ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಹಲವಾರು ಉದ್ಯೋಗಗಳಿಗೆ ವಿದೇಶಿಯರ ನೇಮಕಾತಿ ನಿಷೇಧಿಸಲಿರುವ ಸೌದಿ ಅರೇಬಿಯಾ

Update: 2019-07-29 18:20 GMT

ರಿಯಾದ್, ಜು.29: ವರ್ಷಾಂತ್ಯದ ವೇಳೆಗೆ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿಯ ಹಲವಾರು ಉದ್ಯೋಗಗಳಿಗೆ ವಿದೇಶಿಯರ ನೇಮಕಾತಿಯನ್ನು ನಿಷೇಧಿಸಲು ಮತ್ತು ಅವುಗಳನ್ನು ತನ್ನ ಪ್ರಜೆಗಳಿಗೆ ಮೀಸಲಾಗಿಸಲು ಸೌದಿ ಅರೇಬಿಯಾ ಯೋಜಿಸುತ್ತಿದೆ.

 ಶುಕ್ರವಾರ ಕಾರ್ಮಿಕ ಸಚಿವಾಲಯವು ಪ್ರಕಟಿಸಿರುವ ಸರಕಾರದ ನಿರ್ಧಾರವು ರೆಸಾರ್ಟ್‌ಗಳು, ತ್ರಿತಾರಾ ಮತ್ತು ಹೆಚ್ಚಿನ ದರ್ಜೆಯ ಹೋಟೆಲ್‌ಗಳು ಹಾಗೂ ಚತುರ್ತಾರಾ ಮತ್ತು ಹೆಚ್ಚಿನ ದರ್ಜೆಯ ಹೋಟೆಲ್ ಅಪಾರ್ಟ್‌ಮೆಂಟ್‌ಗಳಿಗೆ ಅನ್ವಯಿಸಲಿದೆ.

ಫ್ರಂಟ್ ಡೆಸ್ಕ್ ಉದ್ಯೋಗದಿಂದ ಹಿಡಿದು ಆಡಳಿತದವರೆಗೆ ವಿವಿಧ ಹುದ್ದೆಗಳಿಗೆ ಸೌದಿ ಪ್ರಜೆಗಳ ನೇಮಕವು ಕಡ್ಡಾಯವಾಗಿದ್ದು,ಚಾಲಕರು,ದ್ವಾರಪಾಲಕರು ಮತ್ತು ಪೋರ್ಟರ್‌ಗಳ ಹುದ್ದೆಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ರೆಸ್ಟೋರಂಟ್ ಸ್ವಾಗತಕಾರರು ಮತ್ತು ಹೆಲ್ತ್ ಕ್ಲಬ್ ಸುಪರವೈಸರ್ ಹುದ್ದೆಗಳಿಗೂ ಸೌದಿ ಪ್ರಜೆಗಳನ್ನು ನೇಮಿಸಬೇಕಿದೆ.

ಶೈಶವಾವಸ್ಥೆಯಲ್ಲಿರುವ ತನ್ನ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತಿರುವ ಸೌದಿ ಅರೇಬಿಯಾ ತನ್ನ ಪ್ರಜೆಗಳ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲೂ ಹೆಣಗಾಡುತ್ತಿದೆ. ನಿರುದ್ಯೋಗದ ಪ್ರಮಾಣ ಕಳೆದ ವರ್ಷ ಶೇ.13ಕ್ಕೇರಿದೆ.

 ಹೋಟೆಲ್ ಉದ್ಯಮವು ಖಾಸಗಿ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳಲ್ಲಿ ಪ್ರಾಬಲ್ಯ ಹೊಂದಿರುವ ವಿದೇಶಿಯರ ಬದಲಿಗೆ ತನ್ನ ಪ್ರಜೆಗಳನ್ನು ನೇಮಕಗೊಳಿಸುವ ಉದ್ದೇಶದ ‘ಸೌದೀಕರಣ’ದ ಕಟ್ಟುನಿಟ್ಟಿನ ನೀತಿಗಳನ್ನು ಎದುರಿಸುತ್ತಿರುವ ಇತ್ತೀಚಿನ ಕ್ಷೇತ್ರವಾಗಿದೆ.

ಅಗ್ಗದ ವಿದೇಶಿ ಕಾರ್ಮಿಕ ಪಡೆಯನ್ನು ಅತಿಯಾಗಿ ನೆಚ್ಚಿಕೊಂಡಿರುವ ಈ ದೇಶದಲ್ಲಿ ಸೌದಿಗಳಿಗೆ ಉದ್ಯೋಗಗಳ ಸೃಷ್ಟಿಗಾಗಿ ಇಂತಹ ನೀತಿಗಳು ಅಗತ್ಯವಾಗಿವೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ಸೌದೀಕರಣದಿಂದ ವೇತನ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಉತ್ಪಾದಕತೆ ಕಡಿಮೆಯಾಗುತ್ತದೆ ಎಂದು ಕೆಲವು ಉದ್ಯಮಗಳು ದೂರಿಕೊಂಡಿವೆ.

ಡಿ.29ಕ್ಕೆ ಹೊಂದಿಕೆಯಾಗುವ ಇಸ್ಲಾಮಿಕ್ ಕ್ಯಾಲೆಂಡರ್ ದಿನಾಂಕದಿಂದ ಈ ನಿರ್ಧಾರವು ಜಾರಿಗೊಳ್ಳಲಿದೆ. ಹಲವಾರು ಹೋಟೆಲ್‌ಗಳು ಇತ್ತೀಚಿನ ವರ್ಷಗಳಲ್ಲಿ ಫ್ರಂಟ್ ಆಫೀಸ್ ಹುದ್ದೆಗಳಿಗೆ ಸೌದಿ ಪ್ರಜೆಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News