ರಾಜ ಕಡೆಗೂ ಮದುವೆಯಾಗಿಯೇ ಬಿಟ್ಟ

Update: 2019-07-28 11:27 GMT

ಸಮಾಜ ಸೇವಕ, ಸಾಹಿತ್ಯ ಪರಿಚಾರಕ ಇತ್ಯಾದಿ ವಿಶೇಷಣಗಳ ನಾರಾಯಣ ಬಲ್ಲಾಳರು ನಮ್ಮ ನಡುವಿನ ಓರ್ವ ಜನಪ್ರಿಯ ಬರಹಗಾರ. ಬ್ಯಾಂಕ್ ಉದ್ಯೋಗಿಯಾಗಿದ್ದಾಗಲೇ, ಸಣ್ಣ ಕತೆಗಳನ್ನು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ತನ್ನ ಬರವಣಿಗೆಯ ಜತೆಯಲ್ಲಿಯೇ ಲೇಖಕ ಹಾಗೂ ಸಾಹಿತ್ಯ ಸಂಘಟಕರಾದ ಬಿ.ಜಿ.ಎಲ್.ಸ್ವಾಮಿ, ಎಚ್.ಬಿ.ಎಲ್.ರಾವ್, ಸೂರ್ಯ ನಾರಾಯಣ ಚಡಗ ಮುಂತಾದವರ ಸಂಪಾದಕತ್ವದಲ್ಲಿ ಹೊರ ಬಂದ ಕೃತಿಗಳಲ್ಲಿ ಇವರ ಶ್ರಮವೂ ಇದೆ. ಅವುಗಳಲ್ಲಿ ಕಳೆದ 60ರ ದಶಕದ ಕೊನೆಯಲ್ಲಿ 105 ಮಹಿಳಾ ಲೇಖಕರು ಬರೆದ ಸಣ್ಣ ಕತೆಗಳ ಬೃಹತ್ ಕಥಾ ಸಂಕಲನ ‘ಕಾಮಧೇನು’, ಅನಂತರದ ‘ದಿಗಂತ’ ಸಾಹಿತಿ-ಮಾಹಿತಿ ಕೋಶದ 10 ಸಂಪುಟಗಳು ಮುಖ್ಯವಾಗಿವೆ. ಇವರೊಬ್ಬ (ದ್ವಿಭಾಷಾ ಇಂಗ್ಲಿಷ್ ಮತ್ತು ಕನ್ನಡ) ಲೇಖಕರೂ ಹೌದು. ‘ಉಡುಪಿಯ ಒಂದು ಪರಿಚಯ’, ‘ಮನಮೋಹಕ ಜಿಲ್ಲೆ ದಕ್ಷಿಣ ಕನ್ನಡ’, "Karnataka at a glance', "Seers of Sri Pejavara Mutt' ಇವರು ರಚಿಸಿದ ಕೃತಿಗಳಲ್ಲಿ ಕೆಲವು.

ಇದೀಗ ಕಳೆದ ಅರವತ್ತರ ದಶಕದಿಂದ ಆಚೀಚೆ ಬರೆದ ಒಟ್ಟು 16 ಕತೆಗಳನ್ನು ಸೇರಿಸಿ ಚಿಕ್ಕಮಗಳೂರಿನ ಮಲೆನಾಡು ಪ್ರಕಾಶನದ ಮೂಲಕ ಹೊರತಂದ ಕಥಾ ಸಂಕಲನದ ಶೀರ್ಷಿಕೆ ‘ರಾಜ ಕಡೆಗೂ ಮದುವೆಯಾಗಿಯೇ ಬಿಟ್ಟ’. ಇವುಗಳಲ್ಲಿ ಕೆಲವು ಪತ್ರಿಕೆಗಳ ಹಾಗೂ ಕನ್ನಡ ಸಾಹಿತ್ಯ ಸಂಘಗಳ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಕತೆಗಳೂ ಇವೆ. ಇವುಗಳನ್ನು ಓದುವಾಗ ಕಂಡು ಬರುವ ಅಂಶವೆಂದರೆ ಹೆಚ್ಚಿನ ಕತೆಗಳು ನೈತಿಕ ನೆಲೆಗಟ್ಟಿನಲ್ಲಿ ವಿನ್ಯಾಸ ಪಡೆದು ಮನುಷ್ಯರೊಳಗಣ ಅನೈತಿಕತೆಯ ಹೂರಣವನ್ನು ಬಿಚ್ಚಿಡುವ ವಸ್ತುವನ್ನೊಳಗೊಂಡಿವೆ ಎಂಬುದು ವಿದಿತವಾಗುತ್ತದೆ. ಉದಾಹರಣೆಗೆ ‘ಮುರಿಯಿತು ಮಹಾಸೌಧ’ ಕತೆಯಲ್ಲಿ ಬರುವ ಎಲ್ಲರಿಂದಲೂ ಗೌರವ ಪೂರ್ವಕವಾಗಿ ಎಂದು ಸಂಬೋಧಿಸಲ್ಪಡುವ ಕಥಾನಾಯಕ ಚಿಕ್ಕಂದಿನಿಂದಲೂ ಲಂಪಟನಾಗಿ ಬೆಳೆದ ವ್ಯಕ್ತಿಯಾಗಿದ್ದು ನಂತರದಲ್ಲಿ ಈ ರಾಯರಿಗೆ ರಾಜೀವಿ (ಇಟ್ಟುಕೊಂಡಾಕೆ)ಯಲ್ಲಿ ಹುಟ್ಟಿದ ಮಗ ಸತೀಶ ಕೂಡಾ ಅದೇ ಚಾಳಿಯವನಾಗಿ ಕಾಲೇಜು ವಿದ್ಯಾಭ್ಯಾಸದ ಕಡೆಗೆ ನಿರ್ಲಕ್ಷ ವಹಿಸುತ್ತಾನೆ. ಹೀಗೆ ರಾಯರ ಧರ್ಮಪತ್ನಿಯಲ್ಲಿ ಹುಟ್ಟಿದ ಮಗಳು ಕುಸುಮಾಳ ಸ್ನೇಹವಾಗಿ ಅವಳು ಗರ್ಭಧರಿಸುತ್ತಾಳೆ. ಇದನ್ನು ತಿಳಿದ ತಾಯಿ ಗುಟ್ಟಿನಲ್ಲಿ ಮಗಳನ್ನು ಗದರಿಸುವಾಗ ಅದನ್ನು ಕೇಳಿದ ರಾಯರಿಗೆ ನಿಜ ವಿಚಾರ ತಿಳಿದು ಮನಸ್ಸಿಗೆ ಆಘಾತವಾಗುತ್ತದೆ. ಒಟ್ಟಾರೆಯಾಗಿ ರಾಯರ ಲಂಪಟತನಕ್ಕೆ ಅವರ ಸ್ವತಃ ಮಗಳೇ ಸತೀಶನ ಮೂಲಕ ಬಲಿಪಶುವಾಗುವ ಕಥಾವಸ್ತು ನೈಜ ಘಟನೆಯಂತೆ ಭಾಸವಾಗುತ್ತದೆ. ಕಥಾ ಸಂಕಲನದ ಹೆಚ್ಚಿನ ಕತೆಗಳು ನೈತಿಕತೆಯ ನೆಲೆಗಟ್ಟಿನಲ್ಲಿಯೇ ರೂಪ ಪಡೆದ ಕತೆಗಳಾಗಿವೆ. ಇದರಲ್ಲಿನ ಒಂದು ಗಮನಾರ್ಹವಾದ ಕತೆ ‘ರಾಜ ಕಡೆಗೂ ಮದುವೆಯಾಗಿಯೇ ಬಿಟ್ಟ’ ಜಾತಿ ಮತ ಮೀರಿದ ವಸ್ತುವನ್ನೊಳಗೊಂಡಿದೆ. ಶಾಲಾ ಶಿಕ್ಷಕನಾಗಿರುವ ಕಥಾ ನಾಯಕ ರಾಜಶೇಖರ ತನ್ನ ಮದುವೆಯ ಆತುರದಲ್ಲಿರುವಾಗ ಅವನ ಹಿರಿಯ ಸಹೋದ್ಯೋಗಿ ರೆಬೆಲ್ಲೊ ಮಾಸ್ತರರ ಸಲಹೆಯಂತೆ ತನ್ನ ಮದುವೆ ಯೋಚನೆ ಬಿಟ್ಟು ತಂಗಿಯ ಮದುವೆ ಮಾಡುತ್ತಾನೆ. ಇದಾದ ನಂತರ ಸ್ವಲ್ಪ ಸಮಯದಲ್ಲೇ ಅವನ ತಾಯಿ ತೀರಿ ಹೋಗಿ ಅವನು ಏಕಾಂಗಿಯಾಗುತ್ತಾನೆ. ಕ್ರಮೇಣ ಏಕಾಂಗಿತನ ಬೇಜಾರು ಬರಿಸಿದಾಗ ತುಂಬಾ ಯೋಚಿಸಿ ರೆಬೆಲ್ಲೊ ಮಾಸ್ತರರ ಹಿರಿಯ ಮಗಳನ್ನು ಮದುವೆಯಾಗುವ ನಿರ್ಧಾರ ಮಾಡಿ ರೆಬೆಲ್ಲೊ ಮಾಸ್ತರರಲ್ಲಿ ಈ ವಿಚಾರ ತಿಳಿಸುತ್ತಾನೆ. ಬಡತನದ ಕಾರಣ ಸಾಲಾಗಿ ಬೆಳೆದು ನಿಂತ ಹೆಣ್ಣು ಮಕ್ಕಳ ಮದುವೆ ಮಾಡಿಸಲಾಗದ ರೆಬೆಲ್ಲೊ ಮಾಸ್ತರರಿಗೆ ರಾಜಶೇಖರನ ನಿರ್ಧಾರ ಕೇಳಿ ಅಚ್ಚರಿಯ ಜತೆ ಆತನ ಕುರಿತು ಗೌರವ ಬರುತ್ತದೆ. ಮದುವೆ ನಡೆಯುತ್ತದೆ. ಇದೊಂದು ಅಂತರ್ಧರ್ಮೀಯ ಮದುವೆಯಾದರೂ ರೆಬೆಲ್ಲೊ ಮಾಸ್ತರರ ಹೊರೆಯನ್ನು ಇಳಿಸಿದ ರಾಜಶೇಖರನ ನಿರ್ಧಾರ ಓದುಗರಲ್ಲಿ ಒಂದು ತರಹ ಹಿತಭಾವವನ್ನುಂಟು ಮಾಡುತ್ತದೆ. ಒಟ್ಟಿನಲ್ಲಿ ಎಲ್ಲ ಕತೆಗಳಲ್ಲಿ ಒಂದಲ್ಲ ಒಂದು ಸಂದೇಶವಿರುವುದು ಓದಿದಾಗ ಅನುಭವಕ್ಕೆ ಬರುವ ಅಂಶ.

ಈ ಸಂಕಲನಕ್ಕೆ ಲೇಖಕ/ವಿಮರ್ಶಕ ಡಾ.ಜನಾರ್ದನ ಭಟ್ಟರ ವೌಲಿಕ ಮುನ್ನುಡಿ ಮೆರುಗು ನೀಡಿದೆ. ಮುನ್ನುಡಿಯಲ್ಲಿ 1963ರಲ್ಲಿ ಬಲ್ಲಾಳರು ಪ್ರಕಟಿಸಿದ ಕಥಾ ಸಂಕಲನ ‘ದತ್ತ ಪುತ್ರ’ಕ್ಕೆ ಮುಂಬಯಿ ಲೇಖಕ ಡಾ.ವ್ಯಾಸರಾವ್ ನಿಂಜೂರ್ ಉಲ್ಲೇಖಿಸಿದ ಬೆನ್ನುಡಿಯ ಮಾತುಗಳನ್ನು ಡಾ.ಜನಾರ್ದನ ಭಟ್ ನೆನಪಿಸಿಕೊಂಡಿದ್ದಾರೆ. ನಿಂಜೂರರು ಹೇಳಿದ್ದು ‘‘ಬಲ್ಲಾಳರ ಬರವಣಿಗೆಯ ವೈವಿಧ್ಯವೆಂದರೆ ಅವರ ನವಿರಾದ ಸರಳ ಶೈಲಿ ಹಾಗೂ ವಸ್ತುಗಳನ್ನು ಹೆಚ್ಚು ವಾಸ್ತವಿಕ ರೀತಿಯಲ್ಲಿ ನೋಡುವ ಅವರ ದೃಷ್ಟಿಕೋನ ಕತೆ ಇಲ್ಲದೆಯೇ ಕತೆ ಬರೆಯುವ ಈ ಯುಗದಲ್ಲಿ ಬಲ್ಲಾಳರು ಒಂದು ಅಪವಾದ. ಹೃದಯ ಮುಟ್ಟುವಂತೆ ಕತೆ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ’’. ಇನ್ನು ಜನಾರ್ದನ ಭಟ್ಟರ ಅಭಿಪ್ರಾಯದಂತೆ ಬಲ್ಲಾಳರ ಕತೆಗಳು ಭಾಗಲೋಡಿ ದೇವರಾಯರ ಕತೆಗಳಂತೆ ಐತಿಹ್ಯದ ನೆಲೆಯಿಂದ ವಿಸ್ತಾರ ಪಡೆದು ಪ್ರಸ್ತುತ ಸಂಸ್ಕೃತಿಯ ಉತ್ತಮವೆನಿಸಿಕೊಂಡ ಅಂಶಗಳನ್ನು ಹೇರಿಕೊಂಡು ವರ್ತಮಾನಕ್ಕೆ ದಾಟಿಸುವ ಯತ್ನವಾಗಿದೆ. ಐತಿಹ್ಯದ ಮಾದರಿಯಲ್ಲಿ ಬಲ್ಲಾಳರು ಬರೆದ ಕತೆಗಳಲ್ಲಿ ಅವರು ಅನುಸರಿಸಿದ ಕ್ರಮವು ಮಾದರಿಯಾಗಿದೆ. ಐತಿಹ್ಯಗಳನ್ನು ತಾನು ಹಿರಿಯರಿಂದ ಕೇಳಿ ತಿಳಿದುಕೊಂಡಿದ್ದಾಗಿ ಬಲ್ಲಾಳರು ಹೇಳಿಕೊಂಡಿದ್ದಾರೆ. ಈ ಐತಿಹ್ಯಗಳನ್ನು ಕಥನ ರೂಪದಲ್ಲಿ ತಂದಾಗ ಸರ್ವಜನತೆಯ ಸಮಾನತೆ ಹಾಗೂ ಜಾತಿ ಆಧಾರಿತ ಶ್ರೇಷ್ಠತೆಯ ವ್ಯಸನವನ್ನು ತಿರಸ್ಕರಿಸುವುದು ಇತ್ಯಾದಿ ಆಧುನಿಕ ಚಿಂತನೆಗಳಿಗೆ ಕತೆಗಳನ್ನು ಒಳಪಡಿಸಿರುವುದು ಬಲ್ಲಾಳರ ವೈಶಿಷ್ಟವೆಂದು ಡಾ.ಜನಾರ್ದನ ಭಟ್ಟರು ಹೇಳಿದ ಮಾತುಗಳಲ್ಲಿ ತಥ್ಯಾಂಶವಿದೆ. ಒಟ್ಟಾರೆಯಾಗಿ ಈ ಸಂಕಲನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುವಂತಾಗಿದೆ ಎಂಬುದನ್ನು ಊಹಿಸಬಹುದು.

ಕೆ.ಶಾರದಾ ಭಟ್

Writer - ಕೆ.ಶಾರದಾ ಭಟ್

contributor

Editor - ಕೆ.ಶಾರದಾ ಭಟ್

contributor

Similar News