲೇ ಕ್ರಮ ಜರುಗಿಸಬೇಕು ಎಂಬ ಒತ್ತಾಯವೂ ಆಯಿತು. ಆದರೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಆ ಶಿಕ್ಷಕರು ಆ ರೀತಿಯವರಲ್ಲ ಎಂಬ ನಂಬಿಕೆಯೂ ಇತ್ತು ಮತ್ತು ಅವರ ಸ್ವಭಾವದ ಪರಿಚಯವೂ ಇತ್ತು. ತರಗತಿಯ ಉಪಾಧ್ಯಾಯರು ಉಪಾಯವಾಗಿ ಇತರ ಮಕ್ಕಳನ್ನು ವಿಚಾರಿಸಿದರು. ಆಗ ತಿಳಿದು ಬಂದ ವಿಷಯವೇನೆಂದರೆ ಅದೊಂದು ಹುಡುಗಿಯರ ಗುಂಪು. ಆ ಪುಟ್ಟ ತರಲೆಯರು ತರಲೆಯರೇ. ಬ್ಲೇಡ್ ಹಿಡಿದುಕೊಂಡು ಆಡಿಕೊಂಡಿರುವಾಗ ಹುಡುಗಿಯೊಬ್ಬಳ ಕೈ ಕುಯ್ದುಕೊಂಡಿತು. ಇದನ್ನು ತಾವು ಇಷ್ಟಪಡದ ಶಿಕ್ಷಕರ ಮೇಲೆ ವರ್ಗಾಯಿಸಿ, ತಾವೇ ಆಡುವಾಗ ಕುಯ್ದುಕೊಂಡೆವು ಎಂಬ ಆರೋಪದಿಂದ ಮುಕ್ತವಾಗಲು ಯೋಜಿಸಿದರು. ಅದನ್ನು ಕಾರ್ಯರೂಪಕ್ಕೆ ತರಲು ಆ ಹುಡುಗಿಯರ ಇಡೀ ತಂಡ ಯೋಜಿಸಿತು. ಅಷ್ಟಕ್ಕೂ ಅವರು ನಾಲ್ಕನೇ ತರಗತಿಯ ಮಕ್ಕಳು ಮಾತ್ರ. ಅಷ್ಟು ಸಣ್ಣ ಮಕ್ಕಳು ಓರ್ವ ಶಿಕ್ಷಕನ ಚಾರಿತ್ರ ವಧೆಗೇ ಮುಂದಾಗಿತ್ತು. ಶಾಲೆಯ ಹೆಸರಿಗೆ ಮಸಿ ಬಳಿಯಲು ಮುಂದಾಗಿದ್ದರು. ಚಾರಿತ್ರ ವಧೆ ಮತ್ತು ಮಸಿ ಬಳಿಯುವಿಕೆ ಇತ್ಯಾದಿಗಳ ಪದ ಪರಿಚಯವಿಲ್ಲದಿದ್ದರೂ ಆ ಮಕ್ಕಳಿಂದ ಅದಾಗುತ್ತಿತ್ತು.

ದೂರಿನ ಬಲೆ ಹೆಣೆಯಲೇನು ಕಾರಣ?

ಮಕ್ಕಳು ಇತರರ ಮೇಲೆ ಹೇರುವುದಕ್ಕೆ, ತಮ್ಮನ್ನು ಪಾಪದವರೆಂದು ಬಿಂಬಿಸಿಕೊಳ್ಳುತ್ತಾ, ಇತರರನ್ನು ಪಾಪಿಗಳೆಂಬಂತೆ ಆರೋಪಗಳನ್ನು ಮಾಡುತ್ತಾ, ದೂರುಗಳ ಪಟ್ಟಿಗಳನ್ನು ಹೆಣೆಯುವುದಕ್ಕೆ ಹಲವಾರು ಕಾರಣಗಳಿರುತ್ತವೆ.

1. ಕೆಲವು ಮಕ್ಕಳ ಮನೆಯಲ್ಲಿ ಪೋಷಕರು ಮಕ್ಕಳು ಏನೇ ಹೇಳಿದರೂ ನಂಬುತ್ತಾರೆ. ದೃತರಾಷ್ಟ್ರ ಮೋಹದಂತೆ ತಮ್ಮ ಮಕ್ಕಳು ಸತ್ಯವನ್ನೇ ನುಡಿಯುತ್ತಾರೆ, ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ ಎಂಬಂತಹ ಕುರುಡು ನಂಬಿಕೆ. ಅದನ್ನು ತಿಳಿದಿರುವ ಮಕ್ಕಳು ತಮ್ಮ ಅನುಕೂಲಕ್ಕೆ ಆ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವರು.

2. ಕೆಲವು ಪೋಷಕರು ಮಕ್ಕಳನ್ನು ಸದಾ ಭಯದಲ್ಲಿಟ್ಟಿರುತ್ತಾರೆ. ಹಾಗೆ ಮಾಡುತ್ತೀಯಾ, ಹೀಗೆ ಮಾಡುತ್ತೀಯಾ, ನಿರ್ಲಕ್ಷದಿಂದ ಕೆಲಸ ಮಾಡುತ್ತೀಯಾ ಎಂದೆಲ್ಲಾ ಬೈಯುತ್ತಿರುತ್ತಾರೆ. ಆರೋಪಗಳನ್ನು ಮಾಡುತ್ತಿರುತ್ತಾರೆ. ಅಂತಹ ಮನೆಯ ಮಕ್ಕಳು ತಮಗೆ ತಾವೇ ತೊಂದರೆ ತಂದುಕೊಂಡಾಗ ತಮ್ಮ ಮೇಲಿನ ಆರೋಪಗಳು ಗಟ್ಟಿಯಾಗುತ್ತವೆಂದು ಮತ್ತು ತಾವು ಬೈಯಿಸಿಕೊಳ್ಳುವುದು ಅಥವಾ ಶಿಕ್ಷೆಗೆ ಒಳಗಾಗುವುದು ಖಚಿತವೆಂದು ಇತರರ ಮೇಲೆ ತಮ್ಮ ಪ್ಪನ್ನು ಹಾಕಿಬಿಡಲು ಯತ್ನಿಸುತ್ತಾರೆ.

3. ಇನ್ನೂ ಕೆಲವು ಮಕ್ಕಳು ಮನೆಯ ವಾತಾವರಣದ ಪ್ರಭಾವವೋ, ಕೌಟುಂಬಿಕ ಪರಿಸರದಲ್ಲಿ ಕೆಲವು ಮಾದರಿಗಳನ್ನು ಅನುಸರಿಸುತ್ತಾರೋ, ಶಾಲೆಯಲ್ಲಿ ಯಾವುದಾದರೂ ಓರ್ವ ಶಿಕ್ಷಕರ ಅಥವಾ ಇತರ ಸಹಪಾಠಿಗಳ ಪ್ರಭಾವದಿಂದಲೋ ಅವರಿವರ ಮೇಲೆ ಹಲ್ಲು ಮಸೆಯುತ್ತಿರುತ್ತಾರೆ. ಯಾರಿಗಾದರೂ ಹೇಗಾದರೂ ಕೇಡನ್ನು ಉಂಟು ಮಾಡಿಯೋ ಅಥವಾ ನಿಂದಿಸಿಯೋ ಗುಪ್ತವಾಗಿ ಸಂತೋಷಪಡುವಂತಹ ರೋಗವಿರುತ್ತದೆ. ಇಂತಹ ಮನೋರೋಗವಿರುವ ಮಕ್ಕಳು ಯಾರನ್ನಾದರೂ ದೂರುವುದನ್ನೇ ಪರಿಪಾಠ ಮಾಡಿಕೊಂಡಿರುತ್ತಾರೆ. ಯಾರ ಮೇಲಾದರೂ ತಮ್ಮ ದೂರುಗಳ ಪಟ್ಟಿಯಿಂದ ಬಂಧಿಸಲು ಯತ್ನಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಸಣ್ಣದಾಗಿ ಏನಾದರೂ ಆಗಿದ್ದರೆ ಅದನ್ನು ಬೃಹತ್ತಾಗಿ ಆಗಿದೆ ಎಂಬಂತೆ ಬಿಂಬಿಸಲು ಯತ್ನಿಸುತ್ತಾರೆ. ಆ ಮೂಲಕ ಸುದ್ದಿಯಲ್ಲಿರಲೋ ಅಥವಾ ತಮ್ಮ ಮೇಲೆ ಅನುಕಂಪ ಗಿಟ್ಟಿಸಿಕೊಳ್ಳುವ ಮೂಲಕ ಕೇಂದ್ರ ವ್ಯಕ್ತಿಯಾಗಿರಲು ಯತ್ನಿಸುತ್ತಾರೆ.

4. ಕೆಲಮೊಮ್ಮೆ ತಾವು ಒಪ್ಪಿಸಬೇಕಾದ ಪಾಠವನ್ನು ಕಲಿತಿರುವುದಿಲ್ಲ, ಹೋಂ ವರ್ಕ್ ಮಾಡಿರುವುದಿಲ್ಲ. ಎದುರಿಸಬೇಕಾದ ಪರೀಕ್ಷೆಗೆ ಸಿದ್ಧವಿರುವುದಿಲ್ಲ. ಹಾಗಾಗಿ ಹೇಗಾದರೂ ತಪ್ಪಿಸಿಕೊಳ್ಳಲು ಗಮನವನ್ನು ಬೇರೆ ಕಡೆ ಸೆಳೆಯಲೂ ಇಂತಹ ಕೆಲಸಳಿಗೆ ಮಕ್ಕಳು ಮುಂದಾಗುತ್ತಾರೆ.    

5. ಕೆಲವೊಮ್ಮೆ ಮನೆಯಲ್ಲಿ ಅವರಿಗೆ ಅನುಕೂಲವಾದ, ಪ್ರೇಮ ಪೂರ್ವಕವಾದ ವಾತಾವರಣವಿರುವುದಿಲ್ಲ. ತಮ್ಮನ್ನು ಪಾಪದವರೆನಿಸಿಕೊಳ್ಳಲು, ಸಾಂತ್ವನವನ್ನು ಪಡೆಯಲು ಇಂತಹ ವೇಷಗಳನ್ನು ಕಟ್ಟುತ್ತಾರೆ. ಕಪಟನಾಟಕ ಸೂತ್ರಧಾರಿ

ಹಾಗೆಯೇ ತರಗತಿಯೊಂದರಲ್ಲಿ ಹುಡುಗಿಯರ ಗುಂಪು ವೃಥಾ ಶಿಕ್ಷಕರ ಮೇಲೆ ದೋಷಾರೋಪಣೆ ಮಾಡುವ ಮತ್ತು ಸುಳ್ಳು ಹಾಗೂ ಕಪಟತನದ ಸುಳುಹುಗಳನ್ನು ಗುರುತು ಹಿಡಿದ ತರಗತಿಯ ಉಪಾಧ್ಯಾಯಿನಿ ಈ ಸಂಚಿನ ಸೂತ್ರಧಾರಿಣಿಯನ್ನು ಕಟುವಾಗಿ ಪ್ರಶ್ನಿಸಿದರು. ಇದು ಗುರುತರವಾದ ಅಪರಾಧವಾಗಿದ್ದು ಇದರ ಬಗ್ಗೆ ಕೂಲಂಕಶವಾಗಿ ಪೋಷಕರ ಬಳಿ ಮಾತಾಡಬೇಕೆಂದೂ ಮತ್ತು ಅವರು ಹೊಂದಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಮುಂದಾದರು. ಆದರೆ, ತನ್ನ ಸಂಚು ಬಯಲಾಗುತ್ತಿದ್ದಂತೆ ಆ ಹುಡುಗಿಯು ವಿಪರೀತವಾಗಿ ಅಳುತ್ತಾ, ಏದುಸಿರು ಬಿಡುತ್ತಾ, ಮೂರ್ಚೆ ಹೋಗುತ್ತಿರುವಂತೆ ಕಣ್ಣುಗುಡ್ಡೆಗಳನ್ನು ಮೇಲೆ ಮಾಡಿಕೊಂಡು ಬೀಳುವಂತಳಾದಳು. ಮಗುವಿನ ಈ ಪರಿಸ್ಥಿತಿಯನ್ನು ನೋಡಿ ಶಿಕ್ಷಕಿಯು ಇನ್ನೂ ಹೆದರಿಕೊಂಡರು. ಇನ್ನು ಮಗುವಿಗೆ ಏನಾದರೂ ಆದರೆ ತನ್ನ ಮೇಲೆಯೇ ಬರುವುದೆಂದೂ, ಶಾಲೆಗೆ ಇನ್ನೂ ಕೆಟ್ಟ ಹೆಸರು ಬರುವುದೆಂದೂ ಆ ಮಗುವನ್ನು ಸಮಾಧಾನಿಸಿ, ಆ ಮಗುವಿಗೆ ಏನೂ ಆಗಿಲ್ಲವೆಂದು ಖಾತರಿ ಮಾಡಿಕೊಳ್ಳುವಷ್ಟರಲ್ಲಿ ಆಕೆಗೆ ಸಾಕುಸಾಕಾಯಿತು.

ಮಗುವಿನ ಕಪಟತನಕ್ಕೆ ಅತ್ಯದ್ಭುತವಾದ ವಿಜಯ ದೊರಕಿತು. ಯಾರಿಂದ ವಿಚಾರಣೆಗೆ, ಶಿಕ್ಷೆಗೆ, ದಂಡನೆಗೆ ಒಳಗಾಗಬೇಕೋ ಅವರನ್ನೇ ಹೆದರಿಸುವಂತಹ ಅದರ ಸಂಚು ಫಲ ನೀಡಿತು. ಆ ಶಿಕ್ಷಕರಿಗೆ ಇನ್ನು ಉಳಿದ ದಾರಿಯೆಂದರೆ, ಹೇಗಾದರೂ ಹಾಳಾಗಿ ಹೋಗಲಿ, ನನ್ನ ಕೆಲಸ ನಾನು ಮಾಡಿಕೊಂಡು ಹೋದರೆ ಸಾಕು ಎಂದು ಅವರನ್ನು ಬಿಟ್ಟುಬಿಡುವುದು.

ಪೋಷಕರಾಗಲಿ ಅಥವಾ ಶಿಕ್ಷಕರಾಗಲಿ ಮಕ್ಕಳೆಲ್ಲರನ್ನೂ ಮುಗ್ಧರೆಂದೋ, ದೇವರಂತೆ ಇರುವರೆಂದೋ ತಿಳಿದುಕೊಂಡಿದ್ದರೆ ಅದೇನೂ ಒಳ್ಳೆಯ ಸಂಗತಿಯೇನಲ್ಲ. ಹಾಗೆಯೇ ನಿಜವೂ ಆಗಿರುವುದಿಲ್ಲ. ಕೆಲವು ಮಕ್ಕಳು ಕೌಟುಂಬಿಕ ಅಥವಾ ಮನೆಯ ಪರಿಸರದಲ್ಲಿ ಕೃತ್ರಿಮ ವಿದ್ಯೆಗಳನ್ನು ಕಲಿತಿದ್ದರೆ, ಮತ್ತೆ ಕೆಲವು ಮಕ್ಕಳು ತಮ್ಮೆಡನಿರುವ ಇತರ ಮಕ್ಕಳ ಕಪಟತನಗಳನ್ನು ತಮ್ಮಲ್ಲೂ ರೂಢಿಸಿಕೊಂಡಿರುತ್ತವೆ. ಮತ್ತೆ ಕೆಲವು ಮಕ್ಕಳು ತಾವು ಆರೋಪದಿಂದ ತಪ್ಪಿಸಿಕೊಳ್ಳಲು ಕೆಲವು ಬಗೆಯ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಯಶಸ್ವಿಯಾದರೆ ಅದನ್ನು ಮುಂದುವರಿಸುತ್ತಾರೆ. ಒಂದು ವೇಳೆ ಸಫಲವಾಗದಿದ್ದರೆ ಮತ್ತೊಂದು ಬಗೆಯ ಪ್ರಯತ್ನವನ್ನು ಮಾಡುತ್ತಾೆ.

ಮಕ್ಕಳ ಇಂತಹ ಗುಣಗಳನ್ನು ಅಥವಾ ಅವಗುಣಗಳನ್ನು ಗುರುತಿಸು ವುದು ಪೋಷಕರಿಗೆ ಮತ್ತು ಶಿಕ್ಷಕರಿಗೆ ತುಂಬಾ ಮುಖ್ಯವಾಗುತ್ತದೆ. ಅದರ ಜೊತೆಗೆ ಅಂತಹ ರೋಗವನ್ನು ನಿವಾರಿಸಲು ಕೆಲವು ಕ್ರಮಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಅವೇನೆಂದು ಮುಂದೆ ನೋಡೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News