ಸ್ಪೀಕರ್ ತೀರ್ಪು ನ್ಯಾಯ ಸಮ್ಮತವಲ್ಲ: ಬಿಜೆಪಿ ಶಾಸಕ ಗೋವಿಂದ ಕಾರಜೋಳ
ಬೆಂಗಳೂರು, ಜು.28: ಸುಪ್ರೀಂಕೋರ್ಟ್ ಆದೇಶದಂತೆ ಶಾಸಕರು ಮತ್ತು ಬಂದು ಕ್ರಮಬದ್ಧವಾಗಿ ರಾಜೀನಾಮೆ ಕೊಟ್ಟಿದ್ದಾರೆ. ಆದರೂ, 14 ಶಾಸಕರನ್ನು ಅನರ್ಹತೆಗೊಳಿಸಿ ಸ್ಪೀಕರ್ ನೀಡಿರುವ ತೀರ್ಪು ನ್ಯಾಯ ಸಮ್ಮತವಲ್ಲ. ನಾವು ಈ ತೀರ್ಪನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಹಿರಿಯ ಶಾಸಕ ಗೋವಿಂದ ಕಾರಜೋಳ ತಿಳಿಸಿದರು.
ರವಿವಾರ ನಗರದ ಡಾಲರ್ಸ್ ಕಾಲನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಪೀಕರ್ ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗುತ್ತಾರೆ ಎಂದರು.
ಶಾಸಕರು ತಮ್ಮ ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಅದನ್ನು ಪರಿಗಣಿಸದೆ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ರಮೇಶ್ ಕುಮಾರ್ ತಪ್ಪು ನಿರ್ಧಾರ ಮಾಡಿದ್ದಾರೆ. ರಾಜೀನಾಮೆ ಕೊಟ್ಟಿರುವ ಎಲ್ಲ ಶಾಸಕರನ್ನು ಅನರ್ಹಗೊಳಿಸಿರುವುದು ಖಂಡನೀಯ ಎಂದು ಅವರು ಹೇಳಿದರು.
ಸರಕಾರಿ ರಜಾ ದಿನವಾಗಿದ್ದರೂ ತುರ್ತು ಸುದ್ದಿಗೋಷ್ಠಿ ಕರೆದು ಈ ರೀತಿ ನಿರ್ಧಾರ ಕೈಗೊಂಡಿರುವುದು ತಪ್ಪು. ರಾಜೀನಾಮೆ ನೀಡಿರುವುದು ಆ ಶಾಸಕರ ಹಕ್ಕು, ಅದನ್ನು ಯಾಕೆ ಸ್ಪೀಕರ್ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಗೋವಿಂದ ಕಾರಜೋಳ ಪ್ರಶ್ನಿಸಿದರು.
ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ರಮೇಶ್ ಕುಮಾರ್ ಇತಿಹಾಸ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದರು. ಹಾಗಾಗಿ, ಈ ರೀತಿಯ ತಪ್ಪು ನಿರ್ಧಾರ ಕೈಗೊಂಡಿದ್ದಾರೆ. ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದಾಗ, ಅವರು ಮತ್ತೆ ವಾಪಸ್ ಬಂದು ಕ್ರಮಬದ್ಧವಾಗಿ ರಾಜೀನಾಮೆ ನೀಡಿದ್ದಾರೆ. ಆದರೆ ತರಾತುರಿಯಲ್ಲಿ ಅನರ್ಹ ಮಾಡಿದ್ದಾರೆ ಎಂದರು.
ಈ ತೀರ್ಪನ್ನು ಜನರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ. ನ್ಯಾಯಾಲಯದಲ್ಲಿ ಶಾಸಕರಿಗೆ ಗೆಲುವು ಸಿಗಲಿದೆ. ಶಾಸಕರು ಸಮರ್ಥರಿದ್ದು, ಕಾನೂನು ಹೋರಾಟ ಮಾಡುತ್ತಾರೆ ಎಂದು ಅವರು ಹೇಳಿದರು.
ಬಿಜೆಪಿ ಶಾಸಕ ಎ.ಎಸ್.ಪಾಟೀಲ್(ನಡಹಳ್ಳಿ) ಮಾತನಾಡಿ, ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕಿತ್ತು. ಅವರನ್ನು ಅನರ್ಹ ಗೊಳಿಸಿರುವುದು ಸಂವಿಧಾನ ಬಾಹಿರ. ಸುಪ್ರೀಂಕೋರ್ಟ್‌ನಲ್ಲಿ ಸ್ಪೀಕರ್ ಕೊಟ್ಟಿರುವ ತೀರ್ಪು ಒಂದು ಗಂಟೆಯೂ ನಿಲ್ಲುವುದಿಲ್ಲ ಎಂದರು.
ಶನಿವಾರ ಹಾಗೂ ರವಿವಾರ ನಾನು ಕೆಲಸ ಮಾಡಲ್ಲ ಎಂದು ಸ್ಪೀಕರು ಹೇಳುತ್ತಾರೆ. ಆದರೆ, ಇವತ್ತು ರವಿವಾರ ಇದ್ದರೂ ತರಾತುರಿಯಲ್ಲಿ ಯಾಕೆ ಸುದ್ದಿಗೋಷ್ಠಿ ಮಾಡಿದ್ದಾರೆ? ಸ್ಪೀಕರ್ ನಡೆ ಅನುಮಾನಸ್ಪದವಾಗಿದೆ ಎಂದು ಅವರು ಹೇಳಿದರು.