ಈ ಆಹಾರಕ್ರಮ ಅನುಸರಿಸಿ ಮತ್ತು ಮೂತ್ರಪಿಂಡ ರೋಗಗಳಿಂದ ದೂರವಿರಿ

Update: 2019-07-28 13:22 GMT

ಮೂತ್ರಪಿಂಡ ರೋಗಗಳು ಅವುಗಳ ಕಾರ್ಯ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮಗಳನ್ನುಂಟು ಮಾಡುತ್ತವೆ. ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮೂತ್ರಪಿಂಡಗಳ ಆರೋಗ್ಯವನ್ನು ಹೆಚ್ಚಿಸಬಹುದಾಗಿದೆ.

  ರಕ್ತವನ್ನು ಸೋಸಿ ತ್ಯಾಜ್ಯಗಳನ್ನು ಶರೀರದಿಂದ ಹೊರಕ್ಕೆ ಹಾಕುವುದು ಮೂತ್ರಪಿಂಡಗಳ ಪ್ರಮುಖ ಕೆಲಸವಾಗಿದೆ. ಅವು ಶರೀರದಲ್ಲಿ ದ್ರವ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಅವುಗಳಲ್ಲಿರುವ ಸಣ್ಣ ಸಣ್ಣ ಸೋಸುಕಗಳು ನಿರಂತರವಾಗಿ ರಕ್ತವನ್ನು ಶುದ್ಧೀಕರಿಸುವ ಕಾರ್ಯವನ್ನು ಮಾಡುತ್ತಿರುತ್ತವೆ. ಮೂತ್ರಪಿಂಡಗಳು ಅನಾರೋಗ್ಯಕ್ಕೀಡಾದರೆ ಶರೀರದ ಚಟುವಟಿಕೆಗಳೂ ಹದಗೆಡುತ್ತವೆ ಮತ್ತು ದ್ರವಗಳ ಸ್ವರೂಪದಲ್ಲಿ ಅಸಮತೋಲನವುಂಟಾಗುತ್ತದೆ. ಕೆಲವು ಕೆಟ್ಟ ಚಟಗಳು ಮತ್ತು ಕಳಪೆ ಆಹಾರ ಮೂತ್ರಪಿಂಡಗಳ ಕೆಲಸವನ್ನು ನಿಧಾನಗೊಳಿಸುತ್ತವೆ. ಈ ಬಗ್ಗೆ ಕಾಳಜಿ ವಹಿಸದಿದ್ದರೆ ಮೂತ್ರಪಿಂಡಗಳಿಗೆ ಹಾನಿಯುಂಟಾಗಬಹುದು ಮತ್ತು ಮೂತ್ರಪಿಂಡ ಕಲ್ಲುಗಳಿಗೂ ಕಾರಣವಾಗಬಹುದು.

 ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸಬಹುದು. ಆಹಾರವು ಮೂತ್ರಪಿಂಡಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಬಹುದು,ಹೀಗಾಗಿ ಅವುಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಸರಿಯಾದ ಆಹಾರಗಳ ಆಯ್ಕೆ ಅಗತ್ಯವಾಗುತ್ತದೆ. ಮೂತ್ರಪಿಂಡಗಳಿಗೆ ಹಾನಿಯನ್ನು ತಡೆಯಬಲ್ಲ ಕೆಲವು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ.....

►ಸೋಡಾವನ್ನು ನಿವಾರಿಸಿ

 ಸೋಡಾ ಅಥವಾ ಕಾರ್ಬನೀಕೃತ ಪಾನೀಯಗಳು ಹಲವಾರು ವಿಧಗಳಲ್ಲಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ. ಸಕ್ಕರೆ ಬಳಸಿ ತಯಾರಾಗಿರುವ ಈ ಪಾನೀಯಗಳ ಸೇವನೆ ತಕ್ಷಣಕ್ಕೆ ಶರೀರಕ್ಕೆ ಶಕ್ತಿಯನ್ನು ನೀಡುತ್ತದೆ ನಿಜ,ಆದರೆ ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಸೋಡಾ ಕೂಡ ಮೂತ್ರಪಿಂಡಗಳಿಗೆ ಕೆಟ್ಟದ್ದನ್ನು ಮಾಡುತ್ತದೆ. ಸೋಡಾದ ಬದಲಿಗೆ ಲಿಂಬೆ ಪಾನಕ ಅಥವಾ ಎಳನೀರನ್ನು ಸೇವಿಸಬಹುದು.

►ಉಪ್ಪಿನ ಸೇವನೆಯನ್ನು ತಗ್ಗಿಸಿ

ಅತಿಯಾದ ಸೋಡಿಯಂ ಸೇವನೆಯು ಮೂತ್ರಪಿಂಡ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಉಪ್ಪಿನ ಸೇವನೆಯನ್ನು ತಕ್ಷಣವೇ ಕಡಿಮೆ ಮಾಡುವಂತೆ ವೈದ್ಯರು ಮೂತ್ರಪಿಂಡ ರೋಗಿಗಳಿಗೆ ಸೂಚಿಸುತ್ತಾರೆ. ನಿಮ್ಮ ಮೂತ್ರಪಿಂಡಗಳು ನಿಮ್ಮ ಬದುಕಿನುದ್ದಕ್ಕೂ ಸೂಕ್ತವಾಗಿ ಕಾರ್ಯ ನಿರ್ವಹಿಸಬೇಕೆಂದರೆ ನೀವು ಕಡಿಮೆ ಉಪ್ಪನ್ನು ಸೇವಿಸಬೇಕು. ಹೀಗಾಗಿ ಊಟಕ್ಕೆ ಕುಳಿತಾಗ ಉಪ್ಪನ್ನು ಹತ್ತಿರವಿಟ್ಟುಕೊಳ್ಳಬೇಡಿ. ಉಪ್ಪಿನ ಕಡಿಮೆ ಸೇವನೆಯು ನಿಮ್ಮ ಶರೀರದಲ್ಲಿಯ ದ್ರವಗಳ ಸಮತೋಲವನ್ನು ಉತ್ತಮಗೊಳಿಸುತ್ತದೆ.

►ಸಂಸ್ಕರಿತ ಆಹಾರಗಳಿಂದ ದೂರವಿರಿ

ಸಂಸ್ಕರಿತ ಆಹಾರಗಳು ಯಾವುದೇ ರೀತಿಯಿಂದಲೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆ ಆಹಾರಕ್ಕಿಂತ ಸಂಸ್ಕರಿತ ಆಹಾರಗಳನ್ನೇ ನೀವು ಹೆಚ್ಚು ನೆಚ್ಚಿಕೊಂಡಿದ್ದರೆ ನೀವಾಗಿಯೇ ಹಲವಾರು ಅನಾರೋಗ್ಯಗಳನ್ನು ಆಹ್ವಾನಿಸುತ್ತಿದ್ದೀರಿ ಎಂದೇ ಅರ್ಥ. ಸಂಸ್ಕರಿತ ಆಹಾರಗಳಲ್ಲಿ ಕೊಬ್ಬು,ಕೊಲೆಸ್ಟ್ರಾಲ್ ಮತ್ತು ಉಪ್ಪು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹೀಗಾಗಿ ಅತಿಯಾದ ಸಂಸ್ಕರಿತ ಆಹಾರಗಳ ಸೇವನೆ ನಿಮ್ಮ ಹೃದಯ,ಜೀರ್ಣಾಂಗ ಮತ್ತು ಮೂತ್ರಪಿಂಡಗಳ ಆರೋಗ್ಯಕ್ಕೆ ಒಳ್ಳೆಯದಲ್ಲ.

►ಹೆಚ್ಚು ದ್ರವಗಳನ್ನು ಸೇವಿಸಿ

  ನೀವು ದ್ರವಗಳನ್ನು ಎಷ್ಟು ಸೇವಿಸುತ್ತೀರಿ ಎನ್ನುವುದೂ ನಿಮ್ಮ ಮೂತ್ರಪಿಂಡಗಳ ಆರೋಗ್ಯವನ್ನು ನಿರ್ಧರಿಸುತ್ತದೆ. ನೀರು ಶರೀರದಲ್ಲಿಯ ನಂಜು ಅಥವಾ ವಿಷವನ್ನು ಹೊರಕ್ಕೆ ಹಾಕಲು ನೆರವಾಗುತ್ತದೆ. ಹೆಚ್ಚಿನ ದ್ರವಗಳ ಸೇವನೆ ಮೂತ್ರಪಿಂಡ ರೋಗಗಳಿಗೆ ತುತ್ತಾಗುವ ಅಪಾಯವನ್ನು ತಗ್ಗಿಸುತ್ತದೆ. ಮೂತ್ರಪಿಂಡಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಹಣ್ಣುಗಳ ರಸದಿಂದ ಹಿಡಿದು ಎಳನೀರಿನವರೆಗೆ ಯಾವುದೇ ಪಾನೀಯವನ್ನು ಸೇವಿಸಬಹುದಾಗಿದೆ. ಶರೀರದ ವಿವಿಧ ಚಟುವಟಿಕೆಗಳು ಸುಗಮವಾಗಿ ನಡೆಯಲು ನೀರನ್ನು ಹೆಚ್ಚೆಚ್ಚು ಸೇವಿಸುವುದು ಅಗತ್ಯ.

►ಆಹಾರದಲ್ಲಿ ಹಣ್ಣುಗಳು ಮತು ತರಕಾರಿಗಳು ಹೆಚ್ಚಿರಲಿ

ಹಣ್ಣುಗಳು ಮತ್ತು ತರಕಾರಿಗಳು ಪೋಷಕಾಂಶಗಳ ಆಗರವಾಗಿರುವುದರಿಂದ ಅವುಗಳನ್ನು ಪ್ರತಿಯೊಬ್ಬರೂ ಸೇವಿಸಬೇಕು. ಮೂತ್ರಪಿಂಡಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನೈಸರ್ಗಿಕವಾಗಿ ಕಡಿಮೆ ಸೋಡಿಯಂ ಹೊಂದಿರುವ ಅಥವಾ ಸೋಡಿಯಂ ರಹಿತ ಹಣ್ಣುಗಳು ಮತ್ತು ತರಕಾರಿಗಳನ್ನು ಆಯ್ದುಕೊಳ್ಳಬೇಕು. ಕಾಲಿಫ್ಲವರ್,ಬ್ಲೂಬೆರ್ರಿ,ದ್ರಾಕ್ಷಿ,ಬೆಳ್ಳುಳ್ಳಿ,ಕ್ಯಾಬೇಜ್,ಬಳ್ಳಿ ಮೆಣಸು,ಈರುಳ್ಳ್ಳಿ,ಮೂಲಂಗಿ,ಅನಾನಸ್ ಇತ್ಯಾದಿಗಳು ಮೂತ್ರಪಿಂಡಗಳ ಆರೋಗ್ಯಕ್ಕೆ ಪೂರಕವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News