ಉಗ್ರರ ದಾಳಿ ಮಾಹಿತಿ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಹೆಚ್ಚುವರಿ ಪಡೆ ನಿಯೋಜನೆ : ಅಜಿತ್ ದೋವಲ್ ಸ್ಪಷ್ಟನೆ

Update: 2019-07-28 18:03 GMT

ಹೊಸದಿಲ್ಲಿ, ಜು.28: ಕಾಶ್ಮೀರ ಕಣಿವೆಯಲ್ಲಿ ಬೃಹತ್ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರರು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ರವಿವಾರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಸಂಸ್ಥೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಪಾಕಿಸ್ತಾನದ ಸೇನಾಪಡೆಯ ಬೆಂಬಲದಿಂದ ಭಾರತದಲ್ಲಿ ಬೃಹತ್ ದಾಳಿ ನಡೆಸಲು ಭಯೋತ್ಪಾದಕ ಸಂಘಟನೆಗಳು ಯೋಜನೆ ರೂಪಿಸಿವೆ ಎಂಬ ಮಾಹಿತಿಯಂತೆ ಶನಿವಾರ ಸರಕಾರ ಕಾಶ್ಮೀರದಲ್ಲಿ ಅರೆ ಸೇನಾಪಡೆಯ 100 ತುಕಡಿಗಳನ್ನು ನಿಯೋಜಿಸಿದೆ. ಜಮ್ಮು ಕಾಶ್ಮೀರದಲ್ಲಿ ಪಂಚಾಯತ್ ಚುನಾವಣೆ ಯಶಸ್ವಿಯಾಗಿ ನಡೆದಿರುವುದು ಹಾಗೂ ಅಮರನಾಥ ಯಾತ್ರೆ ಶಾಂತರೀತಿಯಿಂದ ನಡೆದಿರುವುದನ್ನು ಸಹಿಸದ ಕೆಲವು ಭಯೋತ್ಪಾದಕ ಸಂಘಟನೆಗಳು ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ತೀವ್ರಗೊಳಿಸಲು ನಿರ್ಧರಿಸಿವೆ ಎಂದು ಮಾಹಿತಿ ದೊರೆತಿದೆ. ಈ ಕಾರಣದಿಂದ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿರುವುದಾಗಿ ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 35ಎ ಪರಿಚ್ಛೇದವನ್ನು ರದ್ದುಗೊಳಿಸುವ ನಿರ್ಧಾರದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಭಾರೀ ಪ್ರತಿಭಟನೆ ನಡೆಯುವ ಸಾಧ್ಯತೆಯಿರುವುದರಿಂದ ಹೆಚ್ಚುವರಿ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂಬ ವರದಿಯನ್ನು ದೋವಲ್ ನಿರಾಕರಿಸಿದ್ದಾರೆ. ಉತ್ತರ ಕಾಶ್ಮೀರದಲ್ಲಿ ಭದ್ರತಾ ಸಿಬಂದಿಯ ಕೊರತೆಯಿದ್ದು 10 ಸಾವಿರ ಯೋಧರನ್ನು ಕಳಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿತ್ತು ಎಂದು ಜಮ್ಮು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News