ಕೇಬಲ್ ಕಾರ್‌ನಿಂದ ಕೆಳಕ್ಕೆ ಜಿಗಿದ ಭಯಗ್ರಸ್ತ ಫುಟ್ಬಾಲ್ ಆಟಗಾರರು

Update: 2019-07-28 19:14 GMT

ಪಣಜಿ, ಜು.28: ಟರ್ಕಿಯಲ್ಲಿ ಕೇಬಲ್ ಕಾರ್‌ನಲ್ಲಿ ತೆರಳುತ್ತಿದ್ದ ವೇಳೆ ಭಯಗೊಂಡ ಭಾರತದ 19 ವರ್ಷದೊಳಗಿನ ಫುಟ್ಬಾಲ್ ತಂಡದ ಇಬ್ಬರು ಆಟಗಾರರು ಕೆಳಕ್ಕೆ ಜಿಗಿದ ಘಟನೆ ನಡೆದಿದ್ದು ಆಟಗಾರರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಸ್ಥಳೀಯ ಕ್ಲಬ್ ವಿರುದ್ಧದ ಲೀಗ್ ಮಟ್ಟದ ಹಣಾಹಣಿಗೂ ಮೊದಲು ಕೋಚ್ ಫ್ಲಾಯ್ಡಾ ಪಿಂಟೊ ಯುವ ತಂಡಕ್ಕೆ ವಿರಾಮ ನೀಡಿದ್ದರು. ಆ ದಿನವನ್ನು ಆಟಗಾರರು ತಾವು ತಂಗಿದ್ದ ಹೋಟೆಲ್‌ಗೆ ತಾಗಿಕೊಂಡಿದ್ದ ಮನರಂಜನಾ ಪಾರ್ಕ್‌ನಲ್ಲಿ ಕಳೆಯಲು ನಿರ್ಧರಿಸಿದ್ದರು. ಆದರೆ ತಾವು ತೆರಳುತ್ತಿದ್ದ ಕೇಬಲ್ ಕಾರ್ ಮಧ್ಯದಲ್ಲಿ ನಿಂತಾಗ ಭಯಗೊಂಡ ಇಬ್ಬರು ಆಟಗಾರರು ಕೆಳಗೆ ಜಿಗಿದಿದ್ದಾರೆ. ಘಟನೆಯಲ್ಲಿ ಆಟಗಾರರು ಕೂದಲೆಳೆಯ ಮೂಳೆ ಮುರಿತಕ್ಕೊಳಗಾಗಿದ್ದು ಹದಿನೈದು ದಿನ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ತಂಡದ ವೈದ್ಯರು ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಎಎಫ್‌ಸಿ ಅಂಡರ್ 19 ಚಾಂಪಿಯನ್‌ಶಿಪ್ ಅರ್ಹತಾ ಪಂದ್ಯಗಳಿಗೆ ಸಿದ್ಧತೆ ನಡೆಸಲು ಭಾರತೀಯ ಅಂಡರ್ 19 ತಂಡ ಸದ್ಯ ಟರ್ಕಿಗೆ ತೆರಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News